ಉರಿಗೌಡ- ನಂಜೇಗೌಡ ವಿವಾದ: ಸುಳ್ಳು ಹಬ್ಬಿಸುವವರ ವಿರುದ್ಧ ನಿರ್ಮಲಾನಂದನಾಥ ಶ್ರೀ ಚಳುವಳಿ ಕೈಗೊಳ್ಳಲಿ: ಡಿಕೆ ಶಿವಕುಮಾರ್
ಟಿಪ್ಪು ಸುಲ್ತಾನ್ ಅವರನ್ನು ಉರಿಗೌಡ, ನಂಜೇಗೌಡ ಕೊಂದಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಅವರ ಜತೆ ಚರ್ಚೆ ನಡೆಸಿ ರಾಜಿ ಮಾಡಿಕೊಳ್ಳಬೇಡಿ ಎಂದು ನಿರ್ಮಲಾನಂದನಾಥ ಸ್ವಾಮೀಜಿಗೆ ಡಿಕೆಶಿ ಮನವಿ ಮಾಡಿದರು.
ಬೆಂಗಳೂರು, ಮಾರ್ಚ್ 20: ಉರಿಗೌಡ, ನಂಜೇಗೌಡರ ಬಗ್ಗೆ ಕಲ್ಪಿತ ಕಥೆ ಸೃಷ್ಟಿಸಿ ಇತಿಹಾಸ ಕೆದಕುವ ಯತ್ನವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಟಿಪ್ಪು ಸುಲ್ತಾನ್ ಅವರನ್ನು ಉರಿಗೌಡ, ನಂಜೇಗೌಡ ಕೊಂದಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಅವರ ಜತೆ ಚರ್ಚೆ ನಡೆಸಿ ರಾಜಿ ಮಾಡಿಕೊಳ್ಳಬೇಡಿ ಎಂದು ಮಂಡ್ಯದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮನವಿ ಮಾಡಿದರು.
ಕರ್ನಾಟಕದಲ್ಲಿ ಇತರ ಸಮುದಾಯಗಳ ನಾಯಕರು ಹಾಗೂ ಕನ್ನಡಪರ ಸಂಘಟನೆಗಳೊಂದಿಗೆ ಸೇರಿ ನಿರ್ಮಲಾನಂದನಾಥ ಸ್ವಾಮೀಜಿ ಅವರು ಚಳುವಳಿಯನ್ನು ಕೈಗೊಳ್ಳಬೇಕು. 'ಇತಿಹಾಸವನ್ನು ತಿದ್ದುವ ಮತ್ತು ಸಮಾಜಕ್ಕೆ ತಪ್ಪು ಸಂದೇಶವನ್ನು ನೀಡುವ' ಕೃತ್ಯಗಳ ವಿರುದ್ಧ ಹೋರಾಟ ನಡೆಸಬೇಕು ಎಂದು ಹೇಳಿದರು.

ಟಿಪ್ಪು ಸುಲ್ತಾನ್ ಅವರ ಜೀವನ ಮತ್ತು ಸಾವಿನ ಬಗ್ಗೆ ಸ್ಪಷ್ಟ ಇತಿಹಾಸವಿದೆ. ಆದರೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ್ ಮತ್ತು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಅವರು ತಪ್ಪು ಕಲ್ಪನೆಯ ಇತಿಹಾಸವನ್ನು ಪ್ರಸ್ತುತಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದೂ ಡಿಕೆ ಶಿವಕುಮಾರ್ ಆರೋಪಿಸಿದರು.
200 ವರ್ಷಗಳ ಹಿಂದೆ ಟಿಪ್ಪು ಸುಲ್ತಾನ್‌ರನ್ನು ಬ್ರಿಟಿಷರು ಕೊಂದರು. ಆದರೆ ಈಗ ಬಿಜೆಪಿಯವರು ಉರಿಗೌಡ ಮತ್ತು ನಂಜೇಗೌಡ ಅವರನ್ನು ಕೊಂದರು ಎಂದು ಹೇಳುವ ಮೂಲಕ ಇತಿಹಾಸಕ್ಕೆ ಹೊಸ ತಿರುವು ನೀಡಲು ಮುಂದಾಗಿದ್ದಾರೆ ಎಂದು ಶಿವಕುಮಾರ್ ಹೇಳಿದರು.

'ನಾವು ಕೂಡ ಟಿಪ್ಪು ಸುಲ್ತಾನ್ ಕುರಿತ ಇತಿಹಾಸವನ್ನು ಓದಿದ್ದೇವೆ. ಉರಿಗೌಡ, ನಂಜೇಗೌಡ ಅವರಂತಹ ವ್ಯಕ್ತಿಗಳು ಅಸ್ತಿತ್ವದಲ್ಲಿಲ್ಲ. ಇದು ಬಿಜೆಪಿ ನಾಯಕರ ಕಲ್ಪನೆ. ಈಗ ಅವರು ಕಲ್ಪತ ಕಥೆಯನ್ನೇ ಚಿತ್ರ ಮಾಡಲು ಬಯಸುತ್ತಾರೆ' ಎಂದು ಶಿವಕುಮಾರ್ ತಿಳಿಸಿದರು.
ನಿರ್ಮಲಾನಂದನಾಥ ಸ್ವಾಮೀಜಿಯವರು ಇಂತಹ ಕೃತ್ಯಗಳನ್ನು ವಿರೋಧಿಸಬೇಕು. ವಿವಿಧ ಸಮುದಾಯಗಳ ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರೊಂದಿಗೆ ಚಳುವಳಿ ನಡೆಸಬೇಕು ಎಂದು ಡಿಕೆಶಿ ಒತ್ತಾಯಿಸಿದರು.
'ಬಿಜೆಪಿ ನಾಯಕರ ಕೃತ್ಯಗಳು ಇತಿಹಾಸವನ್ನು ಹಾಳು ಮಾಡುತ್ತಿವೆ. ಆ ಮೂಲಕ ಹಿಂದೂ ವಿರೋಧಿ ಕೃತ್ಯವನ್ನು ಬಿಜೆಪಿಯವರು ಎಸಗುತ್ತಿದ್ದಾರೆ. ಬಿಜೆಪಿಯ ವಾಟ್ಸಾಪ್ ವಿಶ್ವವಿದ್ಯಾನಿಲಯವು ತಪ್ಪು ಇತಿಹಾಸವನ್ನು ಪ್ರಚಾರ ಮಾಡುತ್ತಿದೆ' ಎಂದು ತಿಳಿಸಿದರು.

ಚಿತ್ರದ ನಿರ್ಮಾಪಕ ಅಥವಾ ನಿರ್ದೇಶಕರೊಂದಿಗೆ ಸ್ವಾಮೀಜಿಗಳು ಮಾತನಾಡಬಾರದು. ಯಾವುದೇ ರಾಜಿ ಮಾಡಿಕೊಳ್ಳಬಾರದು. ನಾನು ಶ್ರೀಗಳೊಂದಿಗೆ ಮಾತುಕತೆ ನಡೆಸಿದ್ದೇನೆ. ಅವರಿಗೆ ದೂರವಾಣಿ ಮೂಲಕ ಮತ್ತು ಮಾಧ್ಯಮಗಳ ಮೂಲಕ ಮನವಿ ಮಾಡುತ್ತಿದ್ದೇನೆ ಎಂದು ಹೇಳಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರಿಗೆ ಭರವಸೆ ನೀಡುವುದಾಗಿ ಘೋಷಿಸಿದ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಾಬರಿಗೊಂಡಿದ್ದಾರೆ ಎಂದು ಶಿವಕುಮಾರ್ ಹೇಳಿದರು.
ಬೊಮ್ಮಾಯಿ ಅವರು ಈ ಹಿಂದೆಯೇ ಜಾರಿಯಾಗಬೇಕಿದ್ದ ಯೋಜನೆಗಳನ್ನು ಈಗ ಘೋಷಣೆ ಮಾಡುತ್ತಿದ್ದಾರೆ. ಈಗ ಯಾವಾಗ ಬೇಕಾದರೂ ಚುನಾವಣೆ ಘೋಷಣೆಯಾಗಬಹುದು. ಕಾಂಗ್ರೆಸ್ ಘೋಷಿಸಿದ ನಂತರ ಮಹಿಳೆಯರು ಮತ್ತು ಯುವಕರಿಗೆ ಕಾರ್ಯಕ್ರಮಗಳನ್ನು ಘೋಷಿಸುತ್ತಿದ್ದಾರೆ. ಬಿಜೆಪಿಯು ಕಾಂಗ್ರೆಸ್‌ನ ಆಲೋಚನಾ ಕ್ರಮವನ್ನು ಅನುಸರಿಸುತ್ತಿದೆ ಎಂದು ಅವರು ಹೇಳಿದರು.
'ಕಾಂಗ್ರೆಸ್ ಅಸೆಂಬ್ಲಿ ಚುನಾವಣೆಗೆ ಉತ್ತಮ ಪ್ರಚಾರ ನಡೆಸುತ್ತಿದೆ. ಆದರೆ, ಬಿಜೆಪಿ ಭ್ರಷ್ಟವಾಗಿದೆ. ಬಿಜೆಪಿ ದೇಶದಲ್ಲಿ ಅತ್ಯಂತ ಭ್ರಷ್ಟ ಸರ್ಕಾರವನ್ನು ನೀಡಿದೆ. ಅವರಿಗೆ ಯುವಕರು ಮತ್ತು ಮಹಿಳೆಯರ ಬಗ್ಗೆ ಯಾವುದೇ ಕಾಳಜಿ ಇಲ್ಲ' ಎಂದು ತಿಳಿಸಿದರು.
ಉದ್ಯೋಗದಲ್ಲಿ ಭ್ರಷ್ಟಾಚಾರದಿಂದ ಯುವಕರು ಅವಕಾಶ ವಂಚಿತರಾಗುತ್ತಿದ್ದಾರೆ. ಭ್ರಷ್ಟಾಚಾರದಲ್ಲಿ ಸಚಿವರು ಮತ್ತು ಅಧಿಕಾರಿಗಳು ಶಾಮೀಲಾಗಿದ್ದಾರೆ. ಶಾಸಕರು ಬ್ರೋಕರ್‌ಗಳಾಗಿ ವರ್ತಿಸಿದ್ದಾರೆ. ಬಿಜೆಪಿ ಭ್ರಷ್ಟಾಚಾರದ ಸಾಕ್ಷ್ಯವನ್ನು ಕೇಳುತ್ತಿತ್ತು. ಲೋಕಾಯುಕ್ತ ಅದನ್ನು ನೀಡಿದೆ ಎಂದು ಅವರು ಹೇಳಿದರು.












Click it and Unblock the Notifications