ಕನ್ನಡ ಉಳಿವಿಗೆ ಕರ್ನಾಟಕಕ್ಕೊಂದು ಬಲಿಷ್ಠ ಪ್ರಾದೇಶಿಕ ಪಕ್ಷ ಬೇಕು: ಪುರುಷೋತ್ತಮ ಬಿಳಿಮಲೆ
ಕನ್ನಡ ಭಾಷೆ ಉಳಿವು ಹಾಗೂ ಕನ್ನಡ ಭಾಷೆಯ ಅಸ್ಮಿತೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ ಅವರು Oneindia Kannada ದೊಂದಿಗೆ ಮುಕ್ತವಾಗಿ ಮಾತನಾಡಿದ್ದಾರೆ. ಸಂದರ್ಶನದ ವಿವರ ಇಲ್ಲಿದೆ.
ಪ್ರಶ್ನೆ: ಕರ್ನಾಟಕದಲ್ಲಿ ಕನ್ನಡ ಭಾಷೆಗೆ ವಲಸಿಗರಿಂದ ಪೆಟ್ಟು ಬೀಳುತ್ತಿದೆ, ಇದರ ತೀವ್ರತೆ ತಪ್ಪಿಸುವುದು ಹೇಗೆ ?
ಉತ್ತರ: ವಿಶ್ವದಲ್ಲಿ ಜಾಗತೀಕರಣ ಪ್ರಾರಂಭವಾದ ಮೇಲೆ ಭಾಷೆಗಳ ಸಾವು ಸಂಭವಿಸುತ್ತಿವೆ. 1947ರ ನಂತರ ಭಾರತದಲ್ಲಿ ಸುಮಾರು 254 ಭಾಷೆಗಳು ಕಾಣೆಯಾಗಿವೆ ಎಂದು ಕೇಂದ್ರ ಸರ್ಕಾರದ ವರದಿ ಹೇಳಿದೆ. 290 ಭಾಷೆಗಳು ಮುಂದಿನ 30 ವರ್ಷಗಳಲ್ಲಿ ಕಾಣೆಯಾಗಲಿವೆ. ಭಾಷೆಯ ಬೆಳವಣಿಗೆಗೆ ಜಾಗತೀಕರಣ ಪೆಟ್ಟು ಬಿದ್ದಿದೆ. ಇಂಗ್ಲಿಷ್ ಸೇರಿದಂತೆ ಕೆಲವೊಂದು ಭಾಷೆಗಳು ಬೆಳೆಯುತ್ತಿವೆ. ಸಣ್ಣ ಭಾಷೆಗಳು ಸಾವನ್ನಪ್ಪುತ್ತಿವೆ. ವಲಸೆ ಬಹಳ ಹಿಂದಿನಿಂದಲೂ ಇದೆ. ಆದರೆ ವಲಸೆಯನ್ನು ಸಂವಿಧಾನಾತ್ಮಕವಾಗಿ ತಡೆಯಲು ಸಾಧ್ಯವಿಲ್ಲ. ಭಾರತೀಯನಾಗಿ ಭಾರತದ ಯಾವುದೇ ಪ್ರದೇಶಕ್ಕಾದರೂ ಹೋಗಿ ನೆಲೆಸುವ ಅಧಿಕಾರವನ್ನು ಭಾರತದ ಸಂವಿಧಾನ ನೀಡಿದೆ. ಆದರೆ ಸರ್ಕಾರ ವಲಸೆ ನೀತಿ ರೂಪಿಸಬೇಕು.

ಪ್ರಶ್ನೆ: ಸೋಷಿಯಲ್ ಮೀಡಿಯಾದಲ್ಲಿ ವಲಸಿಗರು - ಕನ್ನಡಿಗರ ನಡುವಿನ ಭಾಷಾ ವಾಗ್ವಾದ, ವೈರಲ್ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ?
ಉತ್ತರ: ಭಾಷೆಗಳಿಗೆ ಸಂಬಂಧಿಸಿದಂತೆ ಅರಿವು, ತಿಳುವಳಿಕೆ ಹಾಗೂ ನನ್ನ ಭಾಷೆ ನಾಶವಾಗುತ್ತಿದೆ ಎನ್ನುವ ಪ್ರಜ್ಞೆ ಜನರಲ್ಲಿ ಈಗ ಮೂಡುತ್ತಿದೆ. ಈ ಸಂದರ್ಭದಲ್ಲಿ ಬಿಕ್ಕಟ್ಟುಗಳು ಮೂಡುವುದು ಸಹಜ. ಇದಕ್ಕೊಂದು ಚಾರಿತ್ರಿಕ ಕಾರಣ ಇದೆ. ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಮತ್ತು ಸಾರ್ವಜನಿಕ ವಲಯದಲ್ಲಿ ಚರ್ಚೆ ಮತ್ತು ವೈರಲ್ ಆಗುತ್ತಿರುವ ವಿಡಿಯೋಗಳ ಹಿಂದೆ ಭಾಷಾ ಪ್ರಜ್ಞೆ ಇದೆ. ಈಗ ಜನ ಕನ್ನಡ ಭಾಷೆಯ ಹಿಂದೆಗಿಂತಲೂ ಹೆಚ್ಚು ಪ್ರಜ್ಞಾವಂತರಾಗಿದ್ದಾರೆ.
ಪ್ರಶ್ನೆ: ವಲಸೆ ತಡೆಯಲು ಸಾಧ್ಯವಿಲ್ಲ ಎನ್ನುವುದಾದರೆ ಕರ್ನಾಟಕ ಸರ್ಕಾರ ವಲಸೆ ನೀತಿ ಯಾಕೆ ರೂಪಿಸಬಾರದು ?
ಉತ್ತರ: ವಲಸೆ ನೀತಿಯನ್ನು ಖಂಡಿತವಾಗಿಯೂ ಸರ್ಕಾರಗಳು ರೂಪಿಸಬೇಕು. ಭಾಷಾ ನೀತಿಯನ್ನು ಸಹ ರೂಪಿಸುವ ಅವಶ್ಯಕತೆ ಇದೆ. ಬೆಂಗಳೂರಿನಲ್ಲಿ 27% ಕನ್ನಡಿಗರು ಇದ್ದಾರೆ. ಇನ್ನು ಉಳಿದವರು ಬೇರೆ ಭಾಷಿಕರು ಇದ್ದಾರೆ. ಎಲ್ಲರಿಗೂ ಕನ್ನಡ ಕಲಿಯಿರಿ ಎಂದು ಸರಳವಾಗಿ ಹೇಳುವುದಕ್ಕೆ ಆಗಲ್ಲ. ಅದನ್ನು ಪ್ರಜಾಪ್ರಭುತ್ವ ಒಪ್ಪುವುದೂ ಇಲ್ಲ. ವಲಸಿಗರೊಂದಿಗೆ ನಾವು ನಮ್ಮ ಭಾಷೆಯನ್ನು ಮಾತನಾಡಬೇಕು. ಅನ್ಯಭಾಷಿಕರೊಂದಿಗೆ ಅವರ ಭಾಷೆಯಲ್ಲಿ ಮಾತನಾಡುವುದು ಬದಲಾಗಬೇಕು. ವಲಸೆ ಸಂಖ್ಯೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಸರ್ಕಾರ ಗಂಭೀರವಾದ ಕ್ರಮ ತೆಗೆದುಕೊಳ್ಳಬೇಕು. ರಾಜ್ಯದಲ್ಲಿ 2 ಕೋಟಿ ಜನ ಬೇರೆ ಭಾಷೆಯವರು ಇದ್ದಾರೆ. ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ.
ಪ್ರಶ್ನೆ: ವಲಸಿಗರಿಗೆ ಕನ್ನಡ ಕಲಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಏನು ಮಾಡುತ್ತಿದೆ ?
ಉತ್ತರ: ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ 40 ಕೇಂದ್ರಗಳಲ್ಲಿ ಕನ್ನಡ ಕಲಿಸುತ್ತಿದ್ದೇವೆ. ಅಪಾರ್ಟ್ಮೆಂಟ್ ಗಳಲ್ಲಿ, ನಿಮ್ಹಾನ್ಸ್ ನಲ್ಲಿ ಹಾಗೂ ನರ್ಸಿಂಗ್ ಮಾಡುತ್ತಿರುವವರಿಗೆ ಕನ್ನಡ ಕಲಿಸಲಾಗಿದೆ. ಸಂಘ - ಸಂಸ್ಥೆಗಳು, ಕರ್ನಾಟಕ ಸರ್ಕಾರ ಕನ್ನಡ ಭಾಷೆ ಕಲಿಸುವುದನ್ನು ಸಹ ತಮ್ಮ ಕ್ರಿಯಾ ಯೋಜನೆಯ ಭಾಗವಾಗಿಸಿಕೊಳ್ಳಬೇಕು. ವಲಸಿಗರಿಗೆ ಕನ್ನಡ ಕಲಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸುವ ಅವಶ್ಯಕತೆ ಇದೆ.
ಪ್ರಶ್ನೆ: ಉದ್ಯೋಗದಲ್ಲಿ ಕನ್ನಡ ಜಾರಿ ಮಾಡಲು ಸಾಧ್ಯವೇ?
ಉತ್ತರ: ಬೆಂಗಳೂರು ಅಥವಾ ಕರ್ನಾಟಕಕ್ಕೆ ಬರುವವರು ಮೂರು ತಿಂಗಳ ಅವಧಿಯಲ್ಲಿ ಕನ್ನಡ ಕಲಿಯಬೇಕು. ಒಂದೊಮ್ಮೆ ಕನ್ನಡ ಕಲಿಯದಿದ್ದರೆ ಅವರಿಗೆ ಕಾಯಂ ಅವಕಾಶ ಇರುವುದಿಲ್ಲ ಅಥವಾ ಉದ್ಯೋಗದಲ್ಲಿ ಬಡ್ತಿ ಇರುವುದಿಲ್ಲ ಎನ್ನುವ ನಿಯಮಗಳನ್ನು ಸರ್ಕಾರ ರೂಪಿಸಬೇಕು. ಅಲ್ಲದೇ ಆಸ್ತಿ ಖರೀದಿ ಅವಕಾಶ ಇರುವುದಿಲ್ಲ ಎನ್ನುವ ನಿಯಮಗಳನ್ನು ಸರ್ಕಾರ ರೂಪಿಸಬೇಕು.
ಕರ್ನಾಟಕಕ್ಕೆ ವಿವಿಧ ಭಾಗದಿಂದ ಜನ ಬಂದಿದ್ದಾರೆ. ಹೀಗಾಗಿ, ಕರ್ನಾಟಕದಲ್ಲಿ ಕನ್ನಡವೂ ಸೇರಿದಂತೆ 230 ಭಾಷೆಗಳಿವೆ. ಭಾಷಿಕ ವೈವಿಧ್ಯವಿದೆ. ಕನ್ನಡಿಗರನ್ನು ತುಳು ಭಾಷೆ ಅವರು ದ್ವೇಷಿಸುವ ವಾತಾವರಣ ನಿರ್ಮಾಣವಾಗಿದೆ. ಇದೊಂದು ದುರಂತ ಇದಕ್ಕೆ ಸರ್ಕಾರ ಪರಿಹಾರ ಕಂಡುಕೊಳ್ಳಬೇಕು. ಭಾಷೆ ವಿಚಾರ ಎನ್ನುವುದು ಸೂಕ್ಷ್ಮವಾದ ವಿಷಯ.
ಪ್ರಶ್ನೆ: ಕನ್ನಡಿಗರು ತಮ್ಮ ಅಸ್ಮಿತೆಯ ಪ್ರಶ್ನೆ ಮಾಡಿದರೆ ರಾಷ್ಟ್ರೀಯ ಮಾಧ್ಯಮಗಳು ಕನ್ನಡಿಗರನ್ನು ಖಳನಾಯಕರಂತೆ ಬಿಂಬಿಸುತ್ತಿವೆ ?
ಉತ್ತರ: ಇದು ನಿಜಕ್ಕೂ ಗಂಭೀರವಾದ ವಿಷಯ. ಇದರಿಂದ ಸಾಮಾಜಿಕ ಸಾಮರಸ್ಯಕ್ಕೆ ಪೆಟ್ಟು ಬೀಳುತ್ತದೆ. ಈ ರೀತಿ ಆಗದಂತೆ ಎಚ್ಚರಿಕೆ ವಹಿಸುವ ಜವಾಬ್ದಾರಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲಿದೆ. ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ. ಸರೋಜಿನಿ ಮಹಿಷಿ ವರದಿಯಲ್ಲಿ ಯಾರಾದರೂ 6 ತಿಂಗಳ ಅವಧಿಗಿಂತ ಹೆಚ್ಚು ಕರ್ನಾಟಕದಲ್ಲಿ ಇದ್ದರೆ ಕನ್ನಡ ಕಲಿಯಬೇಕು ಎನ್ನುವ ಶಿಫಾರಸ್ಸು ಇದೆ. ಆದರೆ ಇದು ಕಾನೂನಾಗಿ ರೂಪುಗೊಂಡಿಲ್ಲ. ಹೀಗಾಗಿ, ಇದರ ಮೇಲೆ ಕ್ರಮ ತೆಗೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ.
ಪ್ರಶ್ನೆ: ವಲಸಿಗರು ಹೆಚ್ಚಳಕ್ಕೆ ಮುಖ್ಯ ಕಾರಣಗಳೇನು, ಇದನ್ನು ತಪ್ಪಿಸುವುದು ಹೇಗೆ ?
ಉತ್ತರ: ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಮಕ್ಕಳ ಜನನಸಂಖ್ಯೆಯೂ ತುಂಬಾ ಇಳಿಕೆ ಆಗಿದೆ. ಆದರೆ ಇದೇ ಸಂದರ್ಭದಲ್ಲಿ ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿ ಹೆಚ್ಚಳವಾಗಿದೆ. ಕರ್ನಾಟಕದಲ್ಲಿ ಉದ್ಯೋಗ ಹೆಚ್ಚಾಗುತ್ತಿದೆ. ಆದರೆ ನೀರು ತುಂದುಕೊಡುವುದು, ಹೋಟೆಲ್ ಉದ್ಯಮ ಹಾಗೂ ಶೌಚಾಲಯಗಳ ಸ್ವಚ್ಛತೆ ಸೇರಿದಂತೆ ಕೆಲವೊಂದು ಕೆಲಸಗಳಿಗೆ ಜನ ಸಿಗುತ್ತಿಲ್ಲ. ವಿವಿಧ ಉದ್ಯಮಿಗಳು ಈಶಾನ್ಯ ಭಾರತೀಯರು ಹಾಗೂ ವಲಸಿಗರನ್ನು ಅವಲಂಬಿಸುವಂತಾಗಿದೆ. ಕರ್ನಾಟಕದ ಹೋಟೆಲ್ ತುಂಬಾ ಉತ್ತರ ಭಾರತೀಯರಿದ್ದಾರೆ.
ಅವರು ಕಡಿಮೆ ಸಂಬಳಕ್ಕೆ ದುಡಿಯತ್ತಾರೆ. ವರ್ಷಕ್ಕೆ ಒಮ್ಮೆ ಮಾತ್ರ ಊರಿಗೆ ಹೋಗುತ್ತಾರೆ ಅಲ್ಲದೇ ಪದೇ ಪದೇ ರಜೆ ಕೇಳುವುದಿಲ್ಲ. ನಮ್ಮವರು ವಿವಿಧ ಹಬ್ಬಗಳಿಗೆ ಹೆಚ್ಚು ರಜೆ ತೆಗೆದುಕೊಳ್ಳುತ್ತಾರೆ ಎನ್ನುವುದು ಹೋಟೆಲ್ ಉದ್ಯಮಿಗಳ ಮಾತು. ಈ ವ್ಯವಸ್ಥೆ ಬದಲಾಗಬೇಕು.
ಪ್ರಶ್ನೆ: ರಾಷ್ಟ್ರೀಯ ಪಕ್ಷಗಳಿಂದ ಅನ್ಯಾಯ, ದ್ವಿಭಾಷ ನೀತಿ ಇನ್ನೂ ದೂರವಾಗಿದೆ ?
ಉತ್ತರ: ನೀವು ಹೇಳುವುದು ಸರಿ.. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಇರಬಹುದು ಅಥವಾ ಬಿಜೆಪಿ ಇರಬಹುದು. ಅವರಿಗೆ ರಾಜ್ಯದ ಹಿತಾಸಕ್ತಿಗಳನ್ನು ಬದ್ಧತೆಯಿಂದ ಕಾಪಾಡಿಕೊಳ್ಳುವುದು ಕಷ್ಟವೇ. ನಾವು ರಾಷ್ಟ್ರೀಯ ಪಕ್ಷಗಳಿಗೆ ಮತ ಕೊಟ್ಟಾಗ ಈ ರೀತಿಯ ವಿಷಯಗಳಲ್ಲಿ ರಾಜಿ ಮಾಡಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ನಾವೇ ಸಿಕ್ಕಿಹಾಕಿಕೊಂಡಿದ್ದೇವೆ. ನಮಗೆ ಅತ್ಯಂತ ಬಲಿಷ್ಠವಾದ ಪ್ರಾದೇಶಿಕ ಪಕ್ಷ ಅವಶ್ಯವಿದೆ. ಹಿಂದಿ ಹೇರಿಕೆಯ ಸಂದರ್ಭದಲ್ಲಿ ಇದರ ಅನಿವಾರ್ಯತೆ ಇನ್ನಷ್ಟು ತೀವ್ರವಾಗಿದೆ. ಜೆಡಿಎಸ್‌ಗೆ ಈಗಲೂ ಅವಕಾಶವಿದೆ. ಆದರೆ ಈಗ ಇರುವ ರೀತಿಯಲ್ಲಿ ಅಲ್ಲ. ದ್ವಿಭಾಷಾ ನೀತಿಯನ್ನು ಒಪ್ಪಿಕೊಳ್ಳಬೇಕು.
ಪ್ರಶ್ನೆ: ಕನ್ನಡದಿಂದ ಕನ್ನಡಿಗರೇ ವಿಮುಖರಾಗುತ್ತಿದ್ದಾರೆ, ಇಂಗ್ಲೀಷ್ ವ್ಯಾಮೋಹ ಹೆಚ್ಚಾಗಿದೆ ?
ಉತ್ತರ: ಕನ್ನಡ ಪಠ್ಯ ಪುಸ್ತಕಗಳ ಸರಳೀಕರಣ ಮಾಡಿಕೊಡಬೇಕು. ಇಲ್ಲದಿದ್ದರೆ ಕನ್ನಡ ಓದುವ ಮಕ್ಕಳೇ ಇರುವುದೇ ಇಲ್ಲ. ಕನ್ನಡಕ್ಕೆ ಹೋಲಿಕೆ ಮಾಡಿದರೆ, ಸಂಸ್ಕೃತ ಮತ್ತು ಹಿಂದಿ ಪಠ್ಯ ಪುಸ್ತಕದ ಪುಟಗಳು ತುಂಬಾ ಕಡಿಮೆಯಾಗಿದ್ದು, ಇದು ಬದಲಾಗಬೇಕು. ಅಲ್ಲದೇ ಕೆಲವೊಂದು ಸಮಸ್ಯೆಗಳನ್ನು ಪರಿಹರಿಸಬೇಕು. ಕರ್ನಾಟಕದ ಉಡುಪಿ, ಮಂಗಳೂರು ಹಾಗೂ ಕಾರವಾರ ಭಾಗದಲ್ಲಿ ಶಾಲೆಗಳಲ್ಲಿ ಓದುವ ಶೇ90ಕ್ಕೂ ಹೆಚ್ಚು ಮಕ್ಕಳ ಮಾತೃಭಾಷೆ ಕನ್ನಡ ಅಲ್ಲ.
ಬ್ಯಾರಿ ಭಾಷೆ, ಕೊಂಕಣಿ, ಅರೆಭಾಷೆ, ಗೌಳಿ ಹಾಗೂ ಸಿದ್ಧಿ ಭಾಷೆಗಳನ್ನು ಮನೆಯಲ್ಲಿ ಮಾತನಾಡುತ್ತಾರೆ ಅವರು ಶಾಲೆಗೆ ಬಂದು ಕನ್ನಡ ಕಲಿಯುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಈ ಭಾಗದಲ್ಲಿ ಉತ್ತೀರ್ಣರಾಗುವ ಸಂಖ್ಯೆ ಶೇ 96 ಪ್ರತಿಶತ ಇದೆ. ಮಂಡ್ಯ ಮತ್ತು ಮೈಸೂರಿನಲ್ಲಿ ಮಾತೃಭಾಷೆ ಕನ್ನಡವೇ ಆಗಿದೆ. ಆದರೆ, ಕನ್ನಡ ಭಾಷೆಯಲ್ಲಿ ಉತ್ತೀರ್ಣತೆ ಪ್ರಮಾಣ ಶೇ 68 ಪ್ರತಿಶತ ಮಾತ್ರ ಇದೆ. ಪಾಠ ಮಾಡುವ ಕ್ರಮದಲ್ಲಿ ಬದಲಾವಣೆ ಆಗಬೇಕು. ಭಾಷೆಯನ್ನು ಕಲಿಸುವ ವಿಧಾನ ಆಧುನಿಕವಾಗಬೇಕು.
ಪ್ರಶ್ನೆ: ಬ್ಯಾಂಕ್‌ಗಳಲ್ಲಿ ಕನ್ನಡ ಇಲ್ಲದೆ ಕನ್ನಡಿಗರು ಸಮಸ್ಯೆ ಎದುರಿಸುವಂತಾಗಿದೆ ?
ಉತ್ತರ: ಬ್ಯಾಂಕ್‌ಗಳಲ್ಲಿ ನೇಮಕವಾಗುವ ಸಿಬ್ಬಂದಿ ಮೂರು ತಿಂಗಳಿನಲ್ಲಿ ಕನ್ನಡ ಕಲಿಯಬೇಕು ಎಂದು ಕೇಂದ್ರ ಸರ್ಕಾರ ನಿಯಮ ರೂಪಿಸಿದೆ. ಆದರೆ ಅದು ಜಾರಿ ಆಗುತ್ತಿಲ್ಲ. ಆದೇಶದಲ್ಲಿ ಇದ್ದರೂ ಅನುಷ್ಠಾನವಾಗುತ್ತಿಲ್ಲ. ವಲಸಿಗರಿಗೆ ಕನ್ನಡ ಕಲಿಸುವ ನೈತಿಕತೆ ಸಹ ಸರ್ಕಾರಗಳ ಮೇಲಿದೆ. ಇನ್ನೊಂದು ಇವರು ಮೂರು ತಿಂಗಳಿನಲ್ಲಿ ಕನ್ನಡ ಕಲಿತಿದ್ದೇವೆ ಎಂದು ಹೇಳುತ್ತಾರೆ. ಆದರೆ ಅವರನ್ನು ಪರೀಕ್ಷೆ ಮಾಡುವವರು ಸಹ ಅವರ ಮೇಲಧಿಕಾರಿಗಳೇ ಆಗಿದ್ದಾರೆ. ಇದು ಬದಲಾಗಬೇಕು. ಕನ್ನಡ ಪರೀಕ್ಷಾ ಮಂಡಳಿ ಅಥವಾ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾಡಬೇಕು.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video











Click it and Unblock the Notifications