ನಮ್ಮ ಸಮಾಜ ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು: ಸಿ.ಎಂ ಸಿದ್ದರಾಮಯ್ಯ
ಕರ್ನಾಟಕದ ಸಾರ್ವಜನಿಕ ಪ್ರದೇಶಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗೆ ನಿರ್ಬಂಧ ವಿಧಿಸಬೇಕು ಎನ್ನುವ ಚರ್ಚೆ ಕರ್ನಾಟಕದಲ್ಲಿ ಜೋರಾಗಿದೆ. ಈ ರೀತಿ ಇರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅದೇಮು ಎನ್ನುವ ವಿವರ ಇಲ್ಲಿದೆ.
ಸೋಮವಾರ ದಾಸೋಹ ರತ್ನ ಚಕ್ರವರ್ತಿ ದಾನೇಶ್ವರರರು ಶ್ರೀ ಬಸವ ಗೋಪಾಲ ನೀಲಮಾಣಿಕ ಮಠ ಅವರ ನೇತೃತ್ವದಲ್ಲಿ ರಬಕವಿ ಬನಹಟ್ಟಿಯ ಸುಕ್ಷೇತ್ರ ಬಂಡಿಗಾಣಿ ಮಠದಲ್ಲಿ ಆಯೋಜಿಸಿದ್ದ "ವಿಶ್ವಶಾಂತಿಗಾಗಿ ಸರ್ವಧರ್ಮ ಮಹಾಸಂಗಮ 2025" ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಮ್ಮ ಸಮಾಜ ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು ಎಂದಿದ್ದಾರೆ. ಕಾರ್ಯಕ್ರಮದಲ್ಲಿ ಸಿ.ಎಂ ಸಿದ್ದರಾಮಯ್ಯ ಅವರು ಹೇಳಿದ್ದೇನು ಎನ್ನುವ ವಿವರ ಇಲ್ಲಿದೆ.

ನಮ್ಮ ಸಮಾಜ ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು, ಎಲ್ಲರ ನೆಮ್ಮದಿಯ ಉದ್ಯಾನವಾಗಬೇಕು. ಜನರಲ್ಲಿ ಪರಸ್ಪರ ಪ್ರೀತಿಯಿರಬೇಕು. ಸರ್ವ ಧರ್ಮ ಮಹಾಸಂಗಮ ನಡೆಯುತ್ತಿರುವುದು ಇಂದಿನ ಪರಿಸ್ಥಿತಿಯಲ್ಲಿ ಸಮಂಜಸವಾಗಿದೆ. ದೇಶದಲ್ಲಿ ಹಾಗೂ ಜಗತ್ತಿನಲ್ಲಿ ಅನೇಕ ಧರ್ಮ, ಜಾತಿಗಳಿವೆ. ಜಾತಿ ಧರ್ಮಗಳನ್ನು ನಾವು ಮಾಡಿಲ್ಲ, ಮೊದಲಿನಿಂದ ನಮ್ಮಲ್ಲಿ ಬೆಳೆದುಕೊಂಡು ಬಂದಿದೆ.
ನಾವು ಯಾವುದೇ ಧರ್ಮ, ಜಾತಿಗೆ ಸೇರಿದ್ದರೂ ಬೇರೆ ಜಾತಿಯವರನ್ನು ಪ್ರೀತಿಸಬೇಕೇ ಹೊರತು ದ್ವೇಷಿ ಸಬಾರದು. ಯಾವುದೇ ಜಾತಿ, ಧರ್ಮಕ್ಕೆ ಸೇರಿದ್ದರೂ ನಾವು ಮನುಷ್ಯರು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಕಾಯಿಲೆ ಬಂದರೆ ಶರೀರಕ್ಕೆ ಯಾರ ರಕ್ತವಾದರೂ ಕೊಡಿ, ಪ್ರಾಣ ಉಳಿದರೆ ಸಾಕು ಎನ್ನುತ್ತೇವೆ. ಇಂಥವರದ್ದೇ ರಕ್ತ ಕೊಡಿ ಎಂದು ಕೇಳುವುದಿಲ್ಲ. ಗುಣಮುಖರಾದ ನಂತರ ಯಾವ ಜಾತಿ ಎಂದು ಕೇಳುವುದು ನ್ಯಾಯವೇ, ಬಸವಣ್ಣನವರು ದಯೆ ಇಲ್ಲದ ಧರ್ಮ ಯಾವುದಯ್ಯ ದಯೆಯೇ ಧರ್ಮದ ಮೂಲ ಎಂದು ಹೇಳಿದ್ದಾರೆ. ಇದನ್ನು ತಿಳಿದುಕೊಳ್ಳಬೇಕು ಎಂದಿದ್ದಾರೆ.
ಇತ್ತೀಚೆಗೆ ಸನಾತನ ಧರ್ಮಕ್ಕೆ ಸೇರಿದ ವ್ಯಕ್ತಿಯೊಬ್ಬರು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯ ಮೂರ್ತಿಗಳ ಮೇಲೆ ಶೂ ಎಸೆದಿದ್ದಾರೆ. ಯಾವ ಧರ್ಮವೂ ದ್ವೇಷಿಸಬೇಕು ಎಂದು ಹೇಳುವುದಿಲ್ಲ. ಕಾನೂನು ಓದಿರುವ ವಕೀಲನೊಬ್ಬ ಈ ರೀತಿ ಮಾಡುವುದನ್ನು ನಾವು ಖಂಡಿಸಬೇಕು. ಸಹಿಸಿಕೊಳ್ಳಬಾರದು. ಇಂಥವೆಲ್ಲಾ ನಡೆದರೆ ಸಮಾಜದಲ್ಲಿ ಶಾಂತಿ ಹೇಗೆ ನೆಲೆಸಲು ಸಾಧ್ಯ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಆರ್‌ಎಸ್‌ಎಸ್ ಬಗ್ಗೆ ಸಿ.ಎಂ ಹೇಳಿದ್ದೇನು: ಇನ್ನು ಆರ್‌ಎಸ್‌ಎಸ್ ಸಂಘಟನೆ ತನ್ನ ಚಟುವಟಿಕೆಗಳಿಗೆ ಸರ್ಕಾರಿ ಸ್ಥಳಗಳನ್ನು ಬಳಸಿಕೊಳ್ಳುತ್ತಿದೆ. ತಮಿಳುನಾಡು ರಾಜ್ಯದಲ್ಲಿ ಇದನ್ನು ನಿರ್ಬಂಧಿಸಿದಂತೆ ರಾಜ್ಯದಲ್ಲಿಯೂ ನಿರ್ಬಂಧಿಸಬೇಕು ಎಂದು ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಪತ್ರ ಬರೆದಿದ್ದಾರೆ. ಸರ್ಕಾರಿ ಸ್ಥಳದಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿರ್ಬಂಧಿಸುವ ಕುರಿತು ತಮಿಳುನಾಡು ರಾಜ್ಯದ ಕ್ರಮವನ್ನು ಪರಿಗಣಿಸಿ, ಪರಿಶೀಲಿಸುವಂತೆ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದೇನೆ ಎಂದೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.












Click it and Unblock the Notifications