'ವಿಜಯಣ್ಣ'ನಿಗೆ ತಪ್ಪಿದ ಪರಿಷತ್ ಟಿಕೆಟ್: ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ
ಬೆಂಗಳೂರು, ಮೇ. 24: ಕರ್ನಾಟಕ ಬಿಜೆಪಿ ಪ್ರಶ್ನಾತೀತ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರ ಸಚಿವನಾಗುವ ಕನಸು ಭಗ್ನವಾಗಿದೆ.
ವಿಧಾನ ಪರಿಷತ್ ಅಭ್ಯರ್ಥಿಯಾಗಿ ವಿಧಾನಸೌಧ ಪ್ರವೇಶಿಸುತ್ತಾರೆ ಎಂಬ ಬಿಎಸ್ ವೈ ಆಶಯಕ್ಕೆ ಬಿಜೆಪಿ ಹೈಕಮಾಂಡ್ ನೀರೆರಚಿದೆ. ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ವಿಜಯೇಂದ್ರ ಬೆಂಬಲಿಗರು ಸಾಮಾಜಿಕ ಜಾಲ ತಾಣದಲ್ಲಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಬಲಿಗರು ಸೌಜನ್ಯದಿಂದ ವರ್ತಿಸುವಂತೆ ವಿಜಯೇಂದ್ರ ಮನವಿ ಮಾಡಿದ್ದಾರೆ.
ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿರುವ ಬಿ.ವೈ. ವಿಜಯೇಂದ್ರ ಹಲವು ಉಪ ಚುನಾವಣೆಯಗಳ ಹೊಣೆ ಹೊತ್ತು ಪಕ್ಷಕ್ಕೆ ಜಯ ತಂದುಕೊಟ್ಟಿದ್ದರು. ಯಡಿಯೂರಪ್ಪ ಸಿಎಂ ಸ್ಥಾನದಿಂದ ಇಳಿದ ಬಳಿಕ ವಿಜಯೇಂದ್ರ ಅವರಿಗೆ ವಿಧಾನಸೌಧ ಎಂಟ್ರಿ ಕೊಡಿಸಲು ಯಡಿಯೂರಪ್ಪ ಆಸಕ್ತಿ ವಹಿಸಿದ್ದರು.

ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆದಿತ್ತು. ಅಲ್ಲಿ ವಿಜಯೇಂದ್ರ ಅವರನ್ನು ಮೇಲ್ಮನೆಗೆ ಆಯ್ಕೆ ಮಾಡುವಂತೆ ಕೋರ್ ಕಮಿಟಿ ಬಿಜೆಪಿ ಹೈಕಮಾಂಡ್ ಗೆ ಶಿಫಾರಸು ಮಾಡಿತ್ತು. ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಿ ಸಚಿವ ಸ್ಥಾನ ಅಲಂಕರಿಸಲಿದ್ದಾರೆ ಎಂದೇ ಹೇಳಲಾಗಿತ್ತು. ಕೊನೆ ಕ್ಷಣದಲ್ಲಿ ಬಿಜೆಪಿ ಹೈಕಮಾಂಡ್ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ವಿಜಯೇಂದ್ರ ಅವರಿಗೆ ಟಿಕೆಟ್ ಕೈ ತಪ್ಪಿದೆ.

ವಿಜಯೇಂದ್ರ ಅವರಿಗೆ ಟಿಕೆಟ್ ಕೈತಪ್ಪುತ್ತಿದ್ದಂತೆ ಅವರ ಬೆಂಬಲಿಗರು ಸಾಮಾಜಿಕ ಜಾಲ ತಾಣದಲ್ಲಿ ರೊಚ್ಚಿಗೆದ್ದಿದ್ದಾರೆ. ಬಿಜೆಪಿ ಹೈ ಕಮಾಂಡ್ ತೀರ್ಮಾನದ ಬಗ್ಗೆ ಕಿಡಿ ಕಾರಿದ್ದಾರೆ. ಅನಿರೀಕ್ಷಿತ ತಿರುವಿನಲ್ಲಿ ರಾಜಕೀಯ ಪ್ರವೇಶಿಸಿದ ನನಗೆ ಬಿಜೆಪಿ ಉಪಾಧ್ಯಕ್ಷನಾಗಿ ಮಹತ್ವದ ಜವಾಬ್ದಾರಿ ನೀಡಿ ಬೆನ್ನು ತಟ್ಟಿ ಬಿಜೆಪಿ ಪಕ್ಷ ಬೆಳೆಸುತ್ತಿದೆ. ರಾಜಕೀಯ ಅಧಿಕಾರ ನಿಂತ ನೀರಲ್ಲ. ಅದು ಹರಿಯುವ ನದಿ ಹಾಗೆ. ಇದನ್ನು ಕಾರ್ಯಕರ್ತರು ಮತ್ತು ಅಭಿಮಾನಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡುತ್ತೇನೆ.
ಅನಗತ್ಯ ಟೀಕೆ, ಉದ್ಘೋಷ, ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡಿದರೆ, ಅದು ನನ್ನ ವ್ಯಕ್ತಿತ್ವಕ್ಕೆ ಹಾಗೂ ತಂದೆ ಬಿಎಸ್ ವೈ ಅವರ ಭಾವನೆಗಳಿಗೆ ಮನಸಿ ಬಳಿದಂತಾಗುತ್ತದೆ. ಹೀಗಾಗಿ ನನ್ನ ಹಿತೈಷಿಗಳು ಯಾರೂ ಸಾಮಾಜಿಕ ಜಾಲ ತಾಣದಲ್ಲಿ ಅನಗತ್ಯ ಟೀಕೆ ಮಾಡಬೇಡಿ. ಬಿಜೆಪಿ ಶಿಸ್ತಿನ ಪಕ್ಷ, ನಾವೆಲ್ಲರೂ ಸಾಮಾನ್ಯ ಕಾರ್ಯಕರ್ತರು. ಸಾಮರ್ಥ ಇರುವವರನ್ನು ಪಕ್ಷ ಎಂದೂ ಕೈ ಬಿಡಲ್ಲ. ಈ ನಿಟ್ಟಿನಲ್ಲಿ ಎಲ್ಲರೂ ಸೌಜನ್ಯದಿಂದ ನಡೆದುಕೊಳ್ಳಬೇಕು. ನಿಮ್ಮ ಬೆಂಬಲ ಸದಾ ಇರಲಿ ಎಂದು ವಿಜಯೇಂದ್ರ ವಿನಂತಿ ಮಾಡಿದ್ದಾರೆ.

ಟಿಕೆಟ್ ನಿರಾಕರಣೆ ಕಾರಣ:
ಚುನಾವಣಾ ಕಣದಲ್ಲಿ ನಿಂತು ಜಯ ಗಳಿಸುವ ವ್ಯಕ್ತಿಗಳನ್ನು ಪರಿಗಣಿಸಿಲ್ಲ. ಹೀಗಾಗಿ ವಿಜಯೇಂದ್ರ ಅವರಿಗೆ ಹೈಕಮಾಂಡ್ ಟಿಕೆಟ್ ನೀಡಿಲ್ಲ. ಸರಣಿ ಚುನಾವಣೆಗಳು ಎದುರಾಗುತ್ತಿವೆ. ಹೀಗಾಗಿ ಪಕ್ಷವನ್ನು ಸಂಘಟನೆ ಜತೆಗೆ ಗೆಲುವು ಸಾಧಿಸುವ ಅಗತ್ಯವಿದೆ. ಇದನ್ನು ಅರಿತು ಬಿಜೆಪಿ ಉಪಾಧ್ಯಕ್ಷರಾಗಿರುವ ವಿಜಯೇಂದ್ರ ಅವರಿಗೆ ಟಿಕೆಟ್ ನೀಡಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವಿಜಯೇಂದ್ರ ಜಯ ಗಳಿಸುವ ಶಕ್ತಿ ಇರುವುದರಿಂದ ಅವರಿಗೆ ವಿಧಾನ ಪರಿಷತ್ ಟಿಕೆಟ್ ನಿರಾಕರಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಬಿಎಸ್ ವೈ ಪ್ಲಾನ್ ಪ್ಲಾಪ್ :
ವಿಜಯೇಂದ್ರ ಅವರನ್ನು ಮೇಲ್ಮನೆ ಸದಸ್ಯನನ್ನಾಗಿ ಆಯ್ಕೆ ಮಾಡಿ ಸಚಿವ ಸ್ಥಾನ ಕೊಡಿಸುವುದು. ಸಚಿವರಾಗಿ ವಿಜಯೇಂದ್ರ ಚುನಾವಣೆ ಹೊಸ್ತಿಲಲ್ಲಿ ಜನಪ್ರಿಯ ಕೆಲಸ ಮಾಡಿದರೆ ವರ್ಚಸ್ಸು ಹೆಚ್ಚಾಗುತ್ತದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಅನುಕೂಲವಾಗಲಿದೆ ಎಂಬುದು ಬಿಎಸ್ ವೈ ಅವರ ಆಲೋಚನೆಯಾಗಿತ್ತು. ಹೀಗಾಗಿಯೇ ಕೋರ್ ಕಮಿಟಿ ಸಭೆಗೂ ಮುನ್ನ ವಿಜಯೇಂದ್ರ ಅವರ ಹೆಸರನ್ನು ಅಂತಿಮಗೊಳಿಸಿ ಬಿಜೆಪಿ ಕೋರ್ ಕಮಿಟಿ ರವಾನಿಸಿತ್ತು. ಆದ್ರೆ ಹೈ ಕಮಾಂಡ್ ವಿಜಯೇಂದ್ರ ಅವರಿಗೆ ವಿಧಾನ ಪರಿಷತ್ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶ ನೀಡಿಲ್ಲ. ಇದು ಬಿಎಸ್ ವೈ ಹಾಗೂ ವಿಜಯೇಂದ್ರ ಅವರಲ್ಲಿ ಬೇಸರ ಮೂಡಿಸಿದೆ.











Click it and Unblock the Notifications