Site Allotment: ಬಡಾವಣೆಗಳ ನಿವೇಶನ ಹಂಚಿಕೆ ಬಗ್ಗೆ ಸಚಿವ ಬೈರತಿ ಸುರೇಶ್ ಬಿಗ್ ಅಪ್ಡೇಟ್
ಬಡಾವಣೆಗಳ ಅಭಿವೃದ್ಧಿ ಕುರಿತಂತೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಶಿವಕುಮಾರ್ ಪ್ರಶ್ನೆಗೆ ಉತ್ತರಿಸಿದ ಬೈರತಿ ಸುರೇಶ್, ರಾಜ್ಯದ ಎಲ್ಲ ನಗರಗಳಲ್ಲಿ ನದಿ ಮೂಲಗಳು ಕಲುಷಿತಗೊಳ್ಳದಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿಗದಿಪಡಿಸಿರುವ ಅಗತ್ಯ ಬಫರ್ ಅನ್ನು ಕಾಯ್ದಿರಿಸಿಯೇ ಬಡಾವಣೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.
10 ಎಕರೆಗೂ ಮೇಲ್ಪಟ್ಟ ಬಡಾವಣೆಗಳನ್ನು ಅಭಿವೃದ್ಧಿಪಡಿಸುವಾಗ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅವರಿಂದ ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು (ಎಸ್‌ಟಿಪಿ) ಕಡ್ಡಾಯವಾಗಿ ಅಳವಡಿಸುವ ನಿಬಂಧನೆ ಇದೆ ಅದರಂತೆ 10 ಎಕರೆಗಿಂತ ಮೇಲ್ಪಟ್ಟ ಎಲ್ಲ ಬಡಾವಣೆಗಳಲ್ಲಿಯೂ ತ್ಯಾಜ್ಯ ನೀರು ಸಂಸ್ಕರಣಾ ಘಟಕಕ್ಕೆ ಸ್ಥಳಗಳನ್ನು ಗುರುತಿಸಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿರವರ ಮಾರ್ಗಸೂಚಿಯನುಸಾರವೇ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ನಗರಾಭಿವೃದ್ಧಿ ಪ್ರಾಧಿಕಾರದಿಂದ ರಚಿಸಲಾಗುವ ಬಡಾವಣೆಗಳಲ್ಲಿನ ನಿವೇಶನಗಳನ್ನು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ನಿವೇಶನಗಳ ಹಂಚಿಕೆ) ನಿಯಮಗಳು-1991ರಲ್ಲಿನ ಅವಕಾಶಗಳಂತೆ ಸಾರ್ವಜನಿಕರಿಗೆ ಹಂಚಿಕೆ ಮಾಡಲಾಗುತ್ತಿದೆ. ರಾಜ್ಯದಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರಗಳು ಅಭಿವೃದ್ಧಿ ಯೋಜನೆಗಳಿಗೆ ಬೇಕಾಗುವ ಭೂಮಿಯನ್ನು ಭೂಸ್ವಾಧೀನಪಡಿಸಿಕೊಳ್ಳುವ ಕ್ರಮದ ಜೊತೆಗೆ ರೈತರ ಸಹಭಾಗಿತ್ವದೊಂದಿಗೆ ಕರ್ನಾಟಕ ನಗರಾಭಿವೃದ್ಧಿ, ಪ್ರಾಧಿಕಾರಗಳ (ಭೂಸ್ವಾಧೀನಪಡಿಸಿಕೊಂಡಿರುವುದಕ್ಕೆ ಪರಿಹಾರಗಳ ಬದಲಿಗೆ ನಿವೇಶನಗಳ ಹಂಚಿಕೆ) ನಿಯಮಗಳು-2009ರಲ್ಲಿನ ಅವಕಾಶದಂತೆ ಶೇ 50:50ರ ಅನುಪಾತದಡಿ ಬಡಾವಣೆ ನಿರ್ಮಿಸಲು ಕ್ರಮವಹಿಸುತ್ತಿವೆ ಎಂದು ವಿವರಿಸಿದ್ದಾರೆ.
ಕರಾವಳಿ ಜಿಲ್ಲೆಯು ಒಳಗೊಂಡಂತೆ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಒಂದು ಅಥವಾ ಬಹು ನಿವೇಶನ ವಿನ್ಯಾಸ ಅನುಮೋದನೆ ನೀಡುವ ಕುರಿತ ನಿಯಮಗಳನ್ನು ಸಮನ್ವಯಗೊಳಿಸಲು, ವಿನ್ಯಾಸ ಅನುಮೋದನೆ ಪಾರದರ್ಶಕತೆ ಹಾಗೂ ಜನ ಸ್ನೇಹಿಯಾಗಿಸಲು ಅನುಕೂಲವಾಗುವಂತೆ ಸೆಂಟರ್ ಫಾರ್ ಇ ಗವರ್ನೆನ್ಸ್ ವತಿಯಿಂದ ಯೂನಿಫೈಡ್ ಲ್ಯಾಂಡ್ ಮ್ಯಾನೇಜ್ಮೆಂಟ್ ಸಿಸ್ಟಮ್ ತಂತ್ರಾಂಶ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಸಚಿವ ಬೈರತಿ ಸುರೇಶ್ ಹೇಳಿದ್ದಾರೆ.
ಕಂಬಳಕ್ಕೆ ತಲಾ 5 ಲಕ್ಷ ಅನುದಾನ
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ 23 ಕಂಬಳೋತ್ಸವಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡುವ ಬಗ್ಗೆಯೂ ಬೆಳಗಾವಿ ಅಧಿವೇಶನದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. 2025-26ನೇ ಸಾಲಿನಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಯೋಜಿಸಲಾಗುವ ಕಂಬಳ ಉತ್ಸವಗಳಿಗೆ ಅನುದಾನ ಕೋರಿ ಪ್ರಸ್ತಾವನೆಗಳು ಸ್ವೀಕೃತವಾಗಿದ್ದು, ಇದಕ್ಕೆ ಸರ್ಕಾರದಿಂದ ಅನುಮೋದನೆ ನೀಡಿ ಅನುದಾನ ಬಿಡುಗಡೆಗೆ ಆರ್ಥಿಕ ಇಲಾಖೆಗೆ ಕಡತ ರವಾನಿಸಲಾಗಿದೆ.
ಈ ಸಾಲಿನ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ, ಮಂಗಳೂರು, ನರಿಂಗಾಣ, ಮೂಡಬಿದ್ರೆ, ಐಕಳ, ಜಪ್ಪು, ಪುತ್ತೂರು, ಬಂಟ್ವಾಳ, ಉಪ್ಪಿನಂಗಡಿ ಮತ್ತು ವೇಣೂರಿನಲ್ಲಿ ಆಯೋಜಿಸಿದ್ದ ಕಂಬಳೋತ್ಸವಗಳಿಗೆ ತಲಾ 5 ಲಕ್ಷದಂತೆ ಒಟ್ಟು 50 ಲಕ್ಷ ರೂಪಾಯಿಗಳನ್ನು ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದ್ದಾರೆ. ಶಾಸಕರ ಅಭಿಪ್ರಾಯದಂತೆ ಒಟ್ಟು 23 ಕಂಬಳೋತ್ಸವಗಳಿಗೆ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.












Click it and Unblock the Notifications