Rain Alert: ರಾಜ್ಯಾದ್ಯಂತ ಮುಂದಿನ 4 ದಿನ ಗುಡುಗು ಸಹಿತ ಭಾರೀ ಮಳೆ: ಹವಾಮಾನ ಮುನ್ಸೂಚನೆ
ಬೆಂಗಳೂರು, ಏಪ್ರಿಲ್ 25: ಕರ್ನಾಟಕ ರಾಜ್ಯದಲ್ಲಿ ಮುಂದುವರಿದಿರುವ ಒಣಹವೆಯ ವಾತಾವರಣ ಇದೇ ತಿಂಗಳಾಂತ್ಯಕ್ಕೆ ತಾತ್ಕಾಲಿಕವಾಗಿ ಕೊನೆಯಾಗಲಿದೆ. ಎಲ್ಲೆಡೆ ಮಬ್ಬು ವಾತಾವರಣ ಸೃಷ್ಟಿಯಾಗಲಿದೆ. ಸಾಧಾರಣದಿಂದ ಭಾರೀ ಮಳೆ ಆಗುವ ಎಲ್ಲ ಲಕ್ಷಣಗಳು ಇವೆ. ಏಪ್ರಿಲ್ 28ರಿಂದ ಮೇ 1 ರವರೆಗೆ ಭರ್ತಿ ನಾಲ್ಕು ದಿನ ರಾಜ್ಯಾದ್ಯಂತ ವರುಣ ಆರ್ಭಟಿಸಲಿದ್ದಾನೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ ಭಾಗ ಮತ್ತು ಒಳನಾಡು ಜಿಲ್ಲೆಗಳು ಸೇರಿದಂತೆ ರಾಜ್ಯದಲ್ಲಿ ಏಪ್ರಿಲ್ 28ರವರೆಗೆ ಅಧಿಕ ತಾಪಮಾನದ ವಾತವರಣ ಮುಮದುವರಿಯಲಿದೆ. ಕೆಲವೆಡೆ ಲಘು ಮಳೆ ಆಗಬಹುದು. ನಂತರ ನಾಲ್ಕು ದಿನಗಳ ಕಾಲ ಗುಡುಗು ಮಿಂಚು ಸಹಿತ ಧಾರಾಕಾರ ಮಳೆ ಆಗುವ ಸಾಧ್ಯತೆ ಇದೆ. ಇದಕ್ಕೆ ಬಂಗಾಳಕೊಲ್ಲಿ ಸಮುದ್ರ ಮೇಲ್ಮೈನಲ್ಲಿ ಸೃಷ್ಟಿಯಾಗಿ ಭೂಮಿ ಮೇಲ್ಮೈ ಮೇಲೆ ತೀವ್ರವಾಗಿ ಬೀಸುತ್ತಿರುವ ಚಂಡಮಾರುತ ಪರಿಚಲನೆ ಕಾರಣವಾಗಿದೆ.

ಗುಡುಗು ಸಹಿತ ಭಾರೀ ಮಳೆ ಅಬ್ಬರ
ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮೈಸೂರು, ರಾಮನಗರ, ಶಿವಮೊಗ್ಗ, ವಿಜಯನಗರ, ತುಮಕೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ವ್ಯಾಪಕ ಮಳೆ ಸುರಿಯಲಿದೆ. ನಾಲ್ಕು ದಿನ ಮಬ್ಬು ಕವಿಯುವ ಸಾಧ್ಯತೆ ಇದೆ. ಶುಷ್ಕ ವಾತಾವರಣ ಸಂಪೂರ್ಣ ಬದಲಾಗಲಿದೆ ಎಂದು ಊಹಿಸಲಾಗಿದೆ.
ಈ ಅವಧಿಯಲ್ಲಿ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಾದ ಬಾಗಲಕೋಟೆ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರ ಮಳೆ ಆಗಬಹುದು ಎನ್ನಲಾಗಿದೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಪೂರ್ವ ಮುಂಗಾರು ಮಳೆ ಹೆಚ್ಚಿನ ಪ್ರಮಾಣದಲ್ಲಿ ಸಕ್ರಿಯವಾಗಿರಲಿದೆ. ಹೀಗಾಗಿ ಮಲೆನಾಡು ಭಾಗದಲ್ಲಿ ಮೇ ಮೊದಲ ವಾರ ಹೆಚ್ಚಿನ ವರ್ಷಧಾರೆ ಲಕ್ಷಣವಿದೆ.
ಸದ್ಯ ರಾಜ್ಯದಲ್ಲಿ ಒಣಹವೆ ಸೃಷ್ಟಿಯಾಗಿದ್ದು, ಉತ್ತರ ಕರ್ನಾಟಕದ ವಿವಿಧೆಡೆ ಅತ್ಯಧಿಕ ತಾಪಮಾನ ದಾಖಲಾಗಿದೆ. ಕಲಬುರಗಿಯಲ್ಲಿ 43 ಡಿಗ್ರಿ ಸೆಲ್ಸಿಯಸ್, ಬೀದರ್ 42 ಡಿಗ್ರಿ ಸೆಲ್ಸಿಯಸ್, ರಾಯಚೂರು 40 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಉಳಿದಂತೆ ವಿಜಯಪುರ 39, ಬಾಗಲಕೋಟೆ ಮತ್ತು ಕೊಪ್ಪಳದಲ್ಲಿ ತಲಾ 38 ಡಿಗ್ರಿ ಸೆಲ್ಸಿಯಸ್, ಕಾರವಾರ, ಬೆಳಗಾವಿ ವಿಮಾನ ನಿಲ್ದಾಣ, ಚಿಂತಾಮಣಿ, ಧಾರವಾಡ, ಬೆಳಗಾವಿ ನಗರದಲ್ಲಿ 36 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಬೆಂಗಳೂರು ಹವಾಮಾನ ವರದಿ
ಬೆಂಗಳೂರಿನಲ್ಲಿ ಮುಂದಿನ 48 ದಿನಗಳಲ್ಲಿ ಒಣಹವೆ ಕಂಡು ಬರಲಿದೆ. ಗಾಳಿ ವೇಗದಲ್ಲಿ ಯಾವ ಬದಲಾವಣೆ ಆಗದು. ಒಂದೆರಡು ಕಡೆ ಮಳೆ ವಾತವರಣ ಉಂಟಾಗಬಹುದು. ಗರಿಷ್ಠ ತಾಪಮಾನ 33 ಹಾಗೂ ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ವರದಿ ತಿಳಿಸಿದೆ.












Click it and Unblock the Notifications