ಲಂಚ ಸ್ವೀಕರಿಸುವ ವೇಳೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಬಂಧನ
ಚೆನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಗ ಪ್ರಶಾಂತ್ ಮಾಡಾಳ್ ಅವರು ಬೆಂಗಳೂರು ಜಲಮಂಡಳಿಯ ಮುಖ್ಯ ಲೆಕ್ಕಾಧಿಕಾರಿಯೂ ಹೌದು.
ಬೆಂಗಳೂರು, ಮಾರ್ಚ್ 2: ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಮಗನಾದ ಪ್ರಶಾಂತ್ ಮಾಡಾಳ್ ಅವರನ್ನು ಲೋಕಾಯಕ್ತಾ ಬೆಂಗಳೂರಿನಲ್ಲಿ ಗುರುವಾರ ಸಂಜೆ ಬಂಧಿಸಿದ್ದಾರೆ.
ಪ್ರಶಾಂತ್ ಮಾಡಾಳ್ ಅವರು ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ ನಿಯಮಿತಕ್ಕೆ (ಕೆಎಸ್‌ಡಿಎಲ್) ರಸಾಯನಿಕ ಪೂರೈಸುವ ಟೆಂಡರ್ ಪ್ರಕ್ರಿಯೆಯಲ್ಲಿ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲು 40 ಲಕ್ಷ ರೂಪಾಯಿ ಲಂಚವನ್ನು ಪಡೆಯುತ್ತಿದ್ದರು ಎನ್ನಲಾಗಿದೆ.

ಪ್ರಶಾಂತ್ ಮಾಡಾಳ್ ಅವರು ಬೆಂಗಳೂರು ಜಲಮಂಡಳಿಯ ಮುಖ್ಯ ಲೆಕ್ಕಾಧಿಕಾರಿಯೂ ಹೌದು. ಅವರು ತಮ್ಮ ತಂದೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪರವಾಗಿ ಲಂಚ ಸ್ವೀಕರಿಸುತ್ತಿದ್ದಾಗ ದಾಳಿ ಮಾಡಿದ ಲೋಕಾಯುಕ್ತ ಬೆಂಗಳೂರು ಪೊಲೀಸರು ಅವರನ್ನು ಸ್ಥಳದಲ್ಲಿ ಬಂಧಿಸಿದ್ದಾರೆ.
ಮೂಲತಃ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಯಾಗಿರುವ ಪ್ರಶಾಂತ್ ಮಾಡಾಳ್ ಅವರು ನಿಯೋಜನೆ ಮೇರೆಗೆ ಬೆಂಗಳೂರು ಜಲಮಂಡಳಿ ಮುಖ್ಯ ಲೆಕ್ಕಾಧಿಕಾರಿಯ ಹುದ್ದೆಯಲ್ಲಿದ್ದಾರೆ. ಪ್ರಶಾಂತ್ ಅವರು ಹೊಂದಿದ್ದಾರೆ ಎನ್ನಲಾದ ಖಾಸಗಿ ಕಚೇರಿಯಲ್ಲಿ ಸಂಜೆ ವೇಳೆ ಲಂಚದ ಹಣ 40 ಲಕ್ಷ ರೂಪಾಯಿಗಳನ್ನು ಪಡೆಯುತ್ತಿದ್ದಾಗ ಅವರನ್ನು ಸ್ಥಳದಲ್ಲೇ ಹಿಡಿದು ಬಂಧಿಸಲಾಗಿದೆ.

ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ ನಿಯಮಿತಕ್ಕೆ ರಸಾಯನಿಕ ಪೂರೈಕೆಗೆ ಆಯ್ಕೆಯಾಗಿರುವ ಗುತ್ತಿಗೆದಾರರಿಂದ ಮಾಡಾಳ್ ವಿರೂಪಾಕ್ಷಪ್ಪ ಅವರು 81 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಆ ಹಣವನ್ನು ತನ್ನ ಮಗ ಪ್ರಶಾಂತ್ ಮಾಡಾಳ್ ಅವರಿಗೆ ತಲುಪಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದರು ಎಂದು ತಿಳಿದು ಬಂದಿದೆ.












Click it and Unblock the Notifications