Lokayukta Raid: ಲೋಕಾಯುಕ್ತ ದಾಳಿ ವೇಳೆ ಕೆ.ಜಿ.ಗಟ್ಟಲೆ ಚಿನ್ನ, ಕೋಟಿಗಟ್ಟಲೆ ಆಸ್ತಿ ಹಣ ಪತ್ತೆ
ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬೆಳ್ಳಂಬೆಳಿಗ್ಗೆ ಭ್ರಷ್ಟ ಅಧಿಕಾರಿಗಳ ಬೆನ್ನತ್ತಿದ್ದಾರೆ. ಇಂದು ಹತ್ತು ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ ನಡೆದಿದ್ದು, ಈ ವೇಳೆ ಭ್ರಷ್ಟ ಅಧಿಕಾರಿಗಳ ನಿವಾಸಗಳಲ್ಲಿ ಕೆಜಿಗಟ್ಟಲೆ ಚಿನ್ನಾಭರಣ ಹಾಗೂ ಅಕ್ರಮ ಆಸ್ತಿ ಪತ್ತೆಯಾಗಿದೆ. ಮೈಸೂರಿನ ಹೂಟಗಳ್ಳಿ ಪುರಸಭೆ ಕಂದಾಯ ನಿರೀಕ್ಷಕ ರಾಮಸ್ವಾಮಿ ಅವರ ನಗರದ ನಿವಾಸದ ಮೇಲೆ ದಾಳಿ ನಡೆಸಿದಾಗ ಕೋಟ್ಯಂತರ ಮೌಲ್ಯದ ಆಸ್ತಿ ಪತ್ರಗಳು, ಚಿನ್ನಾಭರಣಗಳು ಮತ್ತು ನಗದು ಪತ್ತೆಯಾಗಿದೆ.
ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಮಂಡ್ಯ, ಬೆಂಗಳೂರು, ಹಾವೇರಿ, ದಾವಣಗೆರೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳಿಗ್ಗೆ ಏಕಕಾಲಕ್ಕೆ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಿದ್ದಾರೆ. RTO ಸೂಪರಿಂಟೆಂಡೆಂಟ್ ಕುಮಾರಸ್ವಾಮಿ, ಸಿಎಒ ಪುಟ್ಟಸ್ವಾಮಿ, ಇಂಜಿನಿಯರ್ ಪ್ರೇಮ್ ಸಿಂಗ್ ಸೇರಿದಂತೆ ಹಲವರನ್ನು ಪರಿಶೀಲನೆಗೆ ಒಳಪಡಿಸಲಾಗಿದೆ. ದಾವಣಗೆರೆಯ ಎಪಿಎಂಸಿ ಸಹಾಯಕ ನಿರ್ದೇಶಕ ಪ್ರಭು ನಿವಾಸದ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ.

ಎಲ್ಲೆಲ್ಲಿ ದಾಳಿ?
ಬೀದರ್‌ನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಮುಖ್ಯ ಇಂಜಿನಿಯರ್ ಪ್ರೇಮ್‌ಸಿಂಗ್ ರಾಥೋಡ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದೆ. ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಭೀಮರಾಯನ ಗುಡಿಯ ನಿವಾಸ, ಕಚೇರಿ ಮೇಲೆ ದಾಳಿಯಾಗಿದೆ. ಇನ್ನು ಶಿವಮೊಗ್ಗ ಮೆಡಿಕಲ್ ಕಾಲೇಜು ಡೀನ್ ಸ್ಟೇನೋ ಮನೆ ಮೇಲೂ ಲೋಕಾಯುಕ್ತ ಬಿಸಿಮುಟ್ಟಿಸಿದೆ. ಕೊಡಗು ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಗಿರೀಶ್, ಕಚೇರಿ-ಮನೆಗಳ ಮೇಲೆ, ಮಡಿಕೇರಿಯಲ್ಲೂ ಪರಿಶೀಲನೆ ನಡೆಸಿದ್ದಾರೆ.
ಹಾವೇರಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಇಂಜಿನಿಯರ್ ಶೇಖಪ್ಪ ಸಣ್ಣಪ್ಪ ಮತ್ತಿಕಟ್ಟಿ ನಿವಾಸ, ಧಾರವಾಡದ ಪ್ರೊ.ಸುಭಾಶ್ ಚಂದ್ರ ಮನೆ, ಮಂಡ್ಯದಲ್ಲೂ ಏಕಕಾಲಕ್ಕೆ ಹಲವೆಡೆ ದಾಳಿ ನಡೆಸಿದ್ದಾರೆ. ಈ ಎಲ್ಲ ಅಧಿಕಾರಿಗಳಿಗೆ ಸಂಬಂಧಿಸಿದ ನಿವಾಸ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಕೆಲವು ಅಧಿಕಾರಿಗಳ ಮನೆಗಳಲ್ಲಿ ಭಾರೀ ಪ್ರಮಾಣದ ಚಿನ್ನಾಭರಣ, ಆಸ್ತಿ ದಾಖಲೆಗಳು ಸಿಕ್ಕಿವೆ ಎಂದು ತಿಳಿದುಬಂದಿದೆ.

ನಗದು ರಾಶಿ, ಆಭರಣಗಳು ಮತ್ತು ಐಷಾರಾಮಿ ಬಂಗಲೆಗಳು ನೋಡಿ ಲೋಕಾಯುಕ್ತ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ. ಸರ್ಕಾರಿ ಅಧಿಕಾರಿಗಳ ಮನೆಗಳು ಐಷಾರಾಮಿಯಾಗಿದ್ದು, ಕಂತೆ ಕಂತೆ ಹಣದ ನೋಟುಗಳು ರಾಶಿ ಬಿದ್ದಿವೆ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಶೋಧ ಕಾರ್ಯ ನಡೆಯುತ್ತಿದೆ, 10 ಸರ್ಕಾರಿ ಅಧಿಕಾರಿಗಳ ಮೇಲೆ ನಿಗಾ ಇಡಲಾಗಿದೆ.












Click it and Unblock the Notifications