ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನ ಪರಿಷತ್: ಧರಣಿ ವಾಪಸ್ ಪಡೆದ ಜೆಡಿಎಸ್ ಸದಸ್ಯರು!

|
Google Oneindia Kannada News

ಬೆಂಗಳೂರು, ಸೆ. 22: ರಾಜ್ಯ ಸರ್ಕಾರದ ಭರವಸೆ ಹಿನ್ನೆಲೆಯಲ್ಲಿ ಜೆಡಿಎಸ್ ಸದಸ್ಯರು ವಿಧಾನ ಪರಿಷತ್‌ನಲ್ಲಿ ನಡೆಸುತ್ತಿದ್ದ ಧರಣಿಯನ್ನು ವಾಪಸ್ ಪಡೆದಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವಶಪಡಿಸಿಕೊಂಡಿರುವ ರೈತರ ಜಮೀನಿಗೆ ಸೂಕ್ತ ಪರಿಹಾರ ಕೊಡಬೇಕು ಎಂಬ ಬೇಡಿಕೆಯೊಂದಿಗೆ ಜೆಡಿಎಸ್ ಸದಸ್ಯರು ಮಂಗಳವಾರ ಸದನದ ಬಾವಿಗಳಿದು ಧರಣಿ ಆರಂಭಿಸಿದ್ದರು. ಸೂಕ್ತ ಪರಿಹಾರದ ಭರವಸೆಯನ್ನು ಸರ್ಕಾರ ಕೊಟ್ಟ ಹಿನ್ನೆಲೆಯಲ್ಲಿ ಧರಣಿ ವಾಪಸ್ ಪಡೆದಿದ್ದಾರೆ.

ಬುಧವಾರ ಬೆಳಗ್ಗೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಜೆಡಿಎಸ್ ಸದಸ್ಯರು ಸದನದ ಬಾವಿಯಲ್ಲಿ ಧರಣಿ ಮುಂದುವರೆಸಿದ್ದರು. ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಮಾತನಾಡಿ, ''ಮೈಸೂರು ಪ್ರಾಧಿಕಾರದಲ್ಲಿ ರೈತರ ಅನುಮತಿ ಇಲ್ಲದ ಬಳಸಿಕೊಂಡ ಜಮೀನಿಗೆ ಸರಿಯಾಗಿ ಪರಿಹಾರ ಸಿಕ್ಕಿಲ್ಲ, ಕೊಡಿಸಬೇಕು. ಮೈಸೂರಿಗೆ ಬಂದು ಸಚಿವರು ಸಮಸ್ಯೆ ಪರಿಹರಿಸಬೇಕು, ಸಚಿವರು ಸ್ಪಷ್ಟವಾದ ಉತ್ತರ ನೀಡಬೇಕು,'' ಎಂದು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ, "ಸದನ ಮುಗಿದ ಕೂಡಲೇ ಪ್ರಾಧಿಕಾರದ ಸಭೆ ಕರೆದು ಕಾನೂನಿನ ಅನುಸಾರ ರೈತರಿಗೆ ಅನ್ಯಾಯವಾಗದ ರೀತಿಯಲ್ಲಿ ಕ್ರಮ ವಹಿಸಲು ಬದ್ದರಿದ್ದೇವೆ" ಎಂದು ಭರವಸೆ ನೀಡಿದರು. ಸರ್ಕಾರದ ಉತ್ತರವನ್ನು ಸ್ವಾಗತಿಸಿದ ಜೆಡಿಎಸ್ ಧರಣಿ ವಾಪಸ್ ಪಡೆದು ಕಲಾಪದಲ್ಲಿ ಭಾಗಿಯಾಯಿತು. ಇದೇ ಸಂದರ್ಭದಲ್ಲಿ ಕಂದಾಯ ಸಚಿವ ಆರ್. ಅಶೋಕ್ ವಿಧಾನ ಪರಿಷತ್‌ನಲ್ಲಿ ಮಹತ್ವದ ಪ್ರಕಟಣೆ ಮಾಡಿದ್ದಾರೆ.

ಮಹತ್ವದ ನಿರ್ಧಾರ ಕೈಗೊಂಡ ರಾಜ್ಯ ಸರ್ಕಾರ!

ಮಹತ್ವದ ನಿರ್ಧಾರ ಕೈಗೊಂಡ ರಾಜ್ಯ ಸರ್ಕಾರ!

''ಬ್ರಿಟೀಷರ ಕಾಲದಿಂದಲೂ ಶೈಕ್ಷಣಿಕ ಸಂಸ್ಥೆ, ಕ್ಲಬ್, ಚಾರಿಟೆಬಲ್ ಟ್ರಸ್ಟ್‌ಗಳಿಗೆ ಸರ್ಕಾರವು ಲೀಸ್ ಆಧಾರದಲ್ಲಿ ನೀಡಲಾಗಿರುವ ಭೂಮಿಯನ್ನು ಸರ್ಕಾರದ ಮಾರ್ಗಸೂಚಿ ದರದಂತೆ ಅವರಿಗೆ ಕೊಡಲು ಸರ್ಕಾರ ನಿರ್ಧರಿಸಿದೆ'' ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಪ್ರಶ್ನೆಗೆ ಉತ್ತರಿಸಿದ ಸಚಿವ ಆರ್. ಅಶೋಕ್, "ಬ್ರಿಟೀಷರ ಕಾಲದಲ್ಲಿ ಲೀಸ್ ಮೇಲೆ ಶೈಕ್ಷಣಿಕ ಸಂಸ್ಥೆ, ಚಾರಿಟಬಲ್ ಟ್ರಸ್ಟ್, ಕ್ಲಬ್‌ಗಳಿಗೆ ಕೊಡಲಾಗಿದ್ದ ಜಮೀನನ್ನು ಲೀಸ್ ಅವದಿ ಮುಗಿದ ನಂತರ ವಾಪಸ್ ಪಡೆಯಲಾಗಿದೆ. ಆಯಾ ಕಾಲದಲ್ಲಿ ಆಯಾ ಸರ್ಕಾರಗಳು ಈ ಬಗ್ಗೆ ಕ್ರಮ ವಹಿಸಿವೆ. ಕೆಲವು ಕಡೆ ಲೀಸ್ ನವೀಕರಿಸಿವೆ ಅದು ಯಾಕೆ? ಎಂದು ಗೊತ್ತಿಲ್ಲ. ಆ ಭೂಮಿ ಮತ್ತೆ ಸರ್ಕಾರಕ್ಕೆ ವಾಪಸ್ ಸಿಗಲ್ಲ. ಹೀಗಾಗಿ ಯಾರು ಲೀಸ್ ಪಡೆದಿದ್ದಾರೋ ಅವರು ಸರ್ಕಾರದ ನಿಗದಿ ಮಾಡಿರುವ ದರ ನೀಡಬೇಕು. ಬೇರೆ ಉದ್ದೇಶಕ್ಕೆ ಬಳಸುವುದಾದರೆ ಸರ್ಕಾರದ ಮಾರ್ಗಸೂಚಿಗಿಂತ ದುಪ್ಪಟ್ಟು ಹಣ ನೀಡಬೇಕು' ಎಂದು ಕಾನೂನು ತರಲಾಗಿದೆ" ಎಂದು ತಿಳಿಸಿದ್ದಾರೆ.

"ಒಮ್ಮೆ ಲೀಸ್ ಕೊಟ್ಟರೆ ಸರ್ಕಾರದ್ದು ಎನ್ನುವ ಹೆಸರು ಮಾತ್ರ ಇರುತ್ತದೆ. ಬಿಟ್ಟರೆ ಅದು ಸರ್ಕಾರಕ್ಕೆ ವಾಪಸ್ ಬರಲ್ಲ. ಅದಕ್ಕೆ ಕಾಯ್ದೆ ತರಲಾಗಿದೆ. ಉದ್ದೇಶಿತ ಕೆಲಸಕ್ಕೆ ಮಾತ್ರ ಲೀಸ್ ಜಮೀನು ಬಳಸಬೇಕು. ವಾಣಿಜ್ಯ ಉದ್ದೇಶಕ್ಕೆ ಬಳಸಿದರೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಸದನಕ್ಕೆ ಕಂದಾಯ ಸಚಿವ ಆರ್. ಅಶೋಕ್ ಮಾಹಿತಿ ನೀಡಿದ್ದಾರೆ.

ಎತ್ತಿನ ಹೊಳೆ ಯೋಜನೆ: ಭೂ ಮಾಲೀಕರಿಗೆ ಪರಿಹಾರ

ಎತ್ತಿನ ಹೊಳೆ ಯೋಜನೆ: ಭೂ ಮಾಲೀಕರಿಗೆ ಪರಿಹಾರ

ಎತ್ತಿನ ಹೊಳೆ ಯೋಜನೆ ಅಡಿ ಭೂಸ್ವಾಧೀನ ಮಾಡಿಕೊಂಡ ಭೂ ಮಾಲೀಕರಿಗೆ ಪರಿಹಾರ ನೀಡುವ ಕಾರ್ಯ ನಡೆಸಲಾಗಿದ್ದು, ಕೆಲವು ಕಾರಣದಿಂದ ಕೆಲವರಿಗೆ ಇನ್ನು ಪರಿಹಾರ ನೀಡಲು ಸಾಧ್ಯವಾಗಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ವಿಧಾನ ಪರಿಷತ್‌ನಲ್ಲಿ ತಿಳಿಸಿದ್ದಾರೆ.

ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಗೋಪಾಲಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಸಚಿವ ಆರ್. ಅಶೋಕ್, ' ಹಾಸನ ಜಿಲ್ಲೆ ಎತ್ತಿನ ಹೊಳೆ ಯೋಜನೆ ಅಡಿ 93 ಗ್ರಾಮಗಳ 2,558 ಎಕರೆ ಜಮೀನಿನ ಸ್ವಾಧೀನಪಡಿಸಲು ನಿರ್ಧರಿಸಿದ್ದು, 2381 ಎಕರೆಗೆ ಅನುಮೋದನೆ ನೀಡಲಾಗಿದೆ. 755.33 ಎಕರೆ ಜಮೀನಿಗೆ 211,56,38,498 ರೂ.ಗಳ ಪರಿಹಾರಕ್ಕೆ ಅನುಮೋದನೆ ನೀಡಲಾಗಿದೆ. ಈವರೆಗೆ 150 ಕುಟುಂಬಕ್ಕೆ 47.43 ಕೋಟಿ ಪರಿಹಾರ ಪಾವತಿಸಲಾಗಿದೆ. 629 ಭೂಮಾಲೀಕರಿಗೆ ಪರಿಹಾರ ಪಾವತಿಸಲು ಬಾಕಿ ಇದೆ. ದಾಖಲೆಗಳನ್ನು ನೀಡುವಂತೆ ನೋಟಿಸ್ ನೀಡಿದ್ದು ದಾಖಲೆ ಕೊಡುತ್ತಿದ್ದಂತೆ ಹಣ ಪಾವತಿ ಮಾಡಲಾಗುತ್ತದೆ. ಉಳಿದ 314 ಭೂ ಮಾಲೀಕರಲ್ಲಿ ಕೆಲವು ಮಾಲೀಕರು ಕೋರ್ಟ್ ಮೊರೆ ಹೋಗಿದ್ದಾರೆ. ಕೆಲವು ಖಾತೆದಾರರು ಪೋತಿಯಾಗಿದ್ದು, ಖಾತೆ ಬದಲಾವಣೆ ಮಾಡಬೇಕಾಗಿದೆ. ಕೆಲವು ಮಾಲೀಕರು ದಾಖಲೆ ನೀಡಿಲ್ಲ ಹಾಗಾಗಿ ಪರಿಹಾರ ನೀಡಿಲ್ಲ" ಎಂದು ಮಾಹಿತಿ ನೀಡಿದರು.

ರಾಜ್ಯ ವಿಪತ್ತು ಕಾಯ್ದೆ ಅಡಿ ಮಳೆಹಾನಿ ಪರಿಹಾರ

ರಾಜ್ಯ ವಿಪತ್ತು ಕಾಯ್ದೆ ಅಡಿ ಮಳೆಹಾನಿ ಪರಿಹಾರ

ಧಾರವಾಡ ಜಿಲ್ಲೆಯಲ್ಲಿ ಸಂಭವಿಸಿದ ಮಳೆಹಾನಿಗೆ ಕೇಂದ್ರ ಮತ್ತು ರಾಜ್ಯ ವಿಪತ್ತು ಕಾಯ್ದೆ ಅಡಿ ಸೂಕ್ತ ಪರಿಹಾರ ನೀಡುವ ಕಾರ್ಯ ನಡೆಯುತ್ತಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಮಾನೆ ಶ್ರೀನಿವಾಸ ಪ್ರಶ್ನೆಗೆ ಉತ್ತರಿಸಿದ ಸಚಿವರು, 'ಧಾರವಾಡ ಜಿಲ್ಲೆಯಲ್ಲಿ 1340 ಮನೆ ಹಾನಿ,1 ಜೀವಹಾನ, ಗದಗದಲ್ಲಿ 450 ಮನೆ ಹಾನಿ, 3 ಜೀವಹಾನಿ ಹಾವೇರಿ 2747 ಮನೆಹಾನಿ,1 ಜೀವಹಾನಿ ಈಗಾಗಲೇ ಸರ್ಕಾರ ವಿಪತ್ತು ಕಾಯ್ದೆ ಅಡಿಯಲ್ಲಿ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಹಿಂದಿನ ಯಡಿಯೂರಪ್ಪ ಸರ್ಕಾರ ಮನೆ ಕಟ್ಟಲು 5 ಲಕ್ಷ ಹಣವನ್ನು, ಜೀವ ಹಾನಿಗೂ 5 ಲಕ್ಷ ಪರಿಹಾರ ಘೋಷಿಸಿದೆ. 80 ಲಕ್ಷ ರೂ. ಮಾನವ ಜೀವಹಾನಿಗೆ, ಪ್ರಾಣಿಗಳ ಪ್ರಾಣಹಾನಿಗೆ 51.79 ಲಕ್ಷ ರೂ. ಪರಿಹಾರ, 81.76 ಲಕ್ಷ ರೂ. ನೀರು ನುಗ್ಗಿ ಹಾನಿನ, 21 ಕೋಟಿ ಪ್ರವಾಹ ತುರ್ತಿಗೆ, 38 ಕೋಟಿ ರೂ. ಬೆಳೆ ಹಾನಿ ಇನ್ ಪುಟ್ ಸಬ್ಸಿಡಿಗೆ ಕೊಡಲಾಗಿದೆ, ಮನೆ ಪರಿಹಾರಕ್ಕೆ 11.07 ಕೋಟಿ ಸೇರಿ ಒಟ್ಟು 154.65 ಕೋಟಿ ರೂ.ಗಳ ಪರಿಹಾರ ನೀಡಲಾಗಿದೆ. ಯಾರದ್ದಾದರೂ ಹೆಸರು ಬಿಟ್ಟಿದ್ದರೆ ಡಿಸಿಗೆ ತಿಳಿಸಿ ಹೆಸರು ಸೇರಿಸಲಾಗುತ್ತದೆ' ಎಂದರು.

ಶಿಥಿಲ ಮನೆ ಕೆಡವಿ ಅಂದರೆ ಕೊಟ್ಟ ಮೊದಲ ಕಂತಿನ ಹಣದಲ್ಲಿ ರಿಪೇರಿ ಮಾಡಿಸಿ ಕೊಂಡಿದ್ದಾರೆ. ಹಾಗಾಗಿ ಬಾಕಿ ಉಳಿದ ಹಣ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ, ಬೇರೆ ಲೋಪಗಳಿದ್ದಲ್ಲಿ ಸರಿಪಡಿಸಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

Recommended Video

ಸಿದ್ದರಾಮಯ್ಯ ಪಂಚೆ ಕಳಚಿ ಬೀಳ್ತಿದ್ದಂತೆ ಡಿಕೆ ಶಿವಕುಮಾರ್ ಮಾಡಿದ್ದೇನು? | Oneindia Kannada
ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಕ್ರಮ!

ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಕ್ರಮ!

ರಾಜ್ಯದಲ್ಲಿ ಹಲವು ಕಡೆ ಪುರಾತನ ದೇವಾಲಯಗಳು ಶಿಥಿಲಾವಸ್ಥೆಗೆ ತಲುಪಿರುವ ವಿಷಯವನ್ನು ಕಾಂಗ್ರೆಸ್ ಸದಸ್ಯ ಪಿ.ಆರ್. ರಮೇಶ್ ಅವರು ವಿಧಾನ ಪರಿಷತ್‌ನಲ್ಲಿ ಪ್ರಸ್ತಾಪಿಸಿದ್ದಾರೆ. ಅವರ ಪ್ರಸ್ತಾಪಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವೆ ಶಶಿಕಲಾ ಜೊಲ್ಲೆ, "ಕೆಲ ದೇವಾಲಯಗಳು ಶಿಥಿಲಾವಸ್ಥೆಗೆ ತಲುಪಿರುವ ವಿಷಯ ನನ್ನ ಗಮನಕ್ಕೆ ಬಂದಿದೆ. ಪುರಾತನ ಕಾಲದ ದೇವಾಲಯಗಳು ಸಂರಕ್ಷಿತ ಸ್ಮಾರಕಗಳಾಗಿದ್ದಲ್ಲಿ ಅವುಗಳನ್ನು ಭಾರತೀಯ ಪುರಾತತ್ವ ಇಲಾಖೆಯಡಿ ಅಭಿವೃದ್ದಿ ಪಡಿಸಲಾಗುತ್ತದೆ" ಎಂದು ಭರವಸೆ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಬೆಂಗಳೂರಿನ ಶಿವಾಜಿನಗರದಲ್ಲಿರುವ ನಂದಿ ದೇವಾಲಯ ಶಿಥಿಲಾವಸ್ಥೆ ತಲುಪಿದೆ ನಿಮ್ಮ ಗಮನಕ್ಕೆ ಬಂದಿದೆಯಾ ಎಂದು ಪಿ.ಆರ್. ರಮೇಶ್ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಉತ್ತರಿಸಿದ ಸಚಿವೆ ಶಶಿಕಲಾ ಜೊಲ್ಲೆ, "ಶಿವಾಜಿನಗರದ ಬ್ರಾಡ್‌ವೇ ರಸ್ತೆಯಲ್ಲಿರುವ ನಂದಿ ದೇವಾಲಯ ಖಾಸಗೀ ದೇವಾಲಯ. ಇಂದ್ರಾಣಿ ಎಂಬುವವರು ದೇವಸ್ಥಾನವನ್ನು ನಿರ್ವಹಣೆ ಮಾಡುತ್ತಿದ್ದಾರೆ. ದುರಸ್ಥಿತಿಗೆ ಅಗತ್ಯ ಕ್ರಮ ವಹಿಸಲು ಜಿಲ್ಲಾಧಿಕಾರಿ ಹಾಗೂ ಯಲಹಂಕ ತಹಶೀಲ್ದಾರ್ ಅವರಿಗೆ ನಿರ್ದೇಶನ ನೀಡಿದ್ದೇನೆ" ಎಂದು ಭರವಸೆ ನೀಡಿದ್ದಾರೆ.

English summary
Karnataka Legislative Council Session: JDS members take back protest. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X