ನ್ಯಾಯಮೂರ್ತಿ ವಿ.ಎಸ್.ಮಳಿಮಠ ವಿಧಿವಶ
ಬೆಂಗಳೂರು, ಡಿಸೆಂಬರ್ 23 : ಕರ್ನಾಟಕ ಮತ್ತು ಕೇರಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ್ದ ವಿ.ಎಸ್.ಮಳಿಮಠ ಅವರು ಬುಧವಾರ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಅನಾರೋಗ್ಯದಿಂದ ಬಳಲುತ್ತಿದ್ದ ವಿ.ಎಸ್.ಮಳಿಮಠ (86) ಅವರು ಬುಧವಾರ ಬೆಳಗ್ಗೆ ವಿಧಿವಶರಾಗಿದ್ದಾರೆ ಎಂದು ಕುಟುಂಬದವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಚಾಮರಾಜಪೇಟೆಯ ಸ್ಮಶಾನದಲ್ಲಿ ಡಿ.24ರ ಗುರುವಾರ ಬೆಳಗ್ಗೆ ಮಳಿಮಠ ಅಂತ್ಯಕ್ರಿಯೆ ನಡೆಯಲಿದೆ. [ನ್ಯಾ.ವಿಕ್ರಂಜಿತ್ ಸೇನ್ ನೂತನ ಲೋಕಾಯುಕ್ತ?]

ಮಳಿಮಠ ಅವರ ಪರಿಚಯ : ಕರ್ನಾಟಕದಲ್ಲಿ ಕಾನೂನು ಪದವಿ ಪಡೆದಿದ್ದ ಮಳಿಮಠ ಅವರು 1952ರಲ್ಲಿ ಲಂಡನ್ ವಿಶ್ವವಿದ್ಯಾಲಯದಿಂದ 'ಅಂತರರಾಷ್ಟ್ರೀಯ ಸಾರ್ವಜನಿಕ ಕಾನೂನು' ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪದವಿ ಪಡೆದಿದ್ದರು. [ಉಪ ಲೋಕಾಯುಕ್ತ ಪದಚ್ಯುತಿ, ಉಲ್ಟಾ ಹೊಡೆದ ಸರ್ಕಾರ!]
1952ರಲ್ಲಿ ಬಾಂಬೆ ಹೈಕೋರ್ಟ್‌ನಲ್ಲಿ ವಕೀಲಿ ವೃತ್ತಿ ಆರಂಭಿಸಿದ ಅವರು, 1956ರಲ್ಲಿ ಬೆಂಗಳೂರಲ್ಲಿ ವೃತ್ತಿ ಮುಂದುವರೆಸಿದರು.1968ರಲ್ಲಿ ಮಳಿಮಠ ಅವರು ಅಡ್ವೊಕೇಟ್ ಜನರಲ್ ಆಗಿ ನೇಮಕವಾದರು. 1970ರಲ್ಲಿ ರಾಜ್ಯ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ನೇಮಕಗೊಂಡ ಅವರು, 1984ರಲ್ಲಿ ಮುಖ್ಯ ನ್ಯಾಯಮೂರ್ತಿಗಳಾದರು. 1985ರಲ್ಲಿ ಕೇರಳ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರವಹಿಸಿಕೊಂಡರು.
ನಿವೃತ್ತಿಯ ನಂತರ ಕೇಂದ್ರ ಆಡಳಿತ ನ್ಯಾಯಮಂಡಳಿಯ (ಸಿಎಟಿ) ಅಧ್ಯಕ್ಷರಾಗಿ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿ, ದೇಶದ ಅಪರಾಧಿಕ ನ್ಯಾಯ ವ್ಯವಸ್ಥೆಯ ಸುಧಾರಣಾ ಸಮಿತಿಯ ಮುಖ್ಯಸ್ಥರಾಗಿ, ಕರ್ನಾಟಕ ಗಡಿ ರಕ್ಷಣಾ ಆಯೋಗದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಣೆ ಮಾಡಿದರು.












Click it and Unblock the Notifications