1994-1998 ಬ್ಯಾಚ್ DYSP ಗಳಿಗೆ ಬಡ್ತಿ ಕೊಡದೇ ಮಹಾ ದ್ರೋಹ!
ಬೆಂಗಳೂರು, ಡಿ. 16: ರಾಜ್ಯದ ಪೊಲೀಸ್ ಇಲಾಖೆಗೆ ಸಿವಿಲ್ ಪಿಎಸ್ಐಗಳಾಗಿ ನೇಮಕಗೊಂಡು 30 ವರ್ಷ ಸೇವೆ ಸಲ್ಲಿಸಿದ ಪೊಲೀಸ್ ಅಧಿಕಾರಿಗಳಿಗೆ ಬಡ್ತಿ ಸಿಗದೇ ಭಾರೀ ಅನ್ಯಾಯಕ್ಕೆ ಒಳಗಾಗಿದ್ದಾರೆ. 1994 ಮತ್ತು 1998 ರಲ್ಲಿ ಪಿಎಸ್ಐಗಳಾಗಿ ನೇಮಕಗೊಂಡಿರುವ ಪೊಲೀಸ್ ಅಧಿಕಾರಿಗಳು ಕೇವಲ ಎರಡು ಬಡ್ತಿ ಪಡೆದು ಡಿವೈಸ್ಪಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಪರ್ಯಾಸವೆಂದರೆ 2002 ರಲ್ಲಿ ಡಿಟೆಕ್ಟಿವ್ ಪಿಎಸ್ಐ ಅಗಿ ಸಿಐಡಿಗೆ ನೇಮಕಗೊಂಡಿರುವ ಅಧಿಕಾರಿಗಳು ಅದಾಗಲೇ ಪೊಲೀಸ್ ಅಧೀಕ್ಷಕರಾಗಿ ( SP) ಬಡ್ತಿ ಪಡೆದು ತನಗಿಂತೂ ಹಿರಿಯ ಅಧಿಕಾರಿಗಳಿಗೆ ಬಾಸ್ ಗಳಾಗಿ ನೇಮಕಗೊಂಡಿದ್ದಾರೆ. ಸಿವಿಲ್ ಪೊಲೀಸ್ ಅಧಿಕಾರಿಗಳಿಗೆ ಬಡ್ತಿ ನೀಡದೇ ಸೇವಾವಧಿಯಲ್ಲಿ ತನಗಿಂತೂ ಕಿರಿಯರಿಗೆ ಬಡ್ತಿ ಕೊಟ್ಟು ಮೇಲೆ ಕೂರಿಸಿರುವ ಗೃಹ ಇಲಾಖೆಯ ಕಾನೂನು ಬಾಹಿರ ಬಡ್ತಿ ಇದೀಗ ಪೊಲೀಸ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಭಾರೀ ಅನ್ಯಾಯ:
1994- 1998 ರಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗಳಾಗಿ ನೇಮಕಗೊಂಡ ಅಧಿಕಾರಿಗಳು 25 ವರ್ಷದಿಂದ 30 ವರ್ಷ ಸೇವೆ ಮಾಡಿ ಕೇವಲ ಎರಡು ಹುದ್ದೆಗಳಿಗೆ ಬಡ್ತಿ ಹೊಂದಿದ್ದಾರೆ. ಇನ್‌ಸ್ಪೆಕ್ಟರ್ ಹುದ್ದೆಗೆ ಬಡ್ತಿ ಪಡೆದು, ಆ ಬಳಿಕ ಡಿವೈಸ್ಪಿಗಳಾಗಿದ್ದಾರೆ.
ಆದರೆ, 2002 ರಲ್ಲಿ ಕೇವಲ ಸಿಐಡಿ ಕಚೇರಿಗೆ ಸೀಮಿತಗೊಳಿಸಿ ಡಿಟೆಕ್ಟೀವ್ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ನೇಮಕಗೊಂಡಿರುವ 25 ಪಿಎಸ್ಐಗಳು ಇಪ್ಪತ್ತು ವರ್ಷಕ್ಕೆ ಅದಾಗಲೇ ಪೊಲೀಸ್ ಎಸ್ಪಿಗಳಾಗಿ ಬಡ್ತಿ ಪಡೆದಿದ್ದಾರೆ. ಮಾತ್ರವಲ್ಲ ತಮಗಿಂತೂ ಎಂಟು ವರ್ಷ ಮೊದಲೇ ಪಿಎಸ್ಐ ಸಿವಿಲ್ ಹುದ್ದೆಗೆ ನೇಮಕಗೊಂಡು ಸೇವೆ ಮಾಡಿದ ಸಿವಿಲ್ ಡಿವೈಸ್ಪಿಗಳು ತಮಗಿಂತಲೂ ಹತ್ತು ವರ್ಷ ಹಿಂದೆ ಪಿಎಸ್ಐ ಗಳಾಗಿ ನೇಮಕಗೊಂಡಿದ್ದ ಡಿಟೆಕ್ಟೀವ್ ಅಧಿಕಾರಿಗಳ ಕೈ ಕೆಳಗೆ ಕೆಲಸ ಮಾಡುವ ಭಾಗ್ಯವನ್ನು ಗೃಹ ಇಲಾಖೆ ಕಲ್ಪಿಸಿದೆ.

ಗೃಹ ಇಲಾಖೆ ಮಹಾ ಯಡವಟ್ಟು:
1994- 98 ರಲ್ಲಿ ಪಿಎಸ್ಐ ಸಿವಿಲ್ ಹುದ್ದೆಗೆ ನೇಮಕಗೊಂಡವರು ಅದಾಗಲೇ 30 ವರ್ಷ ಸೇವೆ ಸಲ್ಲಿಸಿದ್ದಾರೆ. ಖಾಲಿಯಾಗಿರುವ ಎಸ್ಪಿ ಸಿವಿಲ್ ಹುದ್ದೆಗಳಿಗೆ ಡಿವೈಎಸ್ಪಿಗಳಾಗಿ ಸೇವೆ ಸಲ್ಲಿಸಿದ ಅರ್ಹ ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡಬೇಕಿತ್ತು. ಡಿವೈಎಸ್ಪಿ ಸಿವಿಲ್ ಅವರಿಗೆ ಬಡ್ತಿ ಕೊಟ್ಟಿಲ್ಲ. ಆದರೆ ತಮಗಿಂತಲೂ ಸೇವೆಯಲ್ಲಿ ಹತ್ತು ವರ್ಷ ಕಿರಿಯರಾಗಿರುವ ಡಿಟೆಕ್ಟೀವ್ ಪಿಎಸ್ಐ ಗಳಿಗೆ ಕಾಲ- ಕಾಲಕ್ಕೆ ಬಡ್ತಿ ನೀಡಿ ಕಳೆದ ವರ್ಷವೇ ಎಸ್ಪಿ ಹುದ್ದೆಗಳಿಗೆ ಬಡ್ತಿ ನೀಡಲಾಗಿದೆ. ಮಾತ್ರವಲ್ಲ ಕೇವಲ ಸಿಐಡಿಗೆ ಸೀಮಿತವಾಗಬೇಕಿದ್ದ ಡಿಟೆಕ್ಟೀವ್ ಪೊಲೀಸ್ ಅಧೀಕ್ಷಕರನ್ನು ಇದೀಗ ಸಿವಿಲ್ ಪೊಲೀಸ್ ಎಸ್ಪಿ ಹುದ್ದೆಗಳಲ್ಲಿ ಕೂರಿಸಿ ಮಹಾ ಪ್ರಮಾದ ಎಸಗಲಾಗಿದೆ. ಕೇವಲ 18 ವರ್ಷ ಸೇವೆ ಮಾಡಿದ ಡಿಟೆಕ್ಟೀವ್‌ಗಳಿಗೆ ಮೂರು ಬಡ್ತಿ, ಅದೇ 30 ವರ್ಷ ಸೇವೆ ಸಲ್ಲಿಸಿದ ಸಿವಿಎಲ್ ಪಿಎಸ್ಐ ಗಳು ಇನ್ನೂ ಡಿವೈಏಸ್ಪಿ (ಎರಡು ಬಡ್ತಿ)ಗೆ ನಿವೃತ್ತಿ ಅಂಚು ತಲುಪಿದ್ದಾರೆ.

ನಿಯಮ ಬಾಹಿರ ನೇಮಕ:
ಸಿಐಡಿ ಕಚೇರಿಗೆ ಸೀಮಿತಗೊಳಿಸಿ ನೇಮಕಗೊಂಡಿದ್ದ ಡಿಟೆಕ್ವೀಟ್ ಪಿಎಸ್ಐಗಳಿಗೆ ಕಾಲಕ್ಕೆ ತಕ್ಕಂತೆ ಬಡ್ತಿ ಕೊಡಲಿ. ಅದಕ್ಕೆ ಸಿವಿಲ್ ಪಿಎಸ್ಐಗಳ (ಹಾಲಿ ಡಿವೈಎಸ್ಪಿಗಳ) ತಕರಾರು ಇಲ್ಲ. ಆದರೆ, ಅವರಿಗೆ ಬಡ್ತಿ ಕೊಟ್ಟರೂ ಅವರನ್ನು ನೇಮಕಾತಿ ನಿಯಮದಲ್ಲಿ ಉಲ್ಲೇಖಿದಂತೆ ಅವರಿಗೆ ಸಿಐಡಿಯಲ್ಲಿ ಡಿಟೆಕ್ಟೀವ್ ಎಸ್ಪಿ ಹುದ್ದೆ ಸೃಜಿಸಿ ಅಲ್ಲಿಯೇ ಪೋಸ್ಟಿಂಗ್ ಕೊಡಬೇಕಿತ್ತು. ಆದರೆ, ಎಸ್ಪಿ ಹುದ್ದೆಗಳಿಗೆ ಬಡ್ತಿ ಸಿಕ್ಕಿದ ಕೂಡಲೇ ಎಸ್ಪಿ ಸಿವಿಲ್ ಹುದ್ದೆಗಳಿಗೆ ಮೀಸಲಿಟ್ಟಿರುವ ಹುದ್ದೆಗಳಿಗೆ ನಿಯೋಜಿಸಲಾಗಿದೆ. ಹೀಗಾಗಿ ಸಿವಿಲ್ ಎಸ್ಪಿ ಹುದ್ದೆಗಳು ಖಾಲಿಯಾಗದೇ ಬರೋಬ್ಬರಿ 30 ವರ್ಷ ದುಡಿದರೂ ಎಸ್ಪಿ ಹುದ್ದೆಗೆ ಬಡ್ತಿ ಸಿಗದೇ ನಿವೃತ್ತಿಯಾಗಿ ಮನೆಗೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.
ಮಾತ್ರವಲ್ಲ, ಪಿಎಸ್ಐ ಸಿವಿಲ್ ಆಗಿ ಇವರಿಗಿಂತಲೂ ಹತ್ತು ವರ್ಷ ಹೆಚ್ಚು ಸೇವೆ ಒದಗಿಸಿ ಇವರ ಕೈಕೆಳಗೆ ಕೆಲಸ ಮಾಡುವಂತಹ ಭಾಗ್ಯವನ್ನು ಗೃಹ ಇಲಾಖೆ ಕಲ್ಪಿಸಿದೆ. ಇದು ಯಾವ ಪೊಲೀಸ್ ನಿಯಮ? ಈ ರೀತಿಯ ತಾರತಮ್ಯ ಏಕೆ? ಹಾಲಿ ಗೃಹ ಸಚಿವರು, ಹಿರಿಯ ಪೊಲೀಸ್ ಅಧಿಕಾರಿಗಳು ಯಾಕೆ ಮೌನ ವಹಿಸಿದ್ದಾರೆ? ಗೃಹ ಸಚಿವ ಆರಗ ಜ್ಞಾನೇಂದ್ರ ಅವರೇ ಇದಕ್ಕೆ ಉತ್ತರ ಕೊಡುವಿರಾ?

ಡೈರೆಕ್ಟ್ ಡಿವೈಎಸ್ಪಿಗಳಿಂದಲೂ ಹೊಡೆತ:
ಸೇವೆಯಲ್ಲಿ ಹತ್ತು ವರ್ಷ ಕಿರಿಯರಾಗಿದ್ದರೂ ಇದೀಗ ಎಸ್ಪಿಗಳಾಗಿ ಒಂದಡೆ ಮೇಲೆ ಬಂತು ಕೂತಿದ್ದಾರೆ. ಇನ್ನೊಂದೆಡೆ ಡಿವೈಎಸ್ಪಿಗಳಾಗಿ ನೇಮಕಗೊಂಡು ಸದ್ಯ ಐಪಿಎಸ್ ಹುದ್ದೆಗಳಿಗೆ ಬಡ್ತಿ ಪಡೆದಿರುವ ಪೊಲೀಸ್ ಅಧಿಕಾರಿಗಳು ಐದು ವರ್ಷ ಕಡ್ಡಾಯವಾಗಿ ಕೇಂದ್ರ ಸೇವೆಗೆ ತೆರಳಬೇಕು. ಪೊಲೀಸ್ ಇಲಾಖೆಯ ಮಾಹಿತಿ ಪ್ರಕಾರ ಬಹುತೇಕ ಅಧಿಕಾರಿಗಳು ಕೇಂದ್ರ ಸೇವೆಗೆ ಹೋಗಿಲ್ಲಎನ್ನಲಾಗಿದೆ. ಹೀಗಾಗಿ ಐಪಿಎಸ್ ಅಧಿಕಾರಿಗಳನ್ನು ಕೂಡ ನಾನ್ ಐಪಿಎಸ್ (ಎಸ್ಪಿ) ಹುದ್ದೆಗಳಲ್ಲಿ ಕೂರಿಸಲಾಗಿದೆ. ಬಡ್ತಿ ಆಧಾರಿತ ಎಸ್ಪಿ ಹುದ್ದೆಗಳು ಖಾಲಿಯಾಗದೇ ಮೂರು ದಶಕ ಕಳೆದರೂ ಡಿವೈಎಸ್ಪಿ ಸಿವಿಲ್ ಅಧಿಕಾರಿಗಳು ಬಡ್ತಿ ಸಿಗದೇ ನಿವೃತ್ತಿಯಾಗಬೇಕಕಾದ ಪರಿಸ್ಥಿತಿ ಎದುರಾಗಿದೆ.
ಒಂದೆಡೆ ಡಿಟೆಕ್ಟೀವ್‌ಗಳ ಹೊಡೆತ, ಮತ್ತೊಂದು ಕಡೆ ಐಪಿಎಸ್ ಅಧಿಕಾರಿಗಳ ಹೊಡೆತ. ಎರಡೂ ಕಡೆ ಹೊಡತಕ್ಕೆ ಸಿಲುಕಿ 1994- 1998 ಬ್ಯಾಚ್‌ನ ಡಿವೈಎಸ್ಪಿ ಸಿವಿಲ್ ಅಧಿಕಾರಿಗಳು ಚಿತ್ರಾನ್ಹ ಆಗಿದ್ದಾರೆ! ಇವರ ಕಷ್ಟ ಕೇಳುವರು ಇಲ್ಲ. ಇವರಿಗೆ ಆಗಿರುವ ಅನ್ಯಾಯ ಬಗ್ಗೆ ಧ್ವನಿಯೆತ್ತವರು ಇಲ್ಲ. ಎಲ್ಲದ್ದಕ್ಕೂ ಪೊಲೀಸ್ ಸೇವಾ ನಿಯಗಳು ಅಡ್ಡಿಯಾಗಿರಬೇಕು! ಹಾಲಿ ಗೃಹ ಸಚಿವರು ಈಗಲಾದರೂ ಎಚ್ಚೆತ್ತು ಇನ್ನೊಂದು ಬಡ್ತಿ ನೀಡಿ ತಮಗಿಂತಲೂ ಕಿರಿಯರಾಗಿರುವ ಡಿಟೆಕ್ಟೀವ್‌ಗಳ ಸರಿ ಸಮಾನ ಹುದ್ದೆ ಕರುಣಿಸಲು ಮನಸು ಮಾಡುತ್ತಾರಾ ಕಾದು ನೋಡಬೇಕು.

MLC ಪುಟ್ಟಣ್ಣ ಪ್ರಶ್ನೆ
ಇನ್ನು 1994-1998 ನೇ ಸಾಲಿನ ಡಿವೈಎಸ್ಪಿ ಸಿವಿಲ್ ಅವರ ಬಡ್ತಿ ವಿಚಾರದಲ್ಲಿ ಆಗಿರುವ ಅನ್ಯಾಯದ ಬಗ್ಗೆ ಸ್ಪಷ್ಟನೆ ನೀಡುವಂತೆ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಗೃಹ ಸಚಿವರು 1994-1998 ಬ್ಯಾಚ್ ನ ಡಿವೈಎಸ್ಪಿ - ಸಿವಿಲ್ ಅವರಿಗೆ ಆಗಿರುವ ಅನ್ಯಾಯ ಸರಿಪಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುವರಾ ಕಾದು ನೋಡಬೇಕು.












Click it and Unblock the Notifications