
ಪದವೀಧರ ಪ್ರಾಥಮಿಕ ಶಿಕ್ಷಕರ ಅಂತಿಮ ಆಯ್ಕೆ ಪಟ್ಟಿ ಪ್ರಕಟಣೆಗೆ ಹೈಕೋರ್ಟ್ ತಡೆ
ಬೆಂಗಳೂರು, ಡಿಸೆಂಬರ್ 1 : ನವೆಂಬರ್ 18ರಂದು ಶಿಕ್ಷಣ ಇಲಾಖೆಯು ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಆಯ್ಕೆಯಾದವರ ತಾತ್ಕಾಲಿಕ ಪಟ್ಟಿಯನ್ನು ಪ್ರಕಟಿಸಿದ್ದು, ಇದೀಗ ಹೈಕೋರ್ಟ್ ಮಧ್ಯಂತರ ತಡಯಾಜ್ಞೆ ನೀಡಿದೆ.
ಶಿಕ್ಷಕರ ನೇಮಕಾತಿ ಆಯ್ಕೆಯಾದವರ ಪಟ್ಟಿಯಲ್ಲಿ ಆಯ್ಕೆ ಅನುಪಾತದ ನಿಯಮದಂತೆ 1:2 ಅಡಿಯಲ್ಲಿ ಆಯ್ಕೆಯಾಗುವ ಅರ್ಹತೆ ಇದ್ದರೂ ಮೀಸಲಾತಿ ಗೊಂದಲದಿಂದ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ತಮ್ಮ ಹೆಸರು ಪ್ರಕಟವಾಗಿಲ್ಲವೆಂದು ಉಡುಪಿಯ ಯಡ್ತಾಡಿಯ ಅನಿತಾ ಮತ್ತಿತರ 24 ಮಂದಿ ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಪರಿಶೀಲಿಸಿದ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ, ಈ ಆದೇಶ ನೀಡಿದೆ.
ವಾದ - ಪ್ರತಿವಾದ ಆಲಿಸಿದ ಬಳಿಕ ನ್ಯಾಯಪೀಠ, ಅರ್ಜಿದಾರರು ಮಧ್ಯಂತರ ಪರಿಹಾರವಾಗಿ ಕೋರಿರುವಂತೆ ಅಂತಿಮ ಪಟ್ಟಿಯಲ್ಲಿ ಅರ್ಜಿದಾರರನ್ನು ಪರಿಗಣಿಸಬೇಕು ಮತ್ತು ಶಿಕ್ಷಣ ಇಲಾಖೆ ಈಗಾಗಲೇ 2022ರ ನವೆಂಬರ್ 18ರಂದು ಪ್ರಕಟಿಸಿರುವ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಣೆ ನಂತರದ ಪ್ರಕ್ರಿಯೆಯನ್ನು ಮುಂದುವರಿಸುವಂತಿಲ್ಲ ಎಂದು ತಡೆಯಾಜ್ಞೆ ನೀಡಿದೆ.
ಇನ್ನೂ ಅರ್ಜಿ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ ಸೇರಿ ಎಲ್ಲಾ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಡಿಸೆಂಬರ್ 9ಕ್ಕೆ ಮುಂದೂಡಲಾಗಿದೆ.
ಅಲ್ಲದೇ ರಾಜ್ಯದ 15 ಸಾವಿರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಸಂಬಂಧ ಅಭ್ಯರ್ಥಿಗಳ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಸಲ್ಲಿಕೆಯಲ್ಲಿ ಉಂಟಾಗಿರುವ ಗೊಂದಲದ ಪರಿಣಾಮ, 1:1 ಅನುಪಾತದ ತಾತ್ಕಾಲಿಕ ಆಯ್ಕೆಪಟ್ಟಿಗೆ ಹೈಕೋರ್ಟ್ ತಡೆಯಾಜ್ಞೆ ಬಿದ್ದಂತಾಗಿದೆ. ಅರ್ಜಿದಾರ ಪರ ವಾದ ಮಂಡಿಸಿದ್ದ ಹಿರಿಯ ನ್ಯಾಯವಾದಿ ಶಶಿಕಿರಣ್ ಶೆಟ್ಟಿ, 'ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಮೀಸಲು ಮತ್ತು ರೊಟೇಷನ್ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಿಲ್ಲ. ಇದು ಕಾನೂನುಬಾಹಿರವಾಗಿದೆ. ಇದರಿಂದ ಸಾಕಷ್ಟು ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಹಾಗಾಗಿ, ತಡೆಯಾಜ್ಞೆ ಎಂದು ನ್ಯಾಯಪೀಠವನ್ನು ಕೋರಿದರು.
ಶಿಕ್ಷಕರ ನೇಮಕಾತಿ ಪ್ರಕಟಣೆ ಹಿನ್ನೆಲೆ.
ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆಯ 15,000 ಪದವೀಧರ,ಪ್ರಾಥಮಕ ಶಿಕ್ಷಕರ ಹುದ್ದೆಗಳಿಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 1:1 ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ 13,363 ಅಭ್ಯರ್ಥಿಗಳು ಆಯ್ಕೆಯಾಗಿದ್ದರು.
ಒಟ್ಟು 15000 ಪಧವೀದರ ಹುದ್ದೆಗಳ ಪೈಕಿ 13363 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಯಾವುದೇ ರೀತಿಯ ಗೊಂದಲಗಳು ಇಲ್ಲದೆ ಇಲಾಖೆ ಪರೀಕ್ಷೆ ನಡೆಸಿದೆ ಎಂದು ಶಿಕ್ಷಣ ಸಚಿವ ಬಿ.ಸ;ಿ ನಾಗೇಶ್ ಮಾಹಿತಿ ನೀಡಿದರು.
ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ರಾಜ್ಯ ಬಿಜೆಪಿ ಸರ್ಕಾರ ದೂರದೃಷ್ಟಿಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದು, 9 ತಿಂಗಳ ಒಳಗೆ 15,000 ಶಿಕ್ಷಕರ ನೇಮಕ ಪ್ರಕ್ರಿಯೆಯನ್ನು ಅಂತಿಮಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಹಿಂದಿನ ನೇಮಕಾತಿಗಳಿಗೆ ಹೋಲಿಸಿದರೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಆಯ್ಕೆಯಾಗಿದ್ದಾರೆ. ಇದರಿಂದ ಖಾಯಂ ಶಿಕ್ಷಕರ ಕೊರತೆ ನೀಗಲಿದೆ, ಹಿಂದಿನ ಎರಡು ಅವಧಿಯಲ್ಲಿ ನಡೆದ ನೇಮಕ ಪರೀಕ್ಷೆಯಲ್ಲಿ ಕ್ರಮವಾಗಿ 3,389 ಹಾಗೂ 1,994 ಶಿಕ್ಷಕರ ಹುದ್ದೆಗಳು ಭರ್ತಿಯಾಗಿದ್ದವು. ಈ ಬಾರಿ ಬಿ.ಎಸ್ಸಿಯಲ್ಲಿ ಹೊಸ ಕಾಂಬಿನೇಷನ್, ಎಂಜಿನಿಯರಿಂಗ್ ಪದವೀಧರರಿಗೆ ಅವಕಾಶ ನೀಡಲಾಗಿತ್ತು. ವಯೋಮಿತಿ ಸಡಿಲಿಕೆ ಸೇರಿದಂತೆ ನೇಮಕ ನಿಯಮಗಳಲ್ಲಿ ಸಾಕಷ್ಚು ಸುಧಾರಣೆ ಕ್ರಮಗಳನ್ನು ಅನುಸರಿಸಿದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರ ನೇಮಕ ಸಾಧ್ಯವಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದರು.