ಸರ್ಕಾರಿ ಕಚೇರಿಗಳಲ್ಲಿ ಇನ್ಮುಂದೆ ಕರಿದ ತಿಂಡಿ, ಟೀ-ಕಾಫಿ ಬ್ಯಾನ್: ಸಿರಿಧಾನ್ಯಗಳಿಗೆ ಆದ್ಯತೆ ನೀಡುವಂತೆ ಆರೋಗ್ಯ ಇಲಾಖೆ ಸೂಚನೆ
ಬೆಂಗಳೂರು: ರಾಜ್ಯದ ಸುಮಾರು 6 ಲಕ್ಷ ಸರ್ಕಾರಿ ನೌಕರರ ಆರೋಗ್ಯ ಸುಧಾರಿಸುವ ಹಾಗೂ ಉತ್ತಮ ಜೀವನಶೈಲಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ. ಸರ್ಕಾರಿ ಕಚೇರಿಗಳಲ್ಲಿ ನಡೆಯುವ ಸಭೆಗಳು, ಸಮಾರಂಭಗಳು ಹಾಗೂ ಕ್ಯಾಂಟೀನ್‌ಗಳಲ್ಲಿ ಸಿರಿಧಾನ್ಯ ಆಧಾರಿತ ತಿಂಡಿಗಳು, ಕಡಿಮೆ ಸಕ್ಕರೆ ಇರುವ ಆಹಾರ ಹಾಗೂ ಆರೋಗ್ಯಕರ ಪಾನೀಯಗಳನ್ನು ಮಾತ್ರ ಒದಗಿಸುವಂತೆ ಶಿಫಾರಸು ಮಾಡಿ ಸಮಗ್ರ ಪೌಷ್ಟಿಕಾಂಶ ಮಾರ್ಗಸೂಚಿಯನ್ನು ಇಲಾಖೆಯು ಸೋಮವಾರ ಅಧಿಕೃತವಾಗಿ ಹೊರಡಿಸಿದೆ.
ಆರೋಗ್ಯ ಇಲಾಖೆ ಆಯುಕ್ತರಾದ ಗುರುದತ್ತ ಹೆಗಡೆ ಅವರು ಈ ನೂತನ ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಕಚೇರಿಯ ಕಾರ್ಯನಿರ್ವಹಣಾ ಸ್ಥಳಗಳಲ್ಲಿ ನೌಕರರ ಆಹಾರ ಪದ್ಧತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. "ವಿಶ್ವ ಆರೋಗ್ಯ ಸಂಸ್ಥೆಯ (WHO) ವ್ಯಾಖ್ಯಾನದಂತೆ, ಆರೋಗ್ಯ ಎಂದರೆ ಕೇವಲ ರೋಗ ಅಥವಾ ಅಂಗವೈಕಲ್ಯ ಇಲ್ಲದಿರುವುದಲ್ಲ; ಬದಲಾಗಿ ಅದು ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಯೋಗಕ್ಷೇಮವನ್ನು ಒಳಗೊಂಡಿರುತ್ತದೆ. ಉತ್ತಮ ಆಹಾರ ಮತ್ತು ಪೌಷ್ಟಿಕಾಂಶವು ರೋಗನಿರೋಧಕ ಪ್ರಾಥಮಿಕ ಆರೋಗ್ಯದ ಅವಿಭಾಜ್ಯ ಅಂಗವಾಗಿದೆ. ಆದರೆ, ಸರ್ಕಾರಿ ಕಚೇರಿಗಳು ಮತ್ತು ಸಂಬಂಧಿತ ಕಾರ್ಯಕ್ರಮಗಳಲ್ಲಿ ನೀಡಲಾಗುವ ಆಹಾರ, ತಿಂಡಿ ಮತ್ತು ಪಾನೀಯಗಳು ಆರೋಗ್ಯಕರವಾಗಿರುವುದಿಲ್ಲ ಮತ್ತು ಅವು ಉತ್ತಮ ಪೌಷ್ಟಿಕಾಂಶವನ್ನು ಉತ್ತೇಜಿಸುವುದಿಲ್ಲ ಎಂಬುದು ನಮ್ಮ ಗಮನಕ್ಕೆ ಬಂದಿದೆ" ಎಂದು ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾರ್ಗಸೂಚಿಯಲ್ಲಿ ಏನಿದೆ?
ಹೊಸ ಮಾರ್ಗಸೂಚಿಯ ಪ್ರಕಾರ, ಸರ್ಕಾರಿ ಕಚೇರಿಗಳ ಆಂತರಿಕ ಸಭೆಗಳು ಮತ್ತು ವಿರಾಮದ ಸಮಯದಲ್ಲಿ ಸಿರಿಧಾನ್ಯಗಳಿಂದ ತಯಾರಿಸಿದ ತಿಂಡಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಜೊತೆಗೆ ಕಡಿಮೆ ಕೊಬ್ಬು, ಕಡಿಮೆ ಸಕ್ಕರೆ ಹಾಗೂ ಹೆಚ್ಚು ನಾರಿನಂಶ ಇರುವ ಆಹಾರವನ್ನು ಒದಗಿಸಬೇಕು. ತಾಜಾ ಹಣ್ಣುಗಳು, ತರಕಾರಿ ಸಲಾಡ್‌ಗಳು, ಮೊಳಕೆ ಕಾಳುಗಳು ಮತ್ತು ಉಪ್ಪು ಬೆರೆಸದ ಬಾದಾಮಿ, ಕಡಲೆಕಾಯಿಯಂತಹ ಡ್ರೈ ಫ್ರೂಟ್ಸ್ ನೀಡಲು ಶಿಫಾರಸು ಮಾಡಲಾಗಿದೆ.
ಪಾನೀಯಗಳ ವಿಚಾರಕ್ಕೆ ಬಂದರೆ, ಗ್ರೀನ್ ಟಿ, ಕಡಿಮೆ ಕೊಬ್ಬಿನ ಮಜ್ಜಿಗೆ, ಮತ್ತು ಗಾಜಿನ ಅಥವಾ ಸ್ಟೀಲ್ ಬಾಟಲಿಗಳಲ್ಲಿ ಫಿಲ್ಟರ್ ಮಾಡಿದ ಅಥವಾ ಕುದಿಸಿದ ನೀರನ್ನು ನೀಡಬೇಕು. ಪ್ಲಾಸ್ಟಿಕ್ ಬಾಟಲಿಗಳ ಬಳಕೆಯನ್ನು ಸಂಪೂರ್ಣವಾಗಿ ಕೈಬಿಡಬೇಕು ಎಂದು ಸ್ಪಷ್ಟಪಡಿಸಲಾಗಿದೆ.
ಬೃಹತ್ ಸರ್ಕಾರಿ ಸಮಾರಂಭಗಳು, ವಸ್ತುಪ್ರದರ್ಶನಗಳು ಮತ್ತು ಸಮ್ಮೇಳನಗಳಲ್ಲಿ ಊಟದ ವ್ಯವಸ್ಥೆ ಹೇಗಿರಬೇಕು ಎಂಬುದರ ಬಗ್ಗೆಯೂ ಮಾರ್ಗಸೂಚಿಯಲ್ಲಿ ವಿವರಣೆ ನೀಡಲಾಗಿದೆ. ಲಘು ಉಪಾಹಾರದಲ್ಲಿ ಕನಿಷ್ಠ ಒಂದು ಸಿರಿಧಾನ್ಯದ ಖಾದ್ಯ ಮತ್ತು ಊಟದಲ್ಲಿ ಕನಿಷ್ಠ ಎರಡು ಸಿರಿಧಾನ್ಯದ ಪದಾರ್ಥಗಳಿರಬೇಕು. ಬಿಳಿ ಅಕ್ಕಿಯ ಬದಲಾಗಿ ಕಂದು ಅಕ್ಕಿ (brown rice) ಬಳಸಬೇಕು. ಸ್ಥಳೀಯ ಖಾದ್ಯಗಳಿಗೆ ಆದ್ಯತೆ ನೀಡಬೇಕು ಮತ್ತು ಬೆಲ್ಲದಿಂದ ಸಿಹಿ ಮಾಡಿದ ಕಡಿಮೆ ಸಕ್ಕರೆಯ ಹಣ್ಣಿನ ರಸವನ್ನು ಒದಗಿಸಬೇಕು. ಮಾಂಸಾಹಾರದ ವಿಚಾರದಲ್ಲಿ, ಚೆನ್ನಾಗಿ ಬೇಯಿಸಿದ ಮಾಂಸವನ್ನು ಮಾತ್ರ ಬಳಸುವಂತೆ ಸೂಚಿಸಲಾಗಿದೆ.
ಯಾವ ಆಹಾರಗಳಿಗೆ ನಿರ್ಬಂಧ?
ಮೈಕ್ರೋವೇವ್‌ನಲ್ಲಿ ಬಿಸಿಮಾಡಿದ ಆಹಾರ, ಕಾರ್ಖಾನೆಗಳಲ್ಲಿ ಸಂಸ್ಕರಿಸಿದ ಆಹಾರ, ಎಣ್ಣೆಯಲ್ಲಿ ಕರಿದ ತಿಂಡಿಗಳು, ಅತಿ ಹೆಚ್ಚು ಕೊಬ್ಬು ಹಾಗೂ ಮಸಾಲೆ ಇರುವ ಪದಾರ್ಥಗಳು, ಕಾರ್ಬೊನೇಟೆಡ್ ಪಾನೀಯಗಳು (ತಂಪು ಪಾನೀಯ), ಅತಿ ಹೆಚ್ಚು ಸಕ್ಕರೆ ಇರುವ ಹಣ್ಣಿನ ರಸಗಳು ಮತ್ತು ಮದ್ಯಸಾರ ಆಧಾರಿತ ಪಾನೀಯಗಳನ್ನು ಸರ್ಕಾರಿ ಕಾರ್ಯಕ್ರಮಗಳಲ್ಲಿ ನೀಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಹಾಲು, ಟೀ ಮತ್ತು ಕಾಫಿಯನ್ನು ನಿಯಮಿತವಾಗಿ ನೀಡುವುದನ್ನು ಕೂಡ ಕಡಿಮೆ ಮಾಡಬೇಕು. ಸರ್ಕಾರಿ ಆವರಣದಲ್ಲಿರುವ ಎಲ್ಲಾ ಕ್ಯಾಂಟೀನ್‌ಗಳಿಗೂ ಈ ಮಾರ್ಗಸೂಚಿಗಳು ಕಡ್ಡಾಯವಾಗಿ ಅನ್ವಯವಾಗಲಿದ್ದು, ಬೇಯಿಸಿದ ಹುರುಳಿ, ಕಡಲೆ, ಜೋಳವನ್ನು ಕ್ಯಾಂಟೀನ್ ಮೆನುವಿನಲ್ಲಿ ಸೇರಿಸುವುದು ಕಡ್ಡಾಯವಾಗಿದೆ. ಇಲಾಖೆಗಳ ಮುಖ್ಯಸ್ಥರು ತಮ್ಮ ಕಚೇರಿಗಳಲ್ಲಿ ಈ ಪೌಷ್ಟಿಕಾಂಶ ಪದ್ಧತಿಯನ್ನು ಸಕ್ರಿಯವಾಗಿ ಜಾರಿಗೊಳಿಸುವಂತೆ ನಿರ್ದೇಶಿಸಲಾಗಿದೆ.












Click it and Unblock the Notifications