Guarantee Schemes: ಪಂಚ ಗ್ಯಾರಂಟಿ ಪಡೆಯಲು ರಾಜ್ಯದ ಜನತೆಗೆ ಬಿಗ್ ಅಪ್ಡೇಟ್ ನೀಡಿದ ಡಿ.ಕೆ. ಶಿವಕುಮಾರ್
ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳ ಪ್ರಯೋಜನವನ್ನು ಪಡೆಯಲು ಇನ್ನು ಮುಂದೆ ಮತದಾರರ ಗುರುತಿನ ಚೀಟಿ ಕಡ್ಡಾಯವಾಗುವ ಮುನ್ಸೂಚನೆ ಸಿಕ್ಕಿದೆ. ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, "ರಾಜ್ಯ ಸರ್ಕಾರವು ಕರ್ನಾಟಕದ ಜನರಿಗಾಗಿ ಈ ಪಂಚ ಗ್ಯಾರಂಟಿಗಳನ್ನು ನೀಡುತ್ತಿದೆಯೇ ಹೊರತು ಅನ್ಯ ರಾಜ್ಯದವರಿಗಲ್ಲ. ಹೀಗಾಗಿ ರಾಜ್ಯದಲ್ಲಿ ಮತದಾನದ ಹಕ್ಕು ಇರುವ ಫಲಾನುಭವಿಗಳಿಗೆ ಮಾತ್ರ ಈ ಯೋಜನೆಗಳನ್ನು ಸೀಮಿತಗೊಳಿಸುತ್ತೇವೆ" ಎಂದು ಸ್ಪಷ್ಟಪಡಿಸಿದ್ದಾರೆ. ಆ ಮೂಲಕ ಗೃಹಲಕ್ಷ್ಮಿ, ಗೃಹಜ್ಯೋತಿ ಹಾಗೂ ಶಕ್ತಿ ಯೋಜನೆ ಸೇರಿದಂತೆ ಎಲ್ಲಾ ಗ್ಯಾರಂಟಿಗಳಿಗೆ ವೋಟರ್ ಐಡಿ ಕಡ್ಡಾಯಗೊಳಿಸುವ ಸ್ಪಷ್ಟ ಸುಳಿವು ನೀಡಿದ್ದಾರೆ.
ಸರ್ಕಾರದ ಈ ಹೊಸ ನಿಲುವಿನಿಂದಾಗಿ, ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು ಅತ್ಯಂತ ಪ್ರಮುಖವಾಗಿದೆ. ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳುವುದು ಫಲಾನುಭವಿಗಳಿಗೆ ಅನಿವಾರ್ಯ ಎಂಬಂತಾಗಿದೆ. "ಉಚಿತ ವಿದ್ಯುತ್ ಅನ್ನು ನಮ್ಮ ರಾಜ್ಯದ ಮತದಾರರಿಗೆ ನೀಡಬೇಕೇ ಹೊರತು, ಬೇರೆ ರಾಜ್ಯದವರಿಗೆ ಯಾಕೆ ಕೊಡಬೇಕು?" ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.

ಅಷ್ಟೇ ಅಲ್ಲದೆ, ಶಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೂ ರಾಜ್ಯದಲ್ಲಿ ಯಾರಿಗೆ ಮತದಾನದ ಹಕ್ಕು ಇದೆಯೋ ಅವರಿಗೆ ಮಾತ್ರ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡುವ ಬಗ್ಗೆ ಹಿಂದಿನ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಪಾರದರ್ಶಕತೆಗೆ ಪರಿಷ್ಕರಣೆಯ ಅಗತ್ಯ
ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಮತ್ತು ಇವುಗಳನ್ನು ಅತ್ಯಂತ ಪ್ರೀತಿ ಹಾಗೂ ಹೃದಯದಿಂದ ನೀಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ ಶಿವಕುಮಾರ್, ಆದರೆ ಯೋಜನೆಯ ದುರ್ಬಳಕೆಯನ್ನು ತಡೆಯಲು ಕಠಿಣ ಕ್ರಮಗಳು ಅಗತ್ಯ ಎಂದು ಪ್ರತಿಪಾದಿಸಿದರು. ಗೃಹಲಕ್ಷ್ಮೀ ಯೋಜನೆಯ ಹಣವು ಸದ್ಯ ಕೆಲವು ಕಡೆ ಅರ್ಹರಲ್ಲದ ಬೇರೆಯವರ ಖಾತೆಗಳಿಗೆ ಹೋಗುತ್ತಿದ್ದು, ಅದನ್ನು ತಡೆದು ನೇರವಾಗಿ ಫಲಾನುಭವಿಗಳೇ ಡ್ರಾ ಮಾಡುವಂತೆ ಮಾಡಲು ಫೋಟೋ ಮತ್ತು ಸರಿಯಾದ ಗುರುತಿನ ಚೀಟಿ ಕಡ್ಡಾಯಗೊಳಿಸಲಾಗುತ್ತಿದೆ.
ಕೆಲವರು ಈ ಹಣವನ್ನು ಶೇಕಡಾ 30 ರಿಂದ 35 ರಷ್ಟು ಹೆಚ್ಚಿನ ಬಡ್ಡಿಯ ಆಸೆಗೆ ಬಿದ್ದು ಬೆಳಗಾವಿಯ ಪ್ರಕರಣದಂತೆ ನಕಲಿ ಫೈನಾನ್ಸ್ ವ್ಯವಹಾರಗಳಿಗೆ ಮತ್ತು ಬೇರೆ ಸ್ಕೀಂಗಳಿಗೆ ಹಾಕುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇಂತಹ ಅಕ್ರಮ ಸ್ಕೀಂಗಳಿಗೆ ಗ್ರಾಮ ಪಂಚಾಯ್ತಿಯಿಂದ ತಾಲೂಕು ಪಂಚಾಯ್ತಿವರೆಗೆ ಕಡಿವಾಣ ಹಾಕಲು ಕಠಿಣ ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದರು.
ರಾಜಕೀಯ ವಾಕ್ಸಮರ
ಸರ್ಕಾರದ ಈ ಪರಿಷ್ಕರಣೆ ನಿರ್ಧಾರದ ವಿರುದ್ಧ ವಿರೋಧ ಪಕ್ಷಗಳು ತೀವ್ರ ವಾಗ್ದಾಳಿ ನಡೆಸಿವೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮಾತನಾಡಿ, "ಗ್ಯಾರಂಟಿ ನೀಡಿದ ಹಿಮಾಚಲ ಪ್ರದೇಶ ಹಾಗೂ ತೆಲಂಗಾಣದಲ್ಲಿ ಈಗ ಸರ್ಕಾರಿ ನೌಕರರಿಗೂ ಸಂಬಳ ನೀಡಲು ಹಣವಿಲ್ಲ. ಕರ್ನಾಟಕದಲ್ಲೂ ಶೀಘ್ರದಲ್ಲೇ ಅದೇ ಪರಿಸ್ಥಿತಿ ಬರಲಿದೆ. ಮತಕ್ಕಾಗಿ ಗ್ಯಾರಂಟಿ ಘೋಷಿಸಿ ಈಗ ಕುಂಟು ನೆಪಗಳನ್ನು ಹೇಳಿ ಕತ್ತರಿ ಹಾಕುತ್ತಿರುವುದು ಜನರಿಗೆ ಮಾಡಿದ ದೊಡ್ಡ ಮೋಸ" ಎಂದು ಟೀಕಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, "ಪಂಚ ಗ್ಯಾರಂಟಿಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಯೋಜನೆಗಳ ಅನುಷ್ಠಾನದಲ್ಲಿನ ದೋಷಗಳನ್ನು ಸರಿಪಡಿಸುವ ಕೆಲಸ ನಿರಂತರವಾಗಿ ನಡೆಯುತ್ತದೆ. ಮುಂದಿನ ಎರಡು ವರ್ಷ ಮಾತ್ರವಲ್ಲ, 2028ರ ಚುನಾವಣೆಯಲ್ಲೂ ಮತ್ತೆ ನಾವೇ ಅಧಿಕಾರಕ್ಕೆ ಬಂದು ಈ ಗ್ಯಾರಂಟಿಗಳನ್ನು ಮುಂದುವರೆಸುತ್ತೇವೆ" ಎಂದು ತಿರುಗೇಟು ನೀಡಿದ್ದಾರೆ.
ಮತ್ತೊಂದೆಡೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿ, ಗ್ಯಾರಂಟಿ ಯೋಜನೆಗಳಿಗಾಗಿ ನಾವು ಕೇಂದ್ರದ ಮುಂದೆ ಕೈಚಾಚಿಲ್ಲ, ಕೇವಲ ರಾಜ್ಯಕ್ಕೆ ನ್ಯಾಯಯುತವಾಗಿ ಬರಬೇಕಾದ ಕೇಂದ್ರ ಪುರಸ್ಕೃತ ಯೋಜನೆಗಳ ಬಾಕಿ ಹಣವನ್ನು ಮಾತ್ರ ಕೇಳುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications