ಕರ್ನಾಟಕ: ಎಲೆಕ್ಟ್ರಿಕ್ ವಾಹನಗಳ ಮೇಲೆ 20% ತೆರಿಗೆ ವಿಧಿಸುವ ಪ್ರಸ್ತಾವ ವಾಪಾಸ್
ಬೆಂಗಳೂರು, ಡಿಸೆಂಬರ್ 14: ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಡೆಯುತ್ತಿದೆ. ಆಡಳಿತಾರೂಢ ಕಾಂಗ್ರೆಸ್ ಒಳಗೊಂಡಂತೆ ವಿವಿಧ ಪಕ್ಷಗಳ ಶಾಸಕರ ಒತ್ತಾಯದ ಬಳಿಕ, 20 ಲಕ್ಷ ರೂಪಾಯಿಗಿಂತ ಹೆಚ್ಚಿನ ಬೆಲೆಯ ಎಲೆಕ್ಟ್ರಿಕ್ ವಾಹನಗಳಿಗೆ ಶೇಕಡಾ 20 ರಷ್ಟು ತೆರಿಗೆ ವಿಧಿಸುವ ಪ್ರಸ್ತಾಪವನ್ನು ಸರ್ಕಾರ ಬುಧವಾರ ಹಿಂದೆಗೆದುಕೊಂಡಿದೆ.
ಅಧಿವೇಶನದಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಕರ್ನಾಟಕ ಮೋಟಾರು ವಾಹನಗಳ ತೆರಿಗೆ (ಎರಡನೇ ತಿದ್ದುಪಡಿ) ಮಸೂದೆಯ ಭಾಗವಾಗಿ ಹೊಸ ಎಲೆಕ್ಟ್ರಿಕ್ ವಾಹನಗಳ ಮೇಲೆ ಶೇಕಡಾ 20 ರಷ್ಟು ಜೀವಿತಾವಧಿ ತೆರಿಗೆ ಕುರಿತು ಪ್ರಸ್ತಾಪಿಸಿದ್ದರು.

ಆದರೆ ಶೇಕಡಾ 20 ರಷ್ಟು ತೆರಿಗೆ ಪ್ರಸ್ತಾವನೆಯನ್ನು ಕೈಬಿಡಲು ಶಾಸಕರ ಒತ್ತಾಯದ ನಂತರ ಸಚಿವರು ಒಪ್ಪಿಗೆ ಸೂಚಿಸಿದರು. ಬಳಿಕವೇ ಅಧಿವೇಶನದಲ್ಲಿ ವಿಧೇಯಕವು ಅಂಗೀಕಾರವಾಯಿತು. ಮಸೂದೆಯ ತಿದ್ದುಪಡಿಯು ಎಲೆಕ್ಟ್ರಿಕ್ ವಾಹನಗಳ ಮೇಲೆ ಶೇಕಡಾ 10ರಷ್ಟು ಮಾತ್ರವೇ ತೆರಿಗೆ ಪ್ರಸ್ತಾಪಿಸಿದೆ ಎಂದು ಸರ್ಕಾರ ತಿಳಿಸಿದೆ.
ಇವಿಗಳಿಗೆ ಜೀವಮಾನ ತೆರಿಗೆ ಹೇರಲ್ಲ: ರೆಡ್ಡಿ
ಕರ್ನಾಟಕ ಮೋಟಾರು ವಾಹನಗಳ ತೆರಿಗೆ (ಎರಡನೇ ತಿದ್ದುಪಡಿ) ಮಸೂದೆಯಲ್ಲಿ 10 ಲಕ್ಷದಿಂದ 15 ಲಕ್ಷ ಮೌಲ್ಯದ ಹಳದಿ ಬೋರ್ಡ್ ಕಾರುಗಳು ಮತ್ತು 1,500-12,000 ಕೆಜಿ ಸಾಮರ್ಥ್ಯದ ಉತ್ತಮ ವಾಹನಗಳಿಗೆ ಸರ್ಕಾರವು ಜೀವಮಾನ ತೆರಿಗೆ ವಿಧಿಸುವುದಿಲ್ಲ ಎಂದು ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.

ಕಾಂಗ್ರೆಸ್ ನಾಯಕ ಮಾಜಿ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ, ಬಿಜೆಪಿ ಶಾಸಕ ಡಾ.ಸಿ.ಎನ್ ಅಶ್ವಥ್ ನಾರಾಯಣ್ ಮತ್ತು ಇನ್ನಿತರ ಶಾಸಕರು ಎಲೆಕ್ಟ್ರಿಕ್ ವಾಹನಗಳ ಮೇಲೆ ಶೇಕಡಾ 20 ರಷ್ಟು ತೆರಿಗೆ ವಿಧಿಸದಂತೆ ಆಗ್ರಹಿಸಿದರು. ಬಳಿಕ ಮಂಡಿಸಿದ್ದ ಪ್ರಸ್ತಾವವನ್ನು ಸಚಿವರು ಹಿಂಪಡೆದರು.
ವಿಧಾನಸಭೆಯಲ್ಲಿ ಏಳು ಮಸೂದೆ ಅಂಗೀಕಾರ
ವಾಹನ ಮಸೂದೆ ಸೇರಿದಂತೆ ಸಾರ್ವಜನಿಕ ನೇಮಕಾತಿ ಪರೀಕ್ಷೆಗಳಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಶಾಸನ ಒಳಗೊಂಡಂತೆ ಒಟ್ಟು 07 ಇತರ ಮಸೂದೆಗಳನ್ನು ವಿಧಾನಸಭೆ ಬುಧವಾರ ಅಂಗೀಕರಿಸಿತು.
ಕರ್ನಾಟಕ ಪಬ್ಲಿಕ್ ಪರೀಕ್ಷೆಗಳಲ್ಲಿ ಭ್ರಷ್ಟಾಚಾರ ತಡೆಗಟ್ಟುವಿಕೆ ಮತ್ತು ನೇಮಕಾತಿಯಲ್ಲಿ ಅನ್ಯಾಯದ ವಿಧಾನಕ್ಕೆ ಸಂಬಂಧಿಸಿದಂತೆ ಮಸೂದೆಯು ತಪ್ಪಿತಸ್ಥರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಆಸ್ತಿ ಮುಟ್ಟುಗೋಲು ಹೊರತುಪಡಿಸಿ 10 ಕೋಟಿ ರೂ. ದಂಡ ವಿಧಿಸಬಹುದೆಂದು ಹೇಳುತ್ತದೆ.
ಪರೀಕ್ಷಾ ಅಕ್ರಮ ತಡೆ ಮಸೂದೆ, ಕ್ರಮದ ಚರ್ಚೆ
ಈ ಮಸೂದೆಯು ತಪ್ಪುಗಳನ್ನು ತಡೆಯುವ ಕ್ರಮದ ಜೊತೆಗೆ ದಂಡದ ಕಾನೂನು ಎಂದು ಬಿಜೆಪಿ ಸದಸ್ಯ ಎಸ್ ಸುರೇಶ್ ಕುಮಾರ್ ಅವರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಜಿ.ಪರಮೇಶ್ವರ ಅವರು ಈ ವಿಧೇಯಕದ ಅಂಶಗಳನ್ನು ಒತ್ತಿ ಹೇಳಿದರು. ದಂಡದ ನಿಬಂಧನೆಗಳು ಪ್ರತಿಬಂಧಕವಾಗಿ ಕಾರ್ಯ ನಿರ್ವಹಿಸುತ್ತವೆ ಎಂದರು.
ಪರಿಶಿಷ್ಟ ಜಾತಿ ಮತ್ತು ಪಂಗಡದ ನಿಧಿಗಳ 'ಡೀಮ್ಡ್ ಖರ್ಚು' ಅನುಮತಿಸುವ ಕರ್ನಾಟಕ ಪರಿಶಿಷ್ಟ ಜಾತಿಗಳ ಉಪ-ವಿನಿಯೋಗ ಮತ್ತು ಬುಡಕಟ್ಟು ಉಪ-ಹಂಚಿಕೆ ಕಾಯಿದೆಯಿಂದ ಸೆಕ್ಷನ್ ನಿಯಮವನ್ನು ತೆಗೆದುಹಾಕುವ ಮಸೂದೆ ಸಹ ಅಂಗೀಕರಿಸಲಾಯಿತು.
ಕರ್ನಾಟಕ ಸಿವಿಲ್ ನ್ಯಾಯಾಲಯಗಳ (ತಿದ್ದುಪಡಿ) ಮಸೂದೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ಮಸೂದೆ, ಪ್ರದೇಶ ನಿರ್ವಹಣಾ ಪ್ರಾಧಿಕಾರ (ತಿದ್ದುಪಡಿ) ಮಸೂದೆ, ಕರ್ನಾಟಕ ಹೈಕೋರ್ಟ್ (ತಿದ್ದುಪಡಿ) ಮಸೂದೆ, ಶ್ರೀ ರೇಣುಕಾ ಯೆಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಮಸೂದೆ ಸೇರಿದಂತೆ ಹವಲು ಮಸೂದೆಗಳು ಅಂಗೀಕಾರವಾದವು.












Click it and Unblock the Notifications