ಸಿ. ಶಿಖಾ ಸೇರಿ ಏಳು ಐಎಎಸ್ ಅಧಿಕಾರಿಗಳ ವರ್ಗಾವಣೆ
ಬೆಂಗಳೂರು, ಜೂನ್ 30: ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಸಿ. ಶಿಖಾ ಸೇರಿದಂತೆ ಏಳು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸಿ. ಶಿಖಾ, ಅಜಯ್ ನಾಗಭೂಷಣ್, ಸಲ್ಮಾ ಫಾಹಿಮಾ, ಕಣಗವಲ್ಲಿ, ರಘುನಂದನ್ ಮೂರ್ತಿ, ಎಂ.ಎಸ್. ಅರ್ಚನಾ, ರಮ್ಯಾ ಸೇರಿ ಒಟ್ಟು ಏಳು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಸಿ. ಶಿಖಾ ಬೆಂಗಳೂರು ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರಾಗಿ ವರ್ಗಾವಣೆಗೊಂಡಿದ್ದಾರೆ. ಅಜಯ್ ನಾಗಭೂಷಣ್ ಅವರನ್ನು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಯಾಗಿ ವರ್ಗ ಮಾಡಲಾಗಿದೆ. ಸಲ್ಮಾ ಫಾಹಿಮಾರನ್ನು ಬೆಂಗಳೂರು ಹೆಚ್ಚುವರಿ ಕಾರ್ಯದರ್ಶಿ, ಮೂಲಸೌಕರ್ಯಕ್ಕೆ ನಿಯೋಜಿಸಲಾಗಿದೆ.
ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರಾಗಿ ಕಣಗವಲ್ಲಿ, ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತರಾಗಿ ರಘುನಂದನ್ ಮೂರ್ತಿ, ಕೆಇಟಿ ಬೆಂಗಳೂರು ಸದಸ್ಯರಾಗಿ ಎಂ.ಎಸ್. ಅರ್ಚನಾ ಹಾಗೂ ಪರೀಕ್ಷಾ ಪ್ರಾಧಿಕಾರಕ್ಕೆ ಕಾರ್ಯಕಾರಿ ನಿರ್ದೇಶಕರಾಗಿ ರಮ್ಯಾ ಅವರನ್ನು ವರ್ಗಾವಣೆ ಮಾಡಿ ಆದೇಶ ನೀಡಲಾಗಿದೆ.
ಈಚೆಗಷ್ಟೆ ಬೆಂಗಳೂರು ಗ್ರಾಮಾಂತರ ಎಸ್‌ಪಿಯಾಗಿದ್ದ ರವಿ ಡಿ ಚನ್ನಣ್ಣನವರ್ ಸೇರಿದಂತೆ ಒಟ್ಟು 12 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು. ಜೂನ್ 9ರಂದು 12 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶಿಸಿತ್ತು.












Click it and Unblock the Notifications