ಶೀಘ್ರ ಅಧಿಸೂಚನೆ, ಶಿಕ್ಷಕರ ಕೆಲಸಕ್ಕೆ ಅರ್ಜಿ ಹಾಕಲು ಸಿದ್ಧವಾಗಿ
ಬೆಂಗಳೂರು, ಜ. 23 : ಕರ್ನಾಟಕ ಸರ್ಕಾರ ಸುಮಾರು 11 ಸಾವಿರ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲು ಸಿದ್ಧತೆ ನಡೆಸುತ್ತಿದೆ. ಹತ್ತು ದಿನಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಎಂದು ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಶಾಲಾ ಸಹ ಶಿಕ್ಷಕರ ನೇಮಕಾತಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಲು 8-10 ದಿನಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. [ಶೀಘ್ರದಲ್ಲೇ ಶಿಕ್ಷಕರ ನೇಮಕಾತಿ]

ಈಗಾಗಲೇ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಯಲ್ಲಿ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳಿಗೆ ಸಿಇಟಿ ನಡೆಸಿ ರಾಜ್ಯದ ಶಾಲೆಗಳಲ್ಲಿ ಖಾಲಿ ಇರುವ ಸುಮಾರು 11 ಸಾವಿರ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಸಹ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಎಂದು ಹೇಳಿದರು. [ಶಿಕ್ಷಕರಾಗಲು ಇಂಗ್ಲಿಷ್, ಕಂಪ್ಯೂಟರ್ ಜ್ಞಾನ ಕಡ್ಡಾಯ]
ಸಿಇಟಿ ಪರೀಕ್ಷೆಯಲ್ಲಿ ಇಂಗ್ಲಿಷ್ ಮತ್ತು ಕಂಪ್ಯೂಟರ್ ಕೌಶಲ್ಯ ವಿಷಯಗಳನ್ನು ಕಡ್ಡಾಯವಾಗಿ ಸೇರಿಸಲಾಗಿದೆ. ಈ ವಿಷಯಗಳಲ್ಲಿ ನಿಗದಿತ ಅಂಕಗಳಿಗೆ ಪ್ರಶ್ನೆಗಳಿರುತ್ತವೆ ಎಂದು ಸಚಿವರು ಹೇಳಿದರು. 8 ರಿಂದ 10 ದಿನಗಳಲ್ಲಿ ಈ ಕುರಿತ ಅಧಿಸೂಚನೆ ಪ್ರಕಟವಾಗಲಿದೆ ಎಂದರು. [ಕೆಪಿಎಸ್ ಸಿಯಿಂದ 440 ಹುದ್ದೆಗಳಿಗೆ ಅಧಿಸೂಚನೆ ಪ್ರಕಟ]
ಪಠ್ಯ ಪುಸ್ತಕ ಪರಿಷ್ಕರಣೆ : ಮೇ ತಿಂಗಳ ವೇಳೆಗೆ ಪರಿಷ್ಕೃತ ಪಠ್ಯಪುಸ್ತಕಗಳು ಸಿದ್ಧವಾಗಲಿವೆ. ಆದರೆ ಇವುಗಳನ್ನು ಪಠ್ಯಕ್ರಮದಲ್ಲಿ 2016-17ರಲ್ಲಿ ಅಳವಡಿಸಲಾಗುವುದು ಎಂದು ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕ ನಾಗೇಂದ್ರ ಕುಮಾರ್ ಹೇಳಿದ್ದಾರೆ.
2012-13ನೇ ಶೈಕ್ಷಣಿಕ ವರ್ಷದಲ್ಲಿ ಹೊಸ ಪಠ್ಯಪುಸ್ತಕಗಳು ವಿದ್ಯಾರ್ಥಿಗಳ ಕೈಸೇರಿದ್ದವು. ಅನೇಕ ವಿಷಯಗಳ ಪಠ್ಯಪುಸ್ತಕಗಳಲ್ಲಿ ತಪ್ಪುಗಳು ನುಸುಳಿವೆ ಎಂದು ಸಂಘ-ಸಂಸ್ಥೆಗಳು ದೂರಿದ್ದವು. ಆದ್ದರಿಂದ ಸಮಿತಿ ರಚಿಸಿ ಅವುಗಳನ್ನು ಪರಿಷ್ಕರಣೆ ಮಾಡುವ ಕಾರ್ಯ ನಡೆಯುತ್ತಿದೆ.












Click it and Unblock the Notifications