ಗೋವಾ : ನಿರಾಶ್ರಿತ ಕನ್ನಡಿಗರಿಗೆ ಸರ್ಕಾರದಿಂದ ನಿವೇಶನ
ಬೆಂಗಳೂರು, ಅಕ್ಟೋಬರ್ 11 : ಗೋವಾದ ಬೈನಾ ಕಡಲ ತೀರದಲ್ಲಿ ಮನೆ ಕಳೆದುಕೊಂಡಿರುವ ಕನ್ನಡಿಗರಿಗೆ ಕರ್ನಾಟಕ ಸರ್ಕಾರ ಸಹಾಯ ಮಾಡಲಿದೆ. ಮನೆ ಕಳೆದುಕೊಂಡು ನಿರಾಶ್ರಿತರಾಗಿರುವ ಕನ್ನಡಿಗರಿಗೆ ನಿವೇಶನ ಒದಗಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ಗೋವಾದಲ್ಲಿನ ಕನ್ನಡಿಗರ ಪರಿಸ್ಥಿತಿ ಕುರಿತು ಸಮೀಕ್ಷೆ ನಡೆಸಲು ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.

ಗೋವಾದಲ್ಲಿ ನಿರಾಶ್ರಿತರಾಗಿರುವ ಕನ್ನಡಿಗರ ಸಂಖ್ಯೆ ಎಷ್ಟು?, ಎಲ್ಲರಿಗೂ ನಿವೇಶನ ಒದಗಿಸಲು ಬೇಕಾದ ಭೂಮಿ, ಆರ್ಥಿಕ ಪರಿಸ್ಥಿತಿ ಮುಂತಾದ ವಿಷಯಗಳನ್ನು ಒಳಗೊಂಡ ವರದಿಯನ್ನು ಮೂರು ದಿನದಲ್ಲಿ ಸಲ್ಲಿಸಲು ಮುಖ್ಯಮಂತ್ರಿಗಳು ನಿರ್ದೇಶನ ನೀಡಿದ್ದಾರೆ.
ನಿವೇಶನ ವಿತರಣೆಗಾಗಿ ಬೈನಾ ಬೀಚ್ ಸಮೀಪ 30 ಎಕರೆ ಜಮೀನು ಖರೀದಿಸಿ ಅದರಲ್ಲಿ 20×30 ವಿಸ್ತೀರ್ಣದ ನಿವೇಶನಗಳನ್ನು ಸಂತ್ರಸ್ತರಿಗೆ ಹಂಚಿಕೆ ಮಾಡಲಾಗುವುದು: @siddaramaiah
— CM of Karnataka (@CMofKarnataka) October 11, 2017
'ಗೋವಾದಲ್ಲಿ ನಿರಾಶ್ರಿತರಾಗಿರುವ ಕನ್ನಡಿಗರಿಗೆ ಮರು ವಸತಿ ಸೌಕರ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಮೊದಲ ಹಂತದಲ್ಲಿ ಅವರಿಗೆ ನಿವೇಶನ ಒದಗಿಸುವ ವ್ಯವಸ್ಥೆ ಮಾಡಲಾಗುವುದು, ನಿವೇಶನ ವಿತರಣೆಗೆ ಗೋವಾದಲ್ಲಿ 30 ಎಕರೆ ಜಮೀನು ಖರೀದಿ ಮಾಡಲಾಗುವುದು' ಎಂದು ಸಿದ್ದರಾಮಯ್ಯ ಹೇಳಿದರು.
ಕೆಲವು ದಿನಗಳ ಹಿಂದೆ ಗೋವಾ ಸರ್ಕಾರ ಬೈನಾ ಕಡಲ ತೀರದಲ್ಲಿನ 55 ಕನ್ನಡಿಗರ ಮನೆಗಳನ್ನು ತೆರವುಗೊಳಿಸಿತ್ತು. ಗೋವಾ ಸರ್ಕಾರದ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ಕ್ರಮ ಖಂಡಿಸಿ ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರಿಗೆ ಪತ್ರ ಬರೆದಿದ್ದರು.












Click it and Unblock the Notifications