ಕೊರೊನಾ; ಕರ್ನಾಟಕದಲ್ಲಿನ ಬಂದ್ ಒಂದು ವಾರ ವಿಸ್ತರಣೆ?
ಬೆಂಗಳೂರು, ಮಾರ್ಚ್ 18 : ಕೊರೊನಾ ಹರಡದಂತೆ ತಡೆಯಲು ಕರ್ನಾಟಕ ಸರ್ಕಾರ ಒಂದು ವಾರಗಳ ಕಾಲ ಮಾಲ್, ಚಿತ್ರಮಂದಿರ, ಪಬ್ ಬಂದ್ ಮಾಡಿದೆ. ಜಾತ್ರೆ, ಸಮಾವೇಶ, ಕಾರ್ಯಕ್ರಮ ನಡೆಸದಂತೆ ಸೂಚಿಸಿದೆ. ಇದನ್ನು ಇನ್ನೂ ಒಂದು ವಾರಗಳ ಕಾಲ ವಿಸ್ತರಣೆ ಮಾಡುವ ಸಾಧ್ಯತೆ ಇದೆ.
Recommended Video
ಬುಧವಾರ ವಿಧಾನಸೌಧದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಈ ಕುರಿತು ಸುಳಿವು ನೀಡಿದರು. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು, ಬಳಿಕ ಈ ಕುರಿತು ಅಧಿಕೃತ ಘೋಷಣೆ ಆಗಲಿದೆ.

ಪ್ರಸ್ತುತ ಮಾರ್ಚ್ 14ರಿಂದ 21ರ ತನಕ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಚಿತ್ರಮಂದಿರ, ಪಬ್, ಮಾಲ್ ಬಂದ್ ಮಾಡುವಂತೆ ಆದೇಶ ನೀಡಲಾಗಿದೆ. ಕ್ರೀಡಾ ಚಟುವಟಿಕೆ, ಸೆಮಿನಾರ್, ವಿವಾಹ ಕಾರ್ಯಕ್ರಮ ನಡೆಸದಂತೆ ಸೂಚಿಸಲಾಗಿದೆ.
ಕರ್ನಾಟಕದಲ್ಲಿ ಕೊರೊನಾದಿಂದಾಗಿ ಒಬ್ಬರು ಮೃತಪಟ್ಟಿದ್ದರು. 11 ಜನರಿಗೆ ಸೋಂಕು ತಗುಲಿದೆ. ಕಲಬುರಗಿ ನಗರದ ನಿವಾಸಿ ಮಹ್ಮದ್ ಹುಸೇನ್ ಸಿದ್ದಿಕಿ ಮೃತಪಟ್ಟಿದ್ದರು. ಅವರ ಕುಟುಂಬ ಸದಸ್ಯರೊಬ್ಬರಿಗೆ ಸೋಂಕು ತಗುಲಿದ್ದು, ಕಲಬುರಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕರ್ನಾಟಕ ಸರ್ಕಾರದ ಆದೇಶದ ಬಳಿಕ ರಾಜ್ಯದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣ ಮಾಡಿದೆ. ವ್ಯಾಪಾರ ವಹಿವಾಟು ಕುಸಿದಿದೆ, ಸಾರಿಗೆ ಸೇರಿದಂತೆ ವಿವಿಧ ಉದ್ಯಮಗಳಿಗೆ ಭಾರಿ ಹೊಡೆತ ಬಿದ್ದಿದೆ. ಈಗ ಇನ್ನೂ ಒಂದು ವಾರ ಸರ್ಕಾರ ತನ್ನ ಆದೇಶವನ್ನು ವಿಸ್ತರಣೆ ಮಾಡುವ ಸೂಚನೆ ಸಿಕ್ಕಿದೆ.
ಕರ್ನಾಟಕ ಶಾಲಾ, ಕಾಲೇಜುಗಳಿಗೆ ಈಗಾಗಲೇ ರಜೆ ಘೋಷಣೆ ಮಾಡಿದೆ. ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಚಿತ್ರಮಂದಿರ, ಪಬ್, ಮಾಲ್ ಬಂದ್ ಆಗಿದೆ. ಕ್ರೀಡಾ ಚಟುವಟಿಕೆ, ಸೆಮಿನಾರ್, ವಿವಾಹ, ಜಾತ್ರೆ, ಸಂತೆ, ಸಮಾವೇಶಗಳನ್ನು ನಡೆಸದಂತೆ ಸೂಚನೆ ನೀಡಲಾಗಿದೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಯಡಿಯೂರಪ್ಪರನ್ನು 'ಧವಳಗಿರಿ' ನಿವಾಸದಲ್ಲಿ ಬುಧವಾರ ಬೆಳಗ್ಗೆ ಭೇಟಿ ಮಾಡಿದರು. ಕೊರೊನಾ ಹರಡದಂತೆ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ವಿವರಣೆಯನ್ನು ನೀಡಿದರು.
ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತಿದೆ. ಸಭೆಯಲ್ಲಿ ಬಂದ್ ಮುಂದುವರೆಸುವ ಕುರಿತು ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ. ಕೊರೊನಾ ತಡೆಯಲು ಮತ್ತಷ್ಟು ಕಠಿಣ ನಿರ್ಧಾರವನ್ನು ಸರ್ಕಾರ ಕೈಗೊಳ್ಳವು ನಿರೀಕ್ಷೆ ಇದೆ.












Click it and Unblock the Notifications