Union Budget 2025: ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಏನೆಲ್ಲ ಬೇಕು? ಬೇಡಿಕೆ ಪಟ್ಟಿ ಕೊಟ್ಟ ಕಾಂಗ್ರೆಸ್
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರವು ಶನಿವಾರ (ಫೆ.1) ಬಜೆಟ್ ಮಂಡಿಸಲು ಸಜ್ಜಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಲಿದ್ದು, ಈ ಬಾರಿಯಾದರೂ ಕರ್ನಾಟಕದ ಬೇಡಿಕೆಗಳು ಈಡೇರುವ ನಿರೀಕ್ಷೆಯಲ್ಲಿದ್ದಾರೆ ರಾಜ್ಯದ ಜನ. ಇನ್ನು ರಾಜ್ಯ ಕಾಂಗ್ರೆಸ್ ಕೂಡ ಕರ್ನಾಟಕಕ್ಕೆ ಕೇಂದ್ರ ಬಜೆಟ್‌ನಿಂದ ಏನೆಲ್ಲ ಬೇಕಾಗಿದೆ? ಎನ್ನುವ ಬೇಡಿಕೆ ಪಟ್ಟಿಯನ್ನು ಮುಂದಿಟ್ಟಿದೆ.
ಕರ್ನಾಟಕದ ಬಹುವರ್ಷಗಳ ಬೇಡಿಕೆಯಾದ ಭದ್ರಾ ಮೇಲ್ದಂಡೆ ಯೋಜನೆಗೆ ₹5,300 ಕೋಟಿ ಅನುದಾನ ನೀಡುವುದಾಗಿ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿ ಮೂರು ವರ್ಷಗಳು ಕಳೆದಿದ್ದರೂ ಇಲ್ಲಿಯವರೆಗೂ ಅನುದಾನ ಬಿಡುಗಡೆ ಮಾಡಿಲ್ಲ ಎಂದೂ ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ.

ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳು ಅಧಿಕಾರದಲ್ಲಿದ್ದಾಗಲೂ ಅನುದಾನ ಕೊಡಲಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಕೇಂದ್ರಕ್ಕೆ ಹಲವು ಬಾರಿ ಮನವಿ ನೀಡಿದ್ದರೂ, ಪ್ರಧಾನಮಂತ್ರಿ ನರೇಂದ್ರ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಅಮಿತ್ ಶಾ ಅವರನ್ನೂ ಭೇಟಿ ಮಾಡಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಕಿಡಿಕಾರಿದೆ. ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಕೂಡಲೇ 5,300 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡುವುದರ ಜೊತೆಗೆ ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಇದಲ್ಲದೆ ಕರ್ನಾಟಕಕ್ಕೆ ಅತಿಮುಖ್ಯವಾಗಿ ಕೇಂದ್ರ ಬಜೆಟ್‌ನಿಂದ ಏನೆಲ್ಲ ಬೇಕು? ಎಂದು ಕಾಂಗ್ರೆಸ್ ಪಟ್ಟಿ ಬಿಡುಗಡೆ ಮಾಡಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದೆ. ಅವು ಈ ಮುಂದಿನಂತಿವೆ..

* ಬೆಂಗಳೂರಿನ ರಾಜಕಾಲುವೆ ನಿರ್ವಹಣೆ, ವಿಸ್ತರಣೆಗೆ ₹3,000 ಕೋಟಿ, ಬಿಸಿನೆಸ್ ಕಾರಿಡಾರ್ಗೆ ₹27 ಸಾವಿರ ಕೋಟಿ ಅನುದಾನ ನೀಡಬೇಕು.
* ಬೆಂಗಳೂರು ದಕ್ಷಿಣ, ವಶ್ಚಿಮ ಮತ್ತು ಹೊರವಲಯಗಳಲ್ಲಿಯೂ ಮೆಟ್ರೋ ಸಂಪರ್ಕ ವಿಸ್ತರಣೆಗೆಗಾಗಿ ಮೆಟ್ರೋ 4ನೇ ಹಂತಕ್ಕೆ ಹೆಚ್ಚಿನ ಅನುದಾನ ನೀಡಬೇಕು.
* ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ ₹15,767 ಕೋಟಿ ವೆಚ್ಚವಾಗಲಿದೆ. ಕೇಂದ್ರ ಬಜೆಟ್‌ನಲ್ಲಿ ಕಳೆದ ವರ್ಷ ಬಿಎಸ್‌ಆರ್‌ಪಿಗೆ ₹350 ಕೋಟಿ ಮೀಸಲಿಡಲಾಗಿದೆ. ಯೋಜನೆಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಇನ್ನೂ ಹೆಚ್ಚಿನ ಅನುದಾನ ನೀಡಬೇಕು.

* ಬೆಂಗಳೂರಿನ ರಿಂಗ್ ರಸ್ತೆ ಮೇಲ್ದರ್ಜೆಗೆ ₹8,916 ಕೋಟಿ ಅನುದಾನ ಘೋಷಿಸಬೇಕು. ಬೆಂಗಳೂರಿನ ಪ್ರಮುಖ 17 ಫ್ಲೈಓವರ್ಗಳಿಗೆ ₹12 ಸಾವಿರ ಕೋಟಿ ಅನುದಾನ ಘೋಷಿಸಬೇಕು. ರಾಜಕಾಲುವೆ ನಿರ್ವಹಣೆ, ವಿಸ್ತರಣೆಗೆ ₹3 ಸಾವಿರ ಕೋಟಿ ಅನುದಾನ ನೀಡಬೇಕು.
* ಬೆಂಗಳೂರು ಉತ್ತರ-ದಕ್ಷಿಣ ಕಾರಿಡಾರ್ಗೆ ₹15 ಸಾವಿರ ಕೋಟಿ, ಪೂರ್ವದಿಂದ ಪಶ್ಚಿಮ ಕಾರಿಡಾರ್ಗೆ ₹25 ಸಾವಿರ ಕೋಟಿ ಅನುದಾನದ ಅಗತ್ಯವಿದೆ. ಬೆಂಗಳೂರಿನಲ್ಲಿ ಸದ್ಯ ಒಂದೂವರೆ ಕೋಟಿ ಜನಸಂಖ್ಯೆ ಇದೆ. ಹೀಗಾಗಿ ಈ ಬಾರಿಯ ಕೇಂದ್ರ ಬಜೆಟ್ನಲ್ಲಿ ಬೆಂಗಳೂರಿಗೆ ಆದ್ಯತೆ ನೀಡಬೇಕು. ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ ₹70,000 ಕೋಟಿ ಅನುದಾನ ನೀಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.












Click it and Unblock the Notifications