Krishna Byregowda: ಜಲಜೀವನ್ ಮಿಷನ್ ಅವ್ಯವಹಾರದ ತನಿಖೆಗೆ ತಂಡ ರಚನೆ
ಜಲಜೀವನ್ ಮಿಷನ್ ಯೋಜನೆಯಲ್ಲಿ ಅವ್ಯವಹಾರ ಹಾಗೂ ಲೋಪಗಳಾಗಿವೆ ಎಂಬ ದೂರು ಕೇಳಿ ಬಂದ ಹಿನ್ನೆಲೆ ರಾಜ್ಯ ಸರ್ಕಾರವು ಈ ಬಗ್ಗೆ ಮಹತ್ವದ ಕ್ರಮ ತೆಗೆದುಕೊಂಡಿದೆ. ಜಲಜೀವನ್ ಮಿಷನ್ ಯೋಜನೆ ಅನುಷ್ಠಾನದಲ್ಲಿ ನಾನಾ ತಪ್ಪುಗಳಾಗಿದ್ದು, ಸರ್ಕಾರ ತನಿಖೆ ನಡೆಸಿ ವರದಿ ನೀಡಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮೂವರು ಅಧಿಕಾರಿಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ವಿಧಾನಸಭೆಯಲ್ಲಿ ಹೇಳಿದ್ದಾರೆ.
ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಪರವಾಗಿ ಉತ್ತರಿಸಿದ ಕೃಷ್ಣಬೈರೇಗೌಡರು, ತುಮಕೂರಿನಲ್ಲಿ ಈ ಸಂಬಂಧ ಲೋಪ ಕೇಳಿಬಂದಿದೆ. ತನಿಖಾ ತಂಡವು ತುಮಕೂರಿಗೆ ಭೇಟಿ ನೀಡಿ, 571 ಕಾಮಗಾರಿಗಳನ್ನು ಆಯ್ಕೆ ಮಾಡಿದೆ. 183 ಕಾಮಗಾರಿಗಳ ಕಡತಗಳನ್ನು ಈಗಾಗಲೇ ಪರಿಶೀಲಿಸಿದೆ. 25 ಅನರ್ಹ ಗುತ್ತಿಗೆದಾರರಿಗೆ 69 ಕಾಮಗಾರಿಗಳ ಟೆಂಡರ್ ನೀಡಿ, ಕಾರ್ಯಪಾಲಕ ಇಂಜಿನಿಯರ್ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಮಧ್ಯಂತರ ವರದಿ ನೀಡಿದೆ ಎಂದು ವಿವರಿಸಿದ್ದಾರೆ.

ಕರ್ತವ್ಯಲೋಪ ಎಸಗಿದ ಕಾರ್ಯಪಾಲಕ ಇಂಜಿನಿಯರ್ (ನಿವೃತ್ತ) ಎಸ್.ರವೀಶ್ ಅವರ ವಿರುದ್ಧ ಇಲಾಖಾ ವಿಚಾರಣೆ ಕೈಗೊಳ್ಳಲು ಮತ್ತು ದೋಷಾರೋಪಪಟ್ಟಿ ಸಲ್ಲಿಸಲು ಸರ್ಕಾರ ಅನುಮತಿ ನೀಡಿದೆ. ತನಿಖೆ ಅರ್ಧ ನಡೆಯುವುದರಿಂದ ಲೋಕಾಯುಕ್ತ ತನಿಖೆಗೆ ವಹಿಸಿದರೆ ವಿಳಂಬವಾಗುತ್ತೆ. ಹಾಗಾಗಿ ಇದೇ ತನಿಖಾ ತಂಡವನ್ನು ಮುಂದುವರಿಸುವ ಮತ್ತು ಎಲ್‌ಒಎ ಕೊಟ್ಟಿರುವ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವರು, ಸಂಬಂಧಪಟ್ಟ ಶಾಸಕರೊಂದಿಗೆ ಚರ್ಚಿಸಲು ತಿಳಿಸಲಾಗುವುದು ಎಂದು ಹೇಳಿದ್ದಾರೆ.
ಈ ವೇಳೆ ಮಧ್ಯಪ್ರವೇಶಿಸಿದ ಶಾಸಕ ಜಿ.ಟಿ.ಪಾಟೀಲ್ ಅವರು, ಈ ಸಂಬಂಧ ಅಂದಾಜು ಸಮಿತಿಯಲ್ಲಿ ಚರ್ಚೆಯಾಗಿದೆ. ಈ ಬಗ್ಗೆ ಲೋಕಾಯುಕ್ತ ತನಿಖೆಯಾಗಬೇಕು ಎಂದು ಆಗ್ರಹಿಸಿದರು. ಬಿಜೆಪಿ ಶಾಸಕ ಸಿದ್ದು ಸವದಿ ಮಾತನಾಡಿ, ರಾಜ್ಯದಲ್ಲಿ ಜಲಜೀವನ್ ಮಿಷನ್ ಯೋಜನೆ ಕಳಪೆಯಿಂದ ಕೂಡಿದ್ದು, ತನಿಖೆಯಾಗಬೇಕೆಂದು ಒತ್ತಾಯಿಸಿದರು. ಜಲಜೀವನ್ ಮಿಷನ್ ಯೋಜನೆಯ 2528 ಕಾಮಗಾರಿಗಳಲ್ಲಿ ಅವ್ಯವಹಾರವಾಗಿದೆ. ರಸ್ತೆ ಕಾಮಗಾರಿ ಆಗುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿ ನಿವೃತ್ತರಾಗಿದ್ದಾರೆ. ಭ್ರಷ್ಟ ಅಧಿಕಾರಿಗಳನ್ನು ರಕ್ಷಿಸುತ್ತಿರುವವರಿಗೆ ತಕ್ಕ ಶಾಸ್ತಿಯಾಗಲು ಲೋಕಾಯುಕ್ತ ತನಿಖೆಗೆ ವಹಿಸಬೇಕು ಎಂದು ಟಿ.ಬಿ.ಜಯಚಂದ್ರ ಕೂಡ ಆಗ್ರಹಿಸಿದರು.
ಬಿಜೆಪಿ ನಾಯಕ ಸಿಟಿ ರವಿ ಮಾತನಾಡಿ, ಜಲಜೀವನ್ ಯೋಜನೆ ಜಾರಿಗೆ ಕಾಂಗ್ರೆಸ್ ಸರ್ಕಾರ ಇಚ್ಛಾಶಕ್ತಿ ತೋರಿಸುತ್ತಿಲ್ಲ. 26,592 ಗ್ರಾಮಗಳು ರಾಜ್ಯದಲ್ಲಿದ್ದು, ಕಾಮಗಾರಿ ಪೂರ್ಣಗೊಳಿಸಿ, ನೀರು ಸರಬರಾಜು ಆಗುತ್ತಿರುವ ಗ್ರಾಮಗಳ ಸಂಖ್ಯೆ 4,675. ಇನ್ನೂ 21,000 ಕ್ಕೂ ಅಧಿಕ ಗ್ರಾಮಗಳಲ್ಲಿ ಕಾಮಗಾರಿ ಪೂರ್ಣಗೊಂಡಿಲ್ಲ. ಆಗಿರುವ ಕಾಮಗಾರಿಯೂ ಸಮರ್ಪಕವಾಗಿ ನಡೆದಿಲ್ಲ ಎಂದು ದೂರಿದರು.

ಎರಡು ತಿಂಗಳಲ್ಲಿ ಜಂಟಿ ಸರ್ವೇ ಪೂರ್ಣ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಈಗಾಗಲೇ ಜಂಟಿ ಸರ್ವೇ ಆರಂಭವಾಗಿದೆ. ಈ ಸಂಬಂಧ ಚಿಕ್ಕಮಗಳೂರು ಜಿಲ್ಲೆಯ ಎಲ್ಲ ಅಧಿಕಾರಿಗಳ ಸಭೆ ನಡೆಸಲಾಗಿದ್ದು, ಸಭೆಯಲ್ಲಿ ಅಧಿಕಾರಿಗಳು ಎರಡು ತಿಂಗಳಲ್ಲಿ ಜಂಟಿ ಸರ್ವೇ ಮುಗಿಸುವುದಾಗಿ ಸಚಿವ ಕೃಷ್ಣಬೈರೇಗೌಡ ಭರವಸೆ ನೀಡಿದರು. ಜಂಟಿ ಸರ್ವೇ ಮುಗಿದ ನಂತರ ಶಾಸಕರು ಉಲ್ಲೇಖಿಸಿರುವ ಇಂಡೀಕರಣಕ್ಕೆ ಬಾಕಿ ಇರುವ 248 ಪ್ರಕರಣಗಳ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದೂ ಹೇಳಿದರು.












Click it and Unblock the Notifications