ಸಬ್ ರಿಜಿಸ್ಟ್ರಾರ್‌ಗಳು ಇನ್ಮೇಲೆ 12 ತಾಸು ದುಡಿಯಬೇಕು: ಸಾಮ್ರಾಟ್ ಕಟ್ಟಪ್ಪಣೆ !
ಬೆಂಗಳೂರು, ಫೆ. 26: ಕರ ವಸೂಲಿಗೆ ಟೊಂಕ ಕಟ್ಟಿ ನಿಂತಿರುವ ಕಂದಾಯ ಸಚಿವ ಅರ್. ಅಶೋಕ್ ಅವರ ಸೂಚನೆ ಮೇರೆಗೆ ನೊಂದಣಿ ಮತ್ತು ಮುದ್ರಾಂಕ ಇಲಾಖೆಯ ಸಿಬ್ಬಂದಿ ಕೆಲಸದ ಅವಧಿಯನ್ನು ಹನ್ನೆರಡು ತಾಸಿಗೆ ವಿಸ್ತರಿಸಿ ಆದೇಶಿಸಲಾಗಿದೆ. ರಾಜ್ಯದ ಉಪ ನೋಂದಣಾಧಿಕಾರಿಗಳ ಕಚೇರಿಗಳು ರಾಜ್ಯದಲ್ಲಿ ಬೆಳಗ್ಗೆ 08 ರಿಂದ ರಾತ್ರಿ 08 ರ ವರೆಗೂ ತೆರೆದಿರಬೇಕು ಸೂಚಿಸಲಾಗಿದೆ.
ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಈ ಅವೈಜ್ಞಾನಿಕ ಆದೇಶ ಸರ್ಕಾರದ ಆಡಳಿತಾತ್ಮಕ ನಿಯಮಕ್ಕೆ ತದ್ವಿರುದ್ಧವಾಗಿದೆ. ಒಬ್ಬ ಸರ್ಕಾರಿ ಅಥವಾ ಖಾಸಗಿ ನೌಕರ ದಿನಕ್ಕೆ ಎಂಟು ತಾಸು ಕೆಲಸ ಮಾಡಲು ನಿಯಮದಲ್ಲಿ ಅವಕಾಶ ಕಲ್ಪಿಸಲಾಗಿದೆ. ಹೆಚ್ಚುವರಿ ಸೇವೆ ಮಾಡಿದರೆ ಹೆಚ್ಚುವರಿ ವೇತನ ನೀಡಬೇಕು. ಇನ್ನು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹೆಚ್ಚುವರಿ ಕೆಲಸ ವಿಸ್ತರಿಸುವಲ್ಲಿ ನ್ಯಾಯ ಸಮ್ಮತ ಎಂದು ಭಾವಿಸಬಹುದು. ರಿಯಲ್ ಎಸ್ಟೇಟ್ ವಹಿವಾಟಿನಲ್ಲಿ ಕಂದಾಯ ಇಲಾಖೆಗೆ ಅದೇನು ತುರ್ತು ಕೆಲಸವಿದೆಯೋ ದೇವರೇ ಬಲ್ಲ!
ಕೊರೊನಾ ಸಂಕಷ್ಟ:
ರಾಜ್ಯ ಇನ್ನೂ ಕೊರೊನಾ ಸಂಕಷ್ಟದಿಂದ ಚೇತರಿಸಿಕೊಂಡಿಲ್ಲ. ಆರೋಗ್ಯ ಸೇವೆಯನ್ನು ಹನ್ನೆರಡು ತಾಸು ವಿಸ್ತರಣೆ ಮಾಡುವುದಲ್ಲಿ ಅರ್ಥವಿದೆ. ಅಥವಾ ಆಹಾರ ಮತ್ತು ನಾಗರಿಕ ಪೂರೈಕೆ ಕೇಂದ್ರಗಳ ಸೇವೆ ವಿಸ್ತರಣೆ ಮಾಡಿದ್ದರೂ ನೈಜ ಕಾರಣವಿದೆ ಎಂದು ಪರಿಗಣಿಸಬಹುದು. ನಿವೇಶನಗಳ ಪರಭಾರೆ, ಲೇಔಟ್ ನಿರ್ಮಾಣ ಸಂಬಂಧ ನೋಂದಣಿ ಮಾಡಿ ಕರ ವಸೂಲಿ ಮಾಡುವ ವಿಚಾರದಲ್ಲಿ ಅದ್ಯಾವ ಕಾರಣವಿದೆಯೋ ಗೊತ್ತಿಲ್ಲ. ದಿನಕ್ಕೆ ಎಂಟು ತಾಸು ಕಚೇರಿಗಳನ್ನು ತೆರೆದದ್ದರೂ ಸಾಕು. ರಾತ್ರಿ ವೇಳೆ ನೋಂದಣಿ ಮಾಡಿಸಲು ಅದ್ಯಾರು ಬರುತ್ತಾರೋ ಕಂದಾಯ ಸಚಿವರೇ ಉತ್ತರಿಸಬೇಕು.

ನಾಳೆಯಿಂದ 12 ತಾಸು ಕೆಲಸ:
ಲೇಔಟ್, ಹೊಸ ನಿವೇಶನ ನೋಂದಣಿಗೆ ಸಂಬಂಧಿಸದಿಂತೆ ರಾಜ್ಯದಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಉಪ ನೋಂದಣಾಧಿಕಾರಿಗಳ ಕಚೇರಿಗಳು ಸೋಮವಾರದಿಂದ ಹನ್ನೆರಡು ತಾಸು ಕೆಲಸ ನಿರ್ವಹಿಸುವಂತೆ ಸೂಚಿಸಿ ಕೆಲಸದ ಅವಧಿಯನ್ನು ಹೆಚ್ಚುವರಿ ನಾಲ್ಕು ತಾಸು ವಿಸ್ತರಿಸಿ ಆದೇಶ ಹೊರಡಿಸಲಾಗಿದೆ. ಈ ಹಿಂದೆ ಬೆಳಗ್ಗೆ 9 ಗಂಟೆಯಿಂದ ರಾತ್ರಿ 7 ಗಂಟೆ ವರೆಗೂ ವಿಸ್ತರಣೆ ಮಾಡಲಾಗಿತ್ತು. ಇದೀಗ ಪರಿಷ್ಕತ ಆದೇಶದಂತೆ ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆ ವರೆಗೆ ಕೆಲಸ ನಿರ್ವಹಿಸುವಂತೆ ಸೂಚನೆ ನೀಡಲಾಗಿದೆ. ಶೃಂಗೇರಿ, ಕೋಲಾರ, ಬೀದರ್ ನಂತಹ ಗಡಿ ಭಾಗದಲ್ಲಿ ಸಂಜೆ ಐದು ಗಂಟೆಯಾದರೆ ಸರ್ಕಾರಿ ಕಚೇರಿಗಳ ಕಡೆ ಕಾಲು ಇಡಲ್ಲ. ಇಂತಹ ಪರಿಸ್ಥಿತಿಯಲ್ಲಿ ಹನ್ನೆರಡು ತಾಸು ದುಡಿಮೆ ಮಾಡುವಂತೆ ಫರ್ಮಾನು ಹೊರಡಿಸಿರುವುದು ಎಷ್ಟು ಸರಿ ?
ಐಜಿಆರ್ ಇಲ್ಲದಿದ್ರೂ ಅವಧಿ ವಿಸ್ತರಣೆ ಪ್ರಯೋಜನ ಏನು?:
ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ನೋಂದಣಿಯಾಗುವ ನಿವೇಶನ, ಲೇಔಟ್ ಸಂಬಂಧ ಕಡತಗಳಿಗೆ ಇನ್‌ಸ್ಪೆಕ್ಟರ್ ಜನರಲ್ ಆಫ್ ಸ್ಟಾಂಪ್ಸ್ ಅಂಡ್ ರಿಜಿಸ್ಟ್ರೇಷನ್ ಸಹಿ ಹಾಕಬೇಕು. ರಾಜ್ಯದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಐಜಿಆರ್ ರವೀಂದ್ರ ಅವರು ಚುನಾವಣೆ ಕೆಲಸಕ್ಕೆ ಉತ್ತರ ಭಾರತಕ್ಕೆ ಹೋಗಿದ್ದಾರೆ. ಅವರು ಇನ್ನೂ ಹದಿನೈದು ದಿನ ಬರುವುದಿಲ್ಲ. ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ನೋಂದಣಿಯಾದರೂ ಅವುಗಳಿಗೆ ಸಹಿ ಹಾಕುವರೇ ಇಲ್ಲ. ಪರಿಸ್ಥಿತಿ ಹೀಗಿದ್ದರೂ ಹನ್ನೆರಡು ತಾಸು ಕೆಲಸದ ಅವಧಿ ವಿಸ್ತರಿಸಲಾಗಿದೆ. ಅದ್ಯಾವ ಲಾಜಿಕ್ ಇಟ್ಟುಕೊಂಡು ಈ ಆದೇಶ ಮಾಡಿದರೋ ದೇವರೇ ಬಲ್ಲ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಧಿಕಾರಿಗಳು ಕಂಗಾಲಾಗಿದ್ದಾರೆ.

ಸುಂಕ ನಿರ್ಧಾರದಲ್ಲಿ ಮಹಾ ಪ್ರಮಾದ ಗ್ಯಾರೆಂಟಿ:
ನಿವೇಶನ ಹಾಗೂ ಲೇಔಟ್ ನೋಂದಣಿ ಸಂಬಂಧ ಇನ್ನೂ ಪರಿಷ್ಕತ ಕರ ನಿರ್ಧಾರವಾಗಿಲ್ಲ. ಈಗಿರುವ ಪದ್ಧತಿಯಂತೆ ಮುದ್ರಾಂಕ ಶುಲ್ಕ ಪಾವತಿಸಿಕೊಂಡರೆ, ಮುಂದೆ ಅದಕ್ಕೆ ಐಜಿಆರ್ ಒಪ್ಪಬಹುದು. ಅಥವಾ ಕಡಿಮೆ ಕಟ್ಟಿಸಿಕೊಂಡಿದ್ದೀರಾ ಎಂದು ತಗಾದೆ ತೆಗೆಯಬಹುದು. ಅವರ ಸಹಿ ಇಲ್ಲದೇ ಮುದ್ರಾಂಕ ಶುಲ್ಕ ಕಟ್ಟಿಸಿಕೊಂಡರೆ ಭವಿಷ್ಯದಲ್ಲಿ ಕಡಿಮೆ ಶುಲ್ಕ ಕಟ್ಟಿಸಿಕೊಂಡ ಪ್ರಸಂಗ ಎದುರಾದರೆ ಸಿಬ್ಬಂದಿ ಕೈಯಿಂದ ಪಾವತಿಸಬೇಕಾಗುತ್ತದೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಹನ್ನೆರಡು ತಾಸು ಅವಧಿ ವಿಸ್ತರಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುವ ಸಿಬ್ಬಂದಿ ರಾತ್ರಿ ಎಂಟು ಗಂಟೆಗೆ ಕಚೇರಿ ಬಿಟ್ಟು ಎಷ್ಟು ಹೊತ್ತಿಗೆ ಮನೆ ಸೇರಬೇಕು ? ಕಚೇರಿಗಳಲ್ಲಿ ಕೆಲಸ ಮಾಡುವ ಹೆಣ್ಣು ಮಕ್ಕಳ ಪರಿಸ್ಥಿತಿ ಏನಾಗಬೇಕು ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಸಿಬ್ಬಂದಿ ಮನವಿ ಮಾಡಿದ್ದಾರೆ. ಈ ಕುರಿತು ಸಚಿವರ ಗಮನಕ್ಕೆ ತಂದರೂ ಏನೂ ಪ್ರಯೋಜನ ಆಗಿಲ್ಲ.

ರೂಲ್ ಆಫ್ ಲಾ ವಿರೋಧಿ ಆದೇಶ:
Recommended Video
ಪ್ರಕಾರ ಸರ್ಕಾರಿ ನೌಕರನಿಗಾಗಲೀ ಖಾಸಗಿ ನೌಕರನಿಗಾಗಲೀ ದಿನಕ್ಕೆ ಎಂಟು ತಾಸು ಕೆಲಸದ ಅವಧಿ ನಿಗದಿ ಪಡಿಸಲಾಗಿದೆ. ತುರ್ತು ಸಂದರ್ಭದಲ್ಲಿ ಸರ್ಕಾರ ನೌಕರರ ಕೆಲಸದ ಅವಧಿ ವಿಸ್ತರಣೆ ಮಾಡಿದರೂ ಅದಕ್ಕೆ ತಕ್ಕ ವೇತನ ಭತ್ಯೆ ಕೊಡಬೇಕು. ಸೂಕ್ತ ಕಾರಣ ವಿಲ್ಲದೇ ಸರ್ಕಾರಿ ನೌಕರರಿಂದ ಅಥವಾ ಖಾಸಗಿ ನೌಕರರಿಂದ ಹನ್ನೆರಡು ತಾಸು ದುಡಿಸಿಕೊಳ್ಳುವುದು ರೂಲ್ ಆಫ್ ಲಾ ತತ್ವಕ್ಕೆ ವಿರುದ್ಧವಾಗಿದೆ. ಈ ಕುರಿತು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಧಿಕಾರಿಗಳು ನ್ಯಾಯಾಲಯದ ಮೊರೆ ಹೋಗಿ ಸರ್ಕಾರ ಮಾಡಿರುವ ಆದೇಶ ರದ್ದು ಪಡಿಸಲು ಕೇಳಲು ಸರ್ವ ಸ್ವತಂತ್ರರು ಎಂಬ ಅಭಿಪ್ರಾಯಯ ವಕೀಲರ ಸಮುದಾಯ ವ್ಯಕ್ತಪಡಿಸಿದೆ.












Click it and Unblock the Notifications