ತೀವ್ರ ಕುತೂಹಲ ಮೂಡಿಸಿದ ಸಿಎಂ ಯಡಿಯೂರಪ್ಪ ನಡೆ: ಶ್ರುತಿ ಸ್ಥಾನಕ್ಕೆ ಸಿದ್ದಲಿಂಗಸ್ವಾಮಿ ನೇಮಕ ಯಾಕೆ?
ಬೆಂಗಳೂರು, ಜು. 19: ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ ಚರ್ಚೆ ತಾರಕ್ಕೇರಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಡೆ ತೀವ್ರ ಸಂಚಲನ ಮೂಡಿಸಿದೆ. ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನದಿಂದ ಹಿರಿಯ ನಟಿ ಶ್ರುತಿ ಅವರನ್ನು ಬದಲಾಯಿಸಲಾಗಿದೆ. ಅವರ ಜಾಗಕ್ಕೆ ಯಡಿಯೂರಪ್ಪ ಅವರ ಆಪ್ತ ಕಾಪು ಸಿದ್ದಲಿಂಗಸ್ವಾಮಿ ಅವರನ್ನು ನೇಮಕ ಮಾಡಿ ಆದೇಶ ಮಾಡಲಾಗಿದೆ. ಇದು ರಾಜ್ಯ ಬಿಜೆಪಿಯಲ್ಲಿ ಚರ್ಚೆಗೆ ಕಾರಣವಾಗಿದೆ.
ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಕೆಎಸ್‌ಟಿಡಿಸಿ ಅಧ್ಯಕ್ಷ ಸ್ಥಾನದಿಂದ ಶ್ರುತಿ ಅವರನ್ನು ವಜಾ ಮಾಡಲಾಗಿದೆ. ಕನಿಷ್ಠ ಈ ವಿಚಾರವನ್ನೂ ಅವರ ಗಮನಕ್ಕೆ ತರಲಾಗಿಲ್ಲ ಎಂಬುದು ಗಮನಿಸಬೇಕಾದ ಅಂಶವಾಗಿದೆ.
ಸರಿಯಾಗಿ ಕೆಲಸ ಮಾಡದಿರುವ ಹಾಲಿ ನಿಗಮ-ಮಂಡಳಿ, ಪ್ರಾಧಿಕಾರಗಳಿಗೆ ನೇಮಕಾತಿ ಮಾಡಿರುವವರನ್ನು ವಜಾ ಮಾಡಬೇಕು. ಉಳಿದ 2 ವರ್ಷಗಳ ಅವಧಿಗೆ ಪಕ್ಷದ ಬೇರೆ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಡಬೇಕು. ಅದಕ್ಕಾಗಿ ಒಂದು ಪಟ್ಟಿಯನ್ನೂ ಮಾಡಬೇಕು ಸಿದ್ಧಪಡಿಸಬೇಕು ಎಂಬ ಚರ್ಚೆ ಕಳೆದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ನಡೆದಿತ್ತು. ಆದರೆ ಅದು ಕಾರ್ಯರೂಪಕ್ಕೆ ಬರುವ ಮೊದಲೇ ಸಿಎಂ ಯಡಿಯೂರಪ್ಪ ಈ ಬದಲಾವಣೆಯನ್ನು ಮಾಡಿದ್ದಾರೆ.

ಮತ್ತೊಂದೆಡೆ ಸಿಎಂ ಯಡಿಯೂರಪ್ಪ ಅವರ ದೆಹಲಿ ಭೇಟಿ ಬಳಿಕ ತೆಗೆದುಕೊಂಡಿರುವ ಮೊದಲ ನಿರ್ಧಾರ ಇದಾಗಿದೆ. ಹೀಗಾಗಿ ಸಿಎಂ ಯಡಿಯೂರಪ್ಪ ಅವರು ಈ ನೇಮಕಾತಿಯ ಮೂಲಕ ರಾಜ್ಯದಲ್ಲಿ ನಡೆಯಬಹುದಾದ ಬಹುದೊಡ್ಡ ರಾಜಕೀಯ ಸ್ಥಿತ್ಯಂತರದ ಮುನ್ಸೂಚನೆ ಕೊಟ್ಟಿರಬಹುದಾ? ಎಂಬ ಚರ್ಚೆಗಳು ಈಗ ನಡೆಯುತ್ತಿವೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ರಾಜೀನಾಮೆ ಕೊಡುವಂತೆ ಹೈಕಮಾಂಡ್ ಸೂಚಿಸಿದೆ. ಆ ಹಿನ್ನೆಲೆಯಲ್ಲಿ ತಮ್ಮ ಆಪ್ತರಿಗೆ ಅವರು ಅಧಿಕಾರದ ಸ್ಥಾನಗಳನ್ನು ಒದಗಿಸುತ್ತಿದ್ದಾರೆ. ಒಂದೊಮ್ಮೆ ತಾವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾದ ಸಂದರ್ಭ ಬಂದಲ್ಲಿ ತಮ್ಮ ಆಪ್ತರಿಗೆ ಸ್ಥಾನಮಾನ ಕೊಡಿಸಿಯೇ ಹೋಗುತ್ತಾರೆ ಎಂಬ ಮಾತುಗಳೂ ಕೇಳಿ ಬಂದಿವೆ.
ಕಾಪು ಸಿದ್ದಲಿಂಗಸ್ವಾಮಿ ಅವರು ಸಿಎಂ ಯಡಿಯೂರಪ್ಪ ಅವರ ಆಪ್ತ ಸಹಾಯಕರಾಗಿದ್ದರು. ಅವರು ಮುಖ್ಯಮಂತ್ರಿ ಆಗುವುದಕ್ಕಿಂತಲೂ ಮೊದಲಿನಿಂದಲೂ
ಯಡಿಯೂರಪ್ಪ ಅವರೊಂದಿಗೆ ಇದ್ದರು. ಆದರೆ ಬದಲಾದ ಸ್ಥಿತಿಯಲ್ಲಿ ಕಳೆದ 2012ರಿಂದ ಸಿದ್ದಲಿಂಗಸ್ವಾಮಿ ಅವರನ್ನು ಯಡಿಯೂರಪ್ಪ ದೂರ ಇಟ್ಟಿದ್ದರು ಎನ್ನಲಾಗಿದೆ. ನಂತರ 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೆಜೆಪಿಯಿಂದ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರ ಎದುರು ಸ್ಪರ್ಧಿಸಿ ಸೋತಿದ್ದರು. ನಂತರ 2018ರ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಪಡೆಯಲು ಸಿದ್ದಲಿಂಗಸ್ವಾಮಿ ಅವರು ಪ್ರಯತ್ನಿಸಿದ್ದರು.












Click it and Unblock the Notifications