ಬೆಟ್ಟಿಂಗ್ ಪ್ರಕರಣ ಕಪಿಲ್ ಮೋಹನ್ ಅಮಾನತಿಗೆ ಚಿಂತನೆ
ಬೆಂಗಳೂರು, ಆ.16: ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ಸಿಲುಕಿರುವ ರಾಜ್ಯದ ಹಿರಿಯ ಐಎಎಸ್ ಅಧಿಕಾರಿ ಕಪಿಲ್ ಮೋಹನ್ ಅವರನ್ನು ಸೇವೆಯಿಂದ ಅಮಾನತು ಮಾಡಲು ರಾಜ್ಯ ಸರಕಾರ ಗಂಭೀರ ಚಿಂತನೆ ನಡೆಸಿದೆ ಎಂಬ ಸುದ್ದಿ ಹೊರಬಂದಿದೆ. ಸಿಐಡಿ ಹಾಗೂ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯಲ್ಲಿ ಕಪಿಲ್ ಮೋಹನ್ ಒಡೆತನದ ಅಪಾರ್ಟ್ಮೆಂಟ್ ನಲ್ಲಿ ಕೋಟ್ಯಂತರ ಅಕ್ರಮ ಹಣ ಪತ್ತೆಯಾಗಿತ್ತು.
ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ಐಎಎಸ್ ಅಧಿಕಾರಿ ಕಪಿಲ್ ಮೋಹನ್ ಶಾಮೀಲಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಪಿಲ್ ಮೋಹನ್ ಅವರ ಒಡೆತನದ ವಸತಿ ಸಮುಚ್ಚಯದ ಮೇಲೆ ಸಿಐಡಿ ಹಾಗೂ ಐಟಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ಸುಮಾರು 4 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ನಗದು, ಚಿನ್ನಾಭರಣ ಸೇರಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಹೀಗಾಗಿ ಈ ಬಗ್ಗೆ ಕ್ರಮ ಜರುಗಿಸಲು ಸರ್ಕಾರ ಮುಂದಾಗಿದೆ.

ಉತ್ತರ ಪ್ರದೇಶ ಮೂಲದ ಕಪಿಲ್ ಮೋಹನ್ ನವದೆಹಲಿ, ಚಂಡಿಗಢ ಸೇರಿ ವಿವಿಧ ಕಡೆಗಳಲ್ಲಿ ಅಕ್ರಮ ಆಸ್ತಿ ಸಂಪಾದಿಸಿದ್ದು, ಆ ಪ್ರದೇಶಗಳ ಮೇಲೆಯೂ ಸಿಐಡಿ, ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.
ಯಶವಂತಪುರದ ಗೋಲ್ಡನ್ ಗ್ರಾಂಡ್ ಪ್ರಾಪರ್ಟಿಸ್ ವಸತಿ ಸಮುಚ್ಚಯದ ಆರನೇ ಅಂತಸ್ತಿನಲ್ಲಿರುವ ಫ್ಲಾಟ್ (ಮೋಹನ್ ಅವರ ತಂದೆ ನರೇಶ್ ಮೋಹನ್ ಹಾಗೂ ಅವರ ಪತ್ನಿ ರುಚಿ ಸಕ್ಸೇನಾ ಹೆಸರಿನಲ್ಲಿವೆ ) ಮೇಲೆ ಅಧಿಕಾರಿಗಳು ಆ.5ರಂದು ದಾಳಿ ನಡೆಸಿದ್ದು, 4.37 ಕೋಟಿ ರೂ.ನಗದು, 2.5 ಕೆಜಿ ಚಿನ್ನ, ವಜ್ರಾಭರಣ ಸೇರಿ ಆಸ್ತಿ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಹುಬ್ಬಳ್ಳಿ ಲಿಂಕ್: ರಾಜ್ಯದ ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆ ಪ್ರಧಾನ ಕಾರ್ಯದರ್ಶಿ ಕಪಿಲ್ ಮೋಹನ್ ಅವರಿಗೆ ಸೇರಿದ ಅಪಾರ್ಟ್ಮೆಂಟ್ ನಲ್ಲಿ ಅಪಾರ ಹಣ ಪತ್ತೆಯಾಗಿರುವುದಕ್ಕೂ ಹುಬ್ಬಳ್ಳಿಯ ಕ್ರಿಕೆಟ್ ಬೆಟ್ಟಿಂಗ್ ಜಾಲಕ್ಕೂ ಲಿಂಕ್ ಇರುವುದು ಪತ್ತೆಯಾಗಿದೆ.ಹುಬ್ಬಳ್ಳಿ ಕ್ರಿಕೆಟ್ ಬೆಟ್ಟಿಂಗ್ ಪ್ರಕರಣ ಸಂಬಂಧ ಜೈಲು ಸೇರಿರುವ ಅರ್ಜುನ್ ಹಾಗೂ ಹೀರಾಚಂದ್ ಬೆಂಗಳೂರಿನ ಎಂಬ ಬುಕ್ಕಿಗಳು ಈ ಬಗ್ಗೆ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದರು.
ಮೋಹನ್ ಅವರು ವಿಜ್ಞಾನ, ಮ್ಯಾನೇಜ್ಮೆಂಟ್ ವಿಷಯಗಳಲ್ಲಿ ಪದವೀಧರರಾಗಿದ್ದಾರೆ, ಸೈಂಟ್ ಆಂಡ್ರ್ಯೂಸ್ ಪ್ರಶಸ್ತಿ, ಎಂಐಟಿ ಪ್ರಶಸ್ತಿ, ಮೆಕ್ ನಾಮರಾ ಫೆಲೋ ಪ್ರಶಸ್ತಿ ಗಳಿಸಿದ್ದಾರೆ.












Click it and Unblock the Notifications