SC/ST ಭೂಮಿ ಸಂರಕ್ಷಣೆಗೆ ಕಾಯ್ದೆ ತಿದ್ದುಪಡಿ ತರಲಿದೆ ಸರ್ಕಾರ
ಬೆಂಗಳೂರು, ಜುಲೈ 19: ಬೆಂಗಳೂರಿನಲ್ಲಿ ನಡೆದ ಸಚಿವ ಸಂಪುಟವು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಕೆಲವು ಜಮೀನುಗಳ ವರ್ಗಾವಣೆ ನಿಷೇಧ) ಪಿಟಿಸಿಎಲ್ ಕಾಯ್ದೆಯ ತಿದ್ದುಪಡಿಗಳಿಗೆ ಅನುಮೋದನೆ ನೀಡಿದೆ ಎಂದು ತಿಳಿದು ಬಂದಿದೆ.
ಮೂಲಗಳ ಪ್ರಕಾರ SC/ST ಫಲಾನುಭವಿಗಳಿಗೆ ಮಂಜೂರಾದ ಭೂಮಿಯನ್ನು ಮರುಸ್ಥಾಪಿಸಲು ಕೋರಿ ನ್ಯಾಯಾಲಯಗಳನ್ನು ಸಂಪರ್ಕಿಸಲು ಯಾವುದೇ ಸಮಯದ ನಿರ್ಬಂಧ ಅನ್ವಯಿಸುವುದಿಲ್ಲ ಎಂದು ನಿರ್ದಿಷ್ಟಪಡಿಸಲು ಒಂದು ವಿಭಾಗವನ್ನು ಸೇರಿಸಲು ಕ್ಯಾಬಿನೆಟ್ ನಿರ್ಧರಿಸಿದೆ.

ಕೆಲವು ಪ್ರಕರಣಗಳಲ್ಲಿ 25-30 ವರ್ಷಗಳ ಹಿಂದೆ ಭೂಮಿ ಮಾರಾಟ ಅಥವಾ ವರ್ಗಾವಣೆ ನಡೆದ ಅರ್ಜಿದಾರರ ಪ್ರಕರಣಗಳನ್ನು ನ್ಯಾಯಾಲಯಗಳು ವಜಾಗೊಳಿಸಿವೆ. ಆದರೆ 2-3 ದಶಕಗಳ ಹಿಂದೆಯೇ ಇಂತಹ ಹಲವಾರು ವರ್ಗಾವಣೆಗಳು ನಡೆದಿದ್ದು, ಭೂ ಮಂಜೂರಾತಿದಾರರ ಕಾನೂನುಬದ್ಧ ವಾರಸುದಾರರಿಗೆ ನ್ಯಾಯ ಸಿಗಬೇಕು ಎಂದು ದಲಿತ ಹೋರಾಟಗಾರರು ಇದನ್ನು ವಿರೋಧಿಸುತ್ತಿದ್ದಾರೆ.
1978 ರ ಕಾಯಿದೆಯು ಸಮಯದ ಮಿತಿಯ ಬಗ್ಗೆ ಹೇಳಿಲ್ಲ ಮತ್ತು ಕಾನೂನಿನ ಬಲವನ್ನು ದುರ್ಬಲಗೊಳಿಸದಂತೆ ನೋಡಿಕೊಳ್ಳಲು ಸಂಘಟನೆಗಳು ಬೇಡಿಕೆ ಇಟ್ಟಿವೆ. ಹಾಗಾಗಿ ಎಸ್‌ಸಿ/ಎಸ್‌ಟಿ ಸಮುದಾಯದ ಭೂಮಿಯ ಹಕ್ಕುಗಳನ್ನು ರಕ್ಷಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಭರವಸೆ ನೀಡಿದ್ದರು.
ತಿದ್ದುಪಡಿ ವಿಧೇಯಕ ಬುಧವಾರ ವಿಧಾನಮಂಡಲದಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ. ಇದರೊಂದಿಗೆ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರಲು ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, 1 ಕೋಟಿ ರೂ.ವರೆಗಿನ ಪರಿಹಾರಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಜಿಲ್ಲಾ ನ್ಯಾಯಾಲಯಗಳಿಗೆ ಕಳುಹಿಸುವ ಮೂಲಕ ಹೈಕೋರ್ಟ್‌ಗೆ ಅಂತಹ ಹೊರೆಯಿಂದ ಮುಕ್ತಿ ನೀಡಲಾಗುವುದು. ಈ ಕ್ರಮದಿಂದ ಈ ಸಂಬಂಧ ಹೈಕೋರ್ಟ್‌ನಲ್ಲಿ ಬಾಕಿ ಉಳಿದಿರುವ ಪ್ರಕರಣಗಳು ಎರಡು ಲಕ್ಷದಷ್ಟು ಕಡಿಮೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿ ದಲಿತರ ಜಮೀನು ಹಕ್ಕು ಪರಭಾರೆ ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ವಿಷಯದಲ್ಲಿ ಯಾವುದೇ ಬಹಿರಂಗ ಒತ್ತಡಕ್ಕೆ ಮಣಿಯುವುದಿಲ್ಲ. ಈ ವಿಚಾರದಲ್ಲಿ ನಮ್ಮ ಕಾಳಜಿಗಳ ಜತೆ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದರು.
ದಲಿತರ ಜಮೀನು ಹಕ್ಕು ಕಾಪಾಡುವ ನಿಟ್ಟಿನಲ್ಲಿ ಪಿ ಟಿ ಸಿ ಎಲ್ ಕಾಯ್ದೆಗೆ ತಿದ್ದುಪಡಿ ಮಾಡುವ ಕುರಿತ ಸರ್ಕಾರದ ನಿಲುವನ್ನು ಆಯವ್ಯಯದಲ್ಲಿಯೂ ಸ್ಪಷ್ಟ ಪಡಿಸಲಾಗಿದೆ. ಪ್ರಸ್ತುತ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದಲ್ಲಿಯೇ ಕಾಯ್ದೆ ತಿದ್ದುಪಡಿ ಮಾಡುವ ಉದ್ದೇಶದಿಂದ ಸಮುದಾಯದ ಮುಖಂಡರ ಅಭಿಪ್ರಾಯ ಪಡೆಯಲು ಈ ಸಭೆ ಕರೆಯಲಾಗಿತ್ತು.
ಮತ್ತೆ ಮತ್ತೆ ಯಾವುದೇ ವಿವಾದ ಇರಬಾರದು, ಪಿಟಿಸಿಎಲ್ ಕಾಯ್ದೆಯ ಉದ್ದೇಶ ಪರಿಣಾಮಕಾರಿಯಾಗಿ ಈಡೇರಬೇಕು, ಭೂ ಕಳೆದುಕೊಂಡವರಿಗೆ ನ್ಯಾಯಾಲಯದಲ್ಲಿ ಹಿನ್ನಡೆ ಆಗಬಾರದು ಎನ್ನುವ ಉದ್ದೇಶದಿಂದ ಈ ಬಗ್ಗೆ ದಲಿತ ಮುಖಂಡರ ಮತ್ತು ನ್ಯಾಯವಾದಿಗಳ ಅಭಿಪ್ರಾಯ ಕೇಳಿದ್ದೇನೆ. ಕಾನೂನು ತಜ್ಞರ ಅಭಿಪ್ರಾಯವನ್ನೂ ಪಡೆದುಕೊಳ್ಳುತ್ತೇವೆ ಎಂದು ಹೇಳಿದ್ದರು.












Click it and Unblock the Notifications