ಕನ್ನಡಕ್ಕಾಗಿ ಕೈ ಎತ್ತಿದ ಶಿಕ್ಷಕನಿಗೆ ಶಿಕ್ಷೆ ಕೊಟ್ಟ ಕರ್ನಾಟಕ ಸರ್ಕಾರ!
ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎನ್ನುವ ಮಾತನ್ನು ನಾವೆಲ್ಲರೂ ನಂಬಿದ್ದೇವೆ. ಆದರೆ, ರಾಜ್ಯ ಸರ್ಕಾರವು ಈ ಮಾತನ್ನು ಸುಳ್ಳಾಗಿಸಿದೆ. ಹೌದು ಕನ್ನಡಕ್ಕಾಗಿ ಕೈ ಎತ್ತಿದ ಶಿಕ್ಷಕರೊಬ್ಬರಿಗೆ ಶಿಕ್ಷೆ ನೀಡುವ ಮೂಲಕ ಕನ್ನಡಪರ ಧ್ವನಿ ಎತ್ತುವವರನ್ನು ಕಟ್ಟಿಹಾಕಿದೆ. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ನಿಡಗುಂದಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳ ಕೊರತೆಯ ಕುರಿತು ಅಲ್ಲಿನ ಶಿಕ್ಷಕರಾದ ವೀರಣ್ಣ ಮಡಿವಾಳ ಅವರು ಸಾತ್ವಿಕ ಪ್ರತಿಭಟನೆಯನ್ನು ಮಾಡಿದ್ದರು. ಕನ್ನಡ ಶಾಲೆಯ ಮಕ್ಕಳಿಗಾಗಿ ನಾಲ್ಕು ಕೊಠಡಿಗಳನ್ನು ಕೊಡಿ ಎಂದು ಮನವಿ ಮಾಡಿದ್ದರು. ಆದರೆ, ಅವರನ್ನು ರಾಜ್ಯ ಸರ್ಕಾರವು ಅಮಾನತು ಮಾಡಿದೆ. ಇಷ್ಟು ಮಾತ್ರವಲ್ಲ
ಈ ಅಮಾನತು ಆದೇಶವನ್ನು ಹಿಂಪಡೆಯುವುದಾಗಿ ಹೇಳಿದ್ದ ರಾಜ್ಯ ಸರ್ಕಾರವು ಇಲ್ಲಿಯ ವರೆಗೆ ಅಮಾನತು ಆದೇಶವನ್ನು ಹಿಂಪಡೆದಿಲ್ಲ. ಶಿಕ್ಷಣ ಕಳಕಳಿಯ ಪ್ರತೀಕವಾಗಿ ಸಾತ್ವಿಕ ಪ್ರತಿಭಟನೆ ತೋರಿಸಿದ್ದರು. ಇದನ್ನು ಅಶಿಸ್ತು ಎಂದು ಪರಿಗಣಿಸಿ ಅವರನ್ನು ಸೇವೆಯಿಂದ ಅಮಾನತು ಮಾಡುವ ಕಠಿಣ ನಿರ್ಧಾರವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿತ್ತು. ಇನ್ನು ಅಮಾನತು ಹಿಂಪಡೆಯುವುದಾಗಿ ಹೇಳಲಾಗಿತ್ತು. ಆದರೆ ಅದು ಇನ್ನೂ ಆಗಿಲ್ಲ. ಈ ಬಗ್ಗೆ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ನೋವಿನಿಂದ ಬರೆದುಕೊಂಡಿದ್ದಾರೆ.

ನನ್ನನ್ನ ಅಮಾನತ್ತು ಮಾಡಿ ಇಂದಿಗೆ ಹನ್ನೊಂದು ದಿನ. ದುರಂತವೆಂದರೆ ನನ್ನ ಅಮಾನತ್ತು ಹಿಂಪಡೆಯಲಾಗಿದೆ ಎಂದು ನಮ್ಮವರೇ ಪುಕಾರು ಎಬ್ಬಿಸಿದರು. ಹಾಗೆ ಪುಕಾರು ಹಬ್ಬಿಸುವ ಮೂಲಕ ನನ್ನ ಅಮಾನತ್ತು ಹಿಂಪಡೆಯಲು ದನಿ ಎತ್ತಿದ ಎಲ್ಲರ ದನಿ ಹತ್ತಿಕ್ಕಿದರು. ಜನರ ಸಹಕಾರದಿಂದ ಕಟ್ಟಿದ ನನ್ನ ಶಾಲೆಗೆ ಇಂದು ನಾನೇ ಅಪರಿಚಿತನಾಗಿದ್ದೇನೆ ಎಂದು ಹೇಳಿದ್ದಾರೆ.
ಇಂದು ಶಾಲೆಗೆ ನನ್ನ ಕೆಲವು ದಾಖಲೆಗಳನ್ನ ಕೇಳಲು ಹೋದರೆ ಅವರ ಲೆಟರ್ ತೆಗೆದುಕೊಂಡು ಬಾ ಇವರ ಲೆಟರ್ ತೆಗೆದುಕೊಂಡು ಬಾ ಎಂದು ನನ್ನ ಇನ್ಚಾರ್ಜ್ ನಲ್ಲಿದ್ದ ಶಿಕ್ಷಕರು, ಸಿಆರ್‌ಪಿ ಮತ್ತು ಸಮನ್ವಯಾಧಿಕಾರಿಗಳು ಅವಮಾನಿಸಿದರು. ಅಲ್ಲಿನ ಒಂದೊಂದು ವಸ್ತುವೂ ಯಾರದೋ ನಂಬಿಕೆ ಮತ್ತು ವಿಶ್ವಾಸದಿಂದ ಕೂಡಿಸಿಟ್ಟಂಥವುಗಳು. ಅಲ್ಲಿನ ಪ್ರತಿ ಕಾಗದದ ಹಿಂದೆಯೂ ಹಗಲೂ ರಾತ್ರಿಯ ಬೆವರು ಕಣ್ಣೀರಿದೆ. ಕೊನೆಯಲ್ಲಿ ಹೇಗೋ ಬಿಇಒ ರವರೊಂದಿಗೆ ಮಾತನಾಡಿ ನನ್ನ ಅಗತ್ಯ ದಾಖಲೆಗಳಲ್ಲಿ ಕೆಲವು ತಂದಿದ್ದೇನೆ.
ಈ ತ್ರಿಶಂಕು ಸ್ಥಿತಿ ಅಸಹನೀಯವಾಗಿದೆ. ನೋಟೀಸ್ ಕೊಟ್ಟ ಇಪ್ಪತ್ನಾಲ್ಕು ಗಂಟೆಯೊಳಗೆ ನನ್ನ ಅಮಾನತ್ತು ಮಾಡಲು ಇವರಿಗೆ ಸಾಕಾಯಿತು. ಅಮಾನತ್ತು ಹಿಂದೆ ಪಡೆಯಲು ಇವರಿಗೆ 264 ಗಂಟೆಗಳೂ ಕೂಡ ಸಾಲದಾಯಿತು. ನನ್ನ ದುರಂತವೆಂದರೆ ನಮ್ಮವರೊಡನೆ ನ್ಯಾಯಕ್ಕಾಗಿ ನಾನೇ ಹೋರಾಡಬೇಕಾದ ಸ್ಥಿತಿ ಬಂದಿರುವುದು. ನಾನು ಮಾಡಿದ್ದಾದರೂ ಅದೆಂಥ ಘೋರ ಅಪರಾಧ?! ಕೆಲಸದಿಂದಲೇ ಅಮಾನತ್ತು ಮಾಡಿದರು.... ! ಅದೂ ಒಬ್ಬ ಸರಕಾರಿ ನೌಕರನಿಗೆ ಕೊಡಬೇಕಾದ ಕಾಲಾವಕಾಶವನ್ನೂ ಕೊಡದೆ....
ನಾನು ಈ ವರುಷ ಸುಮಾರು ನಲವತ್ತು ಮಕ್ಕಳ ಅಡ್ಮೀಶನ್ ಗಾಗಿ ಸರ್ವೇ ಮಾಡಿದ್ದೆ. ಈಗ ಆಗಿರುವುದು ಕೇವಲ ನಾಲ್ಕು ಅಡ್ಮೀಶನ್ ಎಂದು ಕೇಳಿ ತುಂಬಾ ನೊಂದೆ. ಅದರಲ್ಲೂ ಒಂದು ಮಗು ನಮ್ಮ ಶಾಲೆಯಿಂದ ಮತ್ತೊಂದು ಶಾಲೆಗೆ ವರ್ಗಾವಣೆ ಪತ್ರ ತೆಗೆದುಕೊಂಡು ಹೋಗುತ್ತಿದೆ.
ಅನೇಕ ಪಾಲಕರು ನನಗೆ ಕರೆ ಮಾಡಿ ನಾನು ಬರುತ್ತೇನೋ ಇಲ್ಲವೋ ಎಂದು ಪದೇ ಪದೇ ಖಾತರಿಪಡಿಸಿಕೊಳ್ಳುತ್ತಿದ್ದಾರೆ. ಅವರೆಲ್ಲ ತಮ್ಮ ಮಕ್ಕಳನ್ನ ಬೇರೆ ಶಾಲೆಗೆ ಅಡ್ಮೀಶನ್ ಮಾಡಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಇದು ಯಾರಿಗೆ ನಷ್ಟ ಎಂದು ಅವರು ಪ್ರಶ್ನೆ ಮಾಡಿದ್ದಾರೆ.












Click it and Unblock the Notifications