ಸರ್ಕಾರಿ ಭೂಮಿ ಬಳಕೆ ಮಾಡದಿದ್ದರೆ, ವಾಪಸ್ ಕೊಡಿ
ಬೆಂಗಳೂರು, ಅ.15 : ಮಠ, ಸಂಘ-ಸಂಸ್ಥೆ, ಉದ್ಯಮ, ಶಿಕ್ಷಣ ಸಂಸ್ಥೆಗಳಿಗೆ ನೀಡಿರುವ ಜಮೀನನ್ನು ಅವುಗಳು ಉದ್ದೇಶಿತ ಯೋಜನೆಗಳಿಗೆ ಉಪಯೋಗಿಸಿಕೊಳ್ಳದಿದ್ದರೆ ಅದನ್ನು ಹಿಂಪಡೆಯಲು ಸರ್ಕಾರ ತೀರ್ಮಾನಿಸಿದೆ. ಈ ಕುರಿತು ಕಾನೂನನ್ನು ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ.
ಕಂದಾಯ ಸಚಿವ ಶ್ರೀನಿವಾಸ್ ಪ್ರಸಾದ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಧಾರ್ಮಿಕ ಸಂಸ್ಥೆಗಳು, ಉದ್ಯಮಗಳು, ಶೈಕ್ಷಣಿಕ ಸಂಸ್ಥೆಗಳು ಸರ್ಕಾರ ನೀಡಿರುವ ಜಮೀನನ್ನು ಉಪಯೋಗಿಸದಿದ್ದರೆ, ಅದನ್ನು ಸರ್ಕಾರಕ್ಕೆ ಕೊಂಡ ಬೆಲೆಯಲ್ಲಿಯೇ ಮಾರಾಟ ಮಾಡಲು ಅನುಕೂಲವಾಗುವಂತೆ ಕಾನೂನನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ. [ಸರ್ಕಾರಿ ಭೂಮಿ ಒತ್ತುವರಿ, ವರದಿ ಕೇಳಿದ ರಾಜ್ಯಪಾಲರು]

ಈ ಕಾನೂನು ಜಾರಿಗೆ ಬಂದರೆ ಸರ್ಕಾರಿ ಜಮೀನನ್ನು ಮಾರಾಟ ಮಾಡುವ ಸಂಸ್ಥೆಗಳ ಮೇಲೆ ಸಂಪೂರ್ಣ ನಿರ್ಬಂಧ ವಿಧಿಸಲಾಗುತ್ತದೆ. ಇದರಿಂದ ಸರ್ಕಾರಿ ಜಮೀನು ದುರ್ಬಳಕೆಯಾಗುವುದನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಸರ್ಕಾರ ನೀಡಿದ ಜಮೀನಿನಲ್ಲಿ 10 ವರ್ಷ ಉದ್ದೇಶಿತ ಯೋಜನೆ ಕೈಗೊಳ್ಳದಿದ್ದರೆ, ಜಮೀನು ವಾಪಸ್ ನೀಡಬೇಕಾಗುತ್ತದೆ ಎಂದರು. [ಭೂಗಳ್ಳರ ವಿರುದ್ಧದ ಹೋರಾಟ ಇಂದು ಅಂತ್ಯ]
ಜಮೀನು ವಾಪಸ್ ಪಡೆಯಲು ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಚಿಂತನೆ ನಡೆಸಿದ್ದು, ಬೆಳಗಾವಿಯಲ್ಲಿ ನವೆಂಬರ್‌ನಲ್ಲಿ ನಡೆಯುವ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸುವ ಸಾಧ್ಯತೆ ಇದೆ. ಹೀಗೆ ಹಿಂಪಡೆದ ಜಾಗವನ್ನು ಯೋಜನೆಗಳನ್ನು ಜಾರಿಗೊಳಿಸುವ ಇತರ ಸಂಸ್ಥೆಗಳಿಗೆ ನೀಡುವ ಉದ್ದೇಶವನ್ನು ಸರ್ಕಾರ ಹೊಂದಿದೆ.
ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುತ್ತೇವೆ ಎಂದು ಸರ್ಕಾರದಿಂದ ಜಮೀನು ಪಡೆಯುವ ಸಂಸ್ಥೆಗಳು ಅವುಗಳನ್ನು ಹಾಗೆ ಬಿಟ್ಟು ಕೆಲವು ವರ್ಷಗಳು ಕಳೆದ ಮೇಲೆ ಅವುಗಳನ್ನು ದುಬಾರಿ ಬೆಲೆಗೆ ಮಾರುವುದು, ಬಹುಮಹಡಿ ಕಟ್ಟಡಗಳನ್ನು ಕಟ್ಟಿ ವಾಣಿಜ್ಯ ಉಪಯೋಗಕ್ಕೆ ಬಳಸುತ್ತಾರೆ. ಇವುಗಳನ್ನು ತಡೆಯಲು ಕಾನೂನು ಸಹಾಯಕವಾಗಲಿದೆ ಎಂದು ನಿರೀಕ್ಷಿಸಲಾಗಿದೆ.












Click it and Unblock the Notifications