Kamal Haasan: ಕರ್ನಾಟಕ ಸರ್ಕಾರದಿಂದ ನಟ ಕಮಲ್ ಹಾಸನ್‌ಗೆ ಗಂಭೀರ ಎಚ್ಚರಿಕೆ!
Kamal Haasan: ತಮಿಳು ಭಾಷೆಯಿಂದಲೇ ಕನ್ನಡ ಹುಟ್ಟಿತು ಎನ್ನುವ ಹಾಗೂ ತಲೆಬಾಗಬೇಕು ಎನ್ನುವ ಹೇಳಿಕೆಗಳಿಗೆ ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಅವರು ಕನ್ನಡಿಗರ ಕ್ಷಮೆ ಕೇಳಬೇಕು. ಈ ವಿಚಾರದಲ್ಲಿ ಕನ್ನಡಿಗರ ಕ್ಷಮೆ ಕೇಳದೆ ಇದ್ದರೆ ಕರ್ನಾಟಕದಲ್ಲಿ ಅವರ ಸಿನಿಮಾಗಳನ್ನು ನಿಷೇಧ ಮಾಡಲಾಗುವುದು ಎಂದು ಕರ್ನಾಟಕ ಸರ್ಕಾರವು ಎಚ್ಚರಿಕೆ ನೀಡಿದೆ. ರಾಜ್ಯದಲ್ಲಿ ನಟ ಕಮಲ್ ಹಾಸನ್ ಅವರ ಹೇಳಿಕೆಯನ್ನು ಖಂಡಿಸಿ ಜೋರು ಪ್ರತಿಭಟನೆ ನಡೆದಿದೆ. ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಈ ವಿಚಾರವಾಗಿ ರಿಯಾಕ್ಟ್ ಮಾಡಿದ್ದಾರೆ. ಕಮಲ್ ಹಾಸನ್ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಇದೀಗ ರಾಜ್ಯ ಸರ್ಕಾರವೇ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿದೆ.
ಕನ್ನಡ ಭಾಷೆ ಹುಟ್ಟಿದ್ದು ತಮಿಳಿನಿಂದ ಎಂದು ಹೇಳಿ ವಿವಾದಕ್ಕೆ ಕಾರಣರಾಗಿರುವ ನಟ ಕಮಲ್ ಹಾಸನ್‌ಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಇದನ್ನು ಕನ್ನಡಿಗರು ಹಾಗೂ ಕರ್ನಾಟಕದ ಎಲ್ಲಾ ಪಕ್ಷಗಳು ಪಕ್ಷಾತೀತವಾಗಿ ಖಂಡನೆ ಮಾಡಿವೆ. ಕನ್ನಡದ ವಿಚಾರದಲ್ಲಿ ಇಡೀ ಕರ್ನಾಟಕವೇ ಒಂದಾಗಿದೆ. ನಟ ಕಮಲ್ ಹಾಸನ್ ಅವರು ಕನ್ನಡಿಗರ ಕ್ಷಮೆ ಕೇಳಬೇಕು ಎನ್ನುವ ಆಗ್ರಹ ಹೆಚ್ಚಾಗಿದೆ. ಅಲ್ಲದೇ ಅವರ ಸಿನಿಮಾವನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡಬೇಕು ಎಂದೂ ಕನ್ನಡಿಗರು ಹೇಳುತ್ತಿದ್ದಾರೆ. ಇದೀಗ ಈ ವಿಚಾರಾಗಿ ಕರ್ನಾಟಕ ಸರ್ಕಾರವು ಕಮಲ್ ಹಾಸನ್ ಅವರಿಗೆ ಗಂಭೀರವಾದ ಎಚ್ಚರಿಕೆಯನ್ನು ನೀಡಲಾಗಿದೆ.

ಕನ್ನಡದ ಭಾಷೆ ಬಗ್ಗೆ ಹಗುರವಾಗಿ ಮಾತನಾಡಿರುವ ನಟ ಕಮಲ್ ಹಾಸನ್ ಅವರು ಕೂಡಲೇ ರಾಜ್ಯದ ಜನರ ಕ್ಷಮೆಯಾಚಿಸಬೇಕು. ಇಲ್ಲದ್ದಿದ್ದರೆ ಅವರ ಚಿತ್ರಗಳಿಗೆ ರಾಜ್ಯದಲ್ಲಿ ನಿರ್ಬಂಧ ಹೇರುವಂತೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆಯಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ಎಚ್ಚರಿಕೆ ನೀಡಿದ್ದಾರೆ.
ವಿಕಾಸಸೌಧದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕನ್ನಡದ ನೆಲ, ಜಲ, ಭಾಷೆ ವಿಚಾರದಲ್ಲಿ ಯಾವುದೇ ದೊಡ್ಡ ವ್ಯಕ್ತಿ ಇದ್ದರೂ ಅದನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಕಮಲ್ ಹಾಸನ್ ಅವರು ಕೂಡಲೇ ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಕನ್ನಡದ ಹಲವು ಚಿತ್ರಗಳಲ್ಲಿ ಕಮಲ್ ಹಾಸನ್ ಅವರು ನಟನೆ ಮಾಡಿದ್ದಾರೆ. ಓರ್ವ ಹಿರಿಯ ನಟ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಅವರ ಚಿತ್ರಗಳಿಗೆ ರಾಜ್ಯದಲ್ಲಿ ಬಿಡುಗಡೆಗೆ ನಿಷೇಧ ಹೇರುವಂತೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆಯಲಾವುದು ಎಂದಿದ್ದಾರೆ.
ನಟನೆ ಮಾಡಲು ಹಾಗೂ ಹಣ ಸಂಪಾದನೆ ಮಾಡಲು ನಮ್ಮ ಭಾಷೆ ಬೇಕು. ಇದೀಗ ಪುಕ್ಕಟೆ ಪ್ರಚಾರಕ್ಕೆ ಮಾತನಾಡುವುದೇ ? ಈ ಹಿಂದೆ ಸೋನು ನಿಗಮ್‌ಗೆ ಅವರು ಇದೇ ರೀತಿ ಕನ್ನಡಿಗರ ಬಗ್ಗೆ ಮಾತನಾಡಿ, ಬಳಿಕ ಎಚ್ಚೆತ್ತು ಕ್ಷಮೆಯಾಚಿಸಿದ್ದಾರೆ. ಇವರಿಗೆಲ್ಲ ಪಾಠ ಕಲಿಸುವ ಅಗತ್ಯವಿದೆ ಎಂದಿದ್ದಾರೆ.
ನಟ ಶಿವರಾಜ್ ಕುಮಾರ್ ಅವರು ಅಲ್ಲಿಯೇ ಇದ್ದು ಈ ಬಗ್ಗೆ ಖಂಡನೆ ಮಾಡಿಲ್ಲ ಎಂಬ ಮಾಧ್ಯಮವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕನ್ನಡಕ್ಕಾಗಿ ರಾಜ್ ಕುಮಾರ್ ಅವರು ತನ್ನದೇ ಆದ ಕೊಡುಗೆ ನೀಡಿದ್ದಾರೆ. ಕನ್ನಡ ಕೂಡ ಅವರ ಕುಟುಂಬಕ್ಕೆ ಎಲ್ಲವನ್ನೂ ನೀಡಿದೆ. ಹೀಗಾಗಿ ನಟ ಶಿವರಾಜ್ ಕುಮಾರ್ ಅವರು, ಕಮಲ್ ಹಾಸನ್ ಅವರ ಹೇಳಿಕೆಯನ್ನು ಖಂಡಿಸಬೇಕು ಎಂದು ಒತ್ತಾಯಿಸಿದರು.












Click it and Unblock the Notifications