ಬಸ್ ಪ್ರಯಾಣ ದರ ಏರಿಸಲು ಸರ್ಕಾರ ಪ್ಲ್ಯಾನ್?
ಬೆಂಗಳೂರು, ಆಗಸ್ಟ್ 23: ನಿನ್ನೆಯಷ್ಟೇ ಬೆಂಗಳೂರು ವ್ಯಾಪ್ತಿಯಲ್ಲಿ ನೀರಿನ ದರ ಏರಿಕೆ ಮಾಡುವ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿದ್ದರು. ಇದೀಗ ಬಸ್ ಟಿಕೆಟ್ ದರವನ್ನೂ ಏರಿಸಲು ಸರ್ಕಾರ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ವಿಪಕ್ಷ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯದಲ್ಲಿ ಈಗಾಗಲೇ ವಿದ್ಯುತ್ ದರ ಹೆಚ್ಚಳ ನಿರ್ಧರಿಸಲು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ರಚನೆಯಾಗಿದೆ. ಈಗ ಇದೇ ಮಾದರಿಯಲ್ಲಿ ಸಾರಿಗೆ ನಿಗಮಗಳ ದರ ಏರಿಕೆಗೆ ಕರ್ನಾಟಕ ಸಾರಿಗೆ ನಿಯಂತ್ರಣ ಆಯೋಗ (ಕೆಟಿಆರ್‌ಸಿ) ರಚನೆಗೆ ಸರ್ಕಾರ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಈ ಆಯೋಗ ರಚನೆಯಾದಲ್ಲಿ, ಕಾಲಕಾಲಕ್ಕೆ ತಕ್ಕಂತೆ ಬಸ್ ಪ್ರಯಾಣ ದರ ಕೂಡ ಹೆಚ್ಚಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ಬಗ್ಗೆ ಮಾತನಾಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ವಿದ್ಯುತ್ ದರ ಏರಿಕೆಯಂತೆಯೇ ಸಾರಿಗೆ ನಿಗಮಗಳಲ್ಲಿ ಬಸ್ ಪ್ರಯಾಣ ದರ ಏರಿಕೆಯಾಗಬೇಕು. ಇಲ್ಲದಿದ್ದರೆ, ನಿಗಮಗಳು ನಷ್ಟಕ್ಕೆ ಸಿಲುಕುತ್ತವೆ. ಆಗ ಆ ನಷ್ಟ ಭರಿಸುವುದು ಕಷ್ಟವಾಗಲಿದೆ. ಹಾಗಾಗಿ ನಿಗಮ ರಚನೆಗೆ ಮುಂದಾಗಿದ್ದೇವೆ. ಈ ಬಗ್ಗೆ ಸಭೆಗಳನ್ನು ನಡೆಸಲಿದ್ದು, ಆ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇದಕ್ಕೆ ಬಿಜೆಪಿ ನಾಯಕರಿಂದ ವಿರೋಧ ವ್ಯಕ್ತವಾಗಿದ್ದು, ಈ ನಿರ್ಧಾರವನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಖಂಡಿಸಿದ್ದಾರೆ. ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಇಂದಿನ ಕಾಂಗ್ರೆಸ್ ಸರ್ಕಾರದಷ್ಟು ಜನ ವಿರೋಧಿ ಸರ್ಕಾರವನ್ನು ರಾಜ್ಯದ ಜನತೆ ಎಂದೂ ಕಂಡಿಲ್ಲ. ಸುಳ್ಳು ಭರವಸೆಗಳನ್ನು ಪೂರೈಸಲಾಗದೇ ರಾಜ್ಯದ ಖಜಾನೆಯನ್ನು ಸಂಪೂರ್ಣ ಬರಿದು ಮಾಡಿಕೊಂಡಿರುವ ಈ ಸರ್ಕಾರ, ಜನಕಲ್ಯಾಣವನ್ನು ಮರೆತು ಭ್ರಷ್ಟಾಚಾರ, ಸ್ವಜನ ಪಕ್ಷಪಾತದಲ್ಲಿ ತೊಡಗಿ ರಾಜ್ಯದ ಜನತೆಯನ್ನು ದಿನಕ್ಕೊಂದು ಸಂಕಷ್ಟಕ್ಕೆ ತಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

ʼಜನರಿಗೆ ದಿನಕ್ಕೊಂದು ಬೆಲೆ ಏರಿಕೆಯ ಬರೆ ಎಳೆಯುತ್ತಾ ನಿನ್ನೆಯಷ್ಟೇ ಕುಡಿಯುವ ನೀರಿನ ಬೆಲೆ ಏರಿಕೆ ಮಾಡುವ ಉಪಮುಖ್ಯಮಂತ್ರಿಗಳ ದರ್ಪದ ಹೇಳಿಕೆಯ ಬೆನ್ನಲ್ಲೇ, ವಿದ್ಯುತ್ ದರ ಏರಿಕೆಯ ಮಾದರಿಯಲ್ಲಿಯೇ ಬಸ್ ಪ್ರಯಾಣ ದರವನ್ನೂ ಕಾಲ ಕಾಲಕ್ಕೆ ಹೆಚ್ಚಿಸುವ ಸಾರಿಗೆ ಸಚಿವರ ಹೇಳಿಕೆ ರಾಜ್ಯದ ಜನರಿಂದ ಮತ್ತಷ್ಟು ಹಣ ದೋಚುವ ಹುನ್ನಾರವಲ್ಲದೇ ಬೇರೇನೂ ಅಲ್ಲʼ ಎಂದು ವಿಜಯೇಂದ್ರ ಹೇಳಿದ್ದಾರೆ.
ʼಪ್ರಯಾಣಿಕರ ಕೈ ಸುಡುವ ಈ ನಿರ್ಧಾರದಿಂದ ಜನಸಾಮಾನ್ಯರು, ಕಾರ್ಮಿಕರು, ಬಡವರು ಹಾಗೂ ಮಧ್ಯಮ ವರ್ಗದವರು ಈ ಸರ್ಕಾರದ ಬೆಲೆ ಏರಿಕೆಯ ಚಕ್ರವ್ಯೂಹದಲ್ಲಿ ಸಿಲುಕಿ ನಲುಗುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಕೂಡ ರಾಜ್ಯ ಸರ್ಕಾರದ ಈ ಚಿಂತನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಸ್ ದರ ಏರಿಕೆಗೆ ಹೊಸ ಆಯೋಗ-ಪಿಕ್ ಪಾಕೆಟ್ ಸರ್ಕಾರದ ಹೊಸ ಪ್ರಯೋಗ ಎಂದು ಲೇವಡಿ ಮಾಡಿದ್ದಾರೆ.
ʼಅಧಿಕಾರಕ್ಕೆ ಬಂದ ದಿನದಿಂದ ಬೆಲೆ ಏರಿಕೆ, ತೆರಿಗೆ ಹೆಚ್ಚಳ ಎಂದು ಒಂದಲ್ಲ ಒಂದು ರೀತಿ ಜನ ಸಾಮಾನ್ಯರ ಸುಲಿಗೆ ಮಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಈಗ ಬಸ್ ದರ ಏರಿಕೆಗೆ ಪ್ರತ್ಯೇಕ ಆಯೋಗ ರಚಿಸಿ ಪಿಕ್ ಪಾಕೆಟ್‌ಗಾಗಿ ಹೊಸ ಪ್ರಯೋಗ ಮಾಡಲು ಹೊರಟಿದೆ. ಆಡಳಿತ ಮಾಡುವಲ್ಲಿ ಮೂರು ಕಾಸು ಪ್ರಯೋಜನ ಇಲ್ಲದಿದ್ದರೂ ಜನರಿಗೆ ಮಂಕು ಬೂದಿ ಎರಚಿ ಹೊಸ ಪ್ರಯೋಗಗಳ ಮೂಲಕ ಜನರನ್ನ ಸುಲಿಗೆ ಮಾಡುವಲ್ಲಿ ಕಾಂಗ್ರೆಸ್ ಪಕ್ಷದವರು ಬಹಳ ನಿಸ್ಸೀಮರುʼ ಎಂದು ಆರ್.ಅಶೋಕ್ ಟೀಕಿಸಿದ್ದಾರೆ.












Click it and Unblock the Notifications