Government Employee: ಸರ್ಕಾರಿ ನೌಕರರ 2 ಪ್ರಮುಖ ಬೇಡಿಕೆ, ಮುಂದಿನ ವರ್ಷ ಈಡೇರಿಕೆ
ಬೆಂಗಳೂರು, ಡಿಸೆಂಬರ್ 12: ಕರ್ನಾಟಕ ಸರ್ಕಾರ 7ನೇ ವೇತನ ಆಯೋಗದ ವರದಿಯನ್ನು ಜಾರಿಗೊಳಿಸುವ ಮೂಲಕ 2024ರಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆಯನ್ನು ನೀಡಿದೆ. ರಾಜ್ಯ ಸರ್ಕಾರಿ ನೌಕರರು ಸರ್ಕಾರದ ಮುಂದೆ ಇನ್ನೂ ಎರಡು ಪ್ರಮುಖ ಬೇಡಿಕೆಯನ್ನು ಇಟ್ಟಿದ್ದಾರೆ. ಈಗ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ ನಡೆಯುತ್ತಿದ್ದು, ಮುಂದಿನ ವರ್ಷ ಉಳಿದ ಎರಡು ಬೇಡಿಕೆಗಳು ಈಡೇರುವ ನಿರೀಕ್ಷೆ ಇದೆ.
ಚಿತ್ರದುರ್ಗದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-29 ಅವಧಿಯ ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ, ಹಾಲಿ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ಹಾಗೂ ರಾಜ್ಯ ಖಜಾಂಚಿ ಸ್ಥಾನದ ಅಭ್ಯರ್ಥಿ ಕೊಪ್ಪಳ ಜಿಲ್ಲಾಧ್ಯಕ್ಷರಾದ ನಾಗರಾಜ್ ಜುಮ್ಮಣ್ಣನವರ ಸನ್ಮಾನಿಸಲಾಯಿತು.

ಬಳಿಕ ಮಾತನಾಡಿದ ಸಿ. ಎಸ್. ಷಡಾಕ್ಷರಿ ಅವರು, "ಎನ್‌ಪಿಎಸ್ ರದ್ದುಗೊಳಿಸುವುದು ಹಾಗೂ 2026ಕ್ಕೆ ಕೇಂದ್ರ ಸರಿಸಮಾನವಾದ ವೇತನ ಪಡೆಯುವುದು ನಮ್ಮ ಗುರಿಯಾಗಿದೆ" ಎಂದು ಹೇಳಿದರು. ಈ ಮೂಲಕ ರಾಜ್ಯ ಸರ್ಕಾರಿ ನೌಕರರ ಮುಂದಿನ ಬೇಡಿಕೆಗಳ ಕುರಿತು ಅವರು ಉಲ್ಲೇಖಿಸಿದರು.
ಯೋಜನೆಗಳ ಜಾರಿಗೆ ಪ್ರಯತ್ನ: 7ನೇ ವೇತನ ಆಯೋಗದ ವರದಿ ಜಾರಿಗೆ ಸರ್ಕಾರ ಅನುಮೋದನೆ ನೀಡಿದಾಗಲೇ ಸರ್ಕಾರಿ ನೌಕರರು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಜಾರಿ, ಹೊಸ ಪಿಂಚಣಿ ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆ ಮರು ಜಾರಿಗೊಳಿಸುವ ಬೇಡಿಕೆಯನ್ನು ಇಟ್ಟಿದ್ದರು. ಈ ಎರಡು ಬೇಡಿಕೆಗಳು ಇನ್ನೂ ಈಡೇರಿಲ್ಲ.
ಸಿ. ಎಸ್. ಷಡಾಕ್ಷರಿ ಮಾತನಾಡಿ, "ಆರೋಗ್ಯ ಸಂಜೀವಿನಿ ಯೋಜನೆ ಮುಂಬರುವ ಜನವರಿ ಅಥವ ಫೆಬ್ರವರಿಯಲ್ಲಿ ಜಾರಿಗೆ ಬರದಲಿದೆ. ನೌಕರರ ಒಳಿತಿಗಾಗಿ ಕಳೆದ ಅವಧಿಯ 25ಕ್ಕೂ ಹೆಚ್ಚು ಸರ್ಕಾರಿ ಆದೇಶಗಳನ್ನು ಮಾಡಿಸಿದ್ದೇವೆ. ಯೋಜನೆಗಳ ಜಾರಿಗೆ ಪ್ರಮಾಣಿಕ ಪ್ರಯತ್ನ ಮಾಡಲಾಗುತ್ತದೆ" ಎಂದು ಹೇಳಿದರು.
"ಜಿಲ್ಲಾ ಹಾಗೂ ತಾಲೂಕು ಶಾಖೆಗಳಿಗೆ ಕಟ್ಟಡ ನಿರ್ಮಿಸಲು ಅನುದಾನ ಒದಗಿಸಿದ್ದೇವೆ. ರಾಜ್ಯ ಸಂಘದ ಕಟ್ಟಡವನ್ನು 20 ಕೋಟಿ ಅನುದಾನದಲ್ಲಿ ನವೀಕರಣ ಮಾಡಲಾಗಿದೆ" ಎಂದು ಸಿ. ಎಸ್. ಷಡಾಕ್ಷರಿ ವಿವರಣೆ ನೀಡಿದರು.
ವೇತನ ಆಯೋಗದ ಶಿಫಾರಸು: ಸಿ. ಎಸ್. ಷಡಾಕ್ಷರಿ ಅವರು, "2026ಕ್ಕೆ ಕೇಂದ್ರ ಸರಿಸಮಾನವಾದ ವೇತನ ಪಡೆಯುವುದು ನಮ್ಮ ಗುರಿಯಾಗಿದೆ" ಎಂದು ಚಿತ್ರದುರ್ಗದಲ್ಲಿ ಹೇಳಿದ್ದಾರೆ. ಕರ್ನಾಟಕ ಸರ್ಕಾರ ರಚನೆ ಮಾಡಿದ್ದ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ತನ್ನ ವರದಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವೇತನ ರಚನೆ, ವೇತನ ಶ್ರೇಣಿ ಸಮಾನ ವೇತನ ಮುಂತಾದವುಗಳ ಕುರಿತು ಸರ್ಕಾರಕ್ಕೆ ಶಿಫಾರಸುಗಳನ್ನು ಮಾಡಿದೆ.
ವರದಿಯಲ್ಲಿ ಆಯೋಗ ಭಾರತ ಸರ್ಕಾರ ಮತ್ತು ಅಕ್ಕಪಕ್ಕದ ರಾಜ್ಯಗಳ ವೇತನ ಶ್ರೇಣಿಗಳನ್ನು ಪರಿಶೀಲಿಸಿ ರಾಜ್ಯದ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆಯ ಕುರಿತು ಶಿಫಾರಸುಗಳನ್ನು ಮಾಡಿದೆ. ಪ್ರಸ್ತುತ ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರದಲ್ಲಿ ಜಾರಿಯಲ್ಲಿರುವ ವೇತನ ರಚನೆ ಮತ್ತು ವೇತನ ಶ್ರೇಣಿಗಳು ಕಾಲಾಂತರದಲ್ಲಿ ವಿಭಿನ್ನ ರೀತಿಯಲ್ಲಿ ವಿಕಸನಗೊಂಡಿದ್ದು, ಈ ಪರಿಣಾಮವಾಗಿ ಅವುಗಳೆರಡರ ನಡುವೆ ಕೆಲ ಕಾಲದಿಂದ ಗಮನಾರ್ಹ ವ್ಯತ್ಯಾಸವಿರುತ್ತದೆ ಎಂದು ಸರ್ಕಾರಕ್ಕೆ ಸಲ್ಲಿಕೆ ಮಾಡಿರುವ ವರದಿಯಲ್ಲಿ 7ನೇ ರಾಜ್ಯ ವೇತನ ಆಯೋಗ ಹೇಳಿದೆ.
ವೇತನ ಆಯೋಗ ತನ್ನ ವರದಿಯಲ್ಲಿ ರಾಜ್ಯ ಸರ್ಕಾರ ರಚನೆ ಮಾಡಿದ ವೇತನ ಆಯೋಗಗಳು ಮತ್ತು ಸಮಿತಿಗಳು ಮಾಡುವ ಶಿಫಾರಸ್ಸುಗಳ ಆಧಾರದ ಮೇಲೆ ರಾಜ್ಯದ ಸರ್ಕಾರಿ ನೌಕರರಿಗೆ ತನ್ನದೇ ಆದ ವೇತನ ರಚನೆಯನ್ನು ಅನೇಕ ವರ್ಷಗಳಿಂದ ರೂಪಿಸಲಾಗುತ್ತಿದೆ. ಈ ಆಯೋಗಗಳು/ ಸಮಿತಿಗಳು ಸಾಮಾನ್ಯವಾಗಿ, ಪ್ರತಿ ಬಾರಿಯ ಪರಿಷ್ಕರಣೆಯಲ್ಲಿನ ಅಂಶಗಳಲ್ಲಿ ಸಲಹೆ ಮಾಡುವಾಗ, ಹಲವು ವರ್ಷಗಳಿಂದಲೂ ಒಂದೇ ಮಾದರಿಯ ಮೂಲ ವೇತನ ರಚನೆಯನ್ನೇ ಮುಂದುವರೆಸಲು ಶಿಫಾರಸಿ ಮಾಡಿವೆ ಎಂದು ವಿವರಣೆ ನೀಡಿದೆ.
ಸಾಮಾನ್ಯವಾಗಿ, ಹಿಂದಿನ ವೇತನ ಆಯೋಗ/ ಸಮಿತಿಗಳು ಕೇಂದ್ರ ಸರ್ಕಾರದ ವೇತನ ರಚನೆಯನ್ನು ಅಳವಡಿಸಿಕೊಳ್ಳುವ ಒಲವು ತೋರಿಸಿರುವುದಿಲ್ಲ ಅಥವಾ ಕಾರ್ಯ ಸಾಧ್ಯವೆಂದು ಪರಿಗಣಿಸಿರುವುದಿಲ್ಲ ಎಂದು ಶಿಫಾರಸಿನಲ್ಲಿ ತಿಳಿಸಿದೆ. ರಾಜ್ಯ ವೇತನ ಶ್ರೇಣಿಗಳನ್ನು ನಿಗದಿ ಮಾಡುವಾಗ ಕೇಂದ್ರದ ವೇತನ ಶ್ರೇಣಿಗಳನ್ನು ಸಹ ಪರಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ಆಯೋಗ ಹೇಳಿದೆ.












Click it and Unblock the Notifications