Government Employee: ಫೆ. 20ಕ್ಕೆ ಸರ್ಕಾರಿ ನೌಕರರ ಸಮಾವೇಶ, ಬೇಡಿಕೆಗಳು
ಬೆಂಗಳೂರು, ಫೆಬ್ರವರಿ 11: 7ನೇ ರಾಜ್ಯ ವೇತನ ಆಯೋಗದ ವರದಿ ಜಾರಿಯಾದರೂ ಸಹ ಕರ್ನಾಟಕದ ಸರ್ಕಾರಿ ನೌಕರರು ರಾಜ್ಯದ ಕಾಂಗ್ರೆಸ್ ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನು ಇಟ್ಟಿದ್ದಾರೆ. ಈಗ ಸರ್ಕಾರಿ ನೌಕರರ ಸಂಘ ಫೆಬ್ರವರಿ 20ರಂದು ಬೃಹತ್ ಸಮಾವೇಶವೊಂದನ್ನು ಆಯೋಜನೆ ಮಾಡಿದೆ. ಈ ಸಮಾವೇಶದಲ್ಲಿ ಎರಡು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಅವರು ಸರ್ಕಾರವನ್ನು ಒತ್ತಾಯಿಸಲಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ದಿನಾಂಕ 20-02-2025ರ ಗುರುವಾರ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಸರ್ಕಾರಿ ನೌಕರರ ಬೃಹತ್ ಸಮಾವೇಶವನ್ನು ಆಯೋಜನೆ ಮಾಡಿದೆ. ಕೆಲವು ದಿನಗಳ ಹಿಂದೆ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಗಳು ಪೂರ್ಣಗೊಂಡ ಹಿನ್ನಲೆಯಲ್ಲಿ ಈ ಸಮಾವೇಶ ಆಯೋಜನೆ ಮಾಡಲಾಗಿದೆ.

'ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರ ಹಾಗೂ ಎಲ್ಲಾ ಜಿಲ್ಲಾ-ತಾಲ್ಲೂಕು ಶಾಖೆಗಳ ನಿರ್ದೇಶಕರು-ಪದಾಧಿಕಾರಿಗಳ ಸಮಾವೇಶ' ಇದಾಗಿದೆ. ಈ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಪಾಲ್ಗೊಳ್ಳಲಿದ್ದಾರೆ.
ಸರ್ಕಾರದ ಮುಂದೆ ಬೇಡಿಕೆಗಳು: ಈ ಸಮಾವೇಶದಲ್ಲಿ ಜಿಲ್ಲಾಧ್ಯಕ್ಷರು, ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರು, ತಾಲ್ಲೂಕು-ಯೋಜನಾ ಶಾಖೆಗಳ ಅಧ್ಯಕ್ಷರು, ಜಿಲ್ಲೆಯ ಕಾರ್ಯದರ್ಶಿ, ಖಜಾಂಚಿ, ರಾಜ್ಯ ಪರಿಷತ್ ಸದಸ್ಯರು, ಜಿಲ್ಲಾ-ತಾಲೂಕು-ಯೋಜನಾ ಶಾಖೆಯ ಎಲ್ಲಾ ಪದಾಧಿಕಾರಿಗಳು ಮತ್ತು ನಿರ್ದೇಶಕರು ಪಾಲ್ಗೊಳ್ಳಲಿದ್ದಾರೆ.
ನೌಕರರ ನೆಮ್ಮದಿಯ ಬದುಕಿಗಾಗಿ ನಮ್ಮ ಬೇಡಿಕೆಗಳು ಈಡೇರಬೇಕು ಎಂದು ಸರ್ಕಾರದ ಮುಂದೆ ಹಳೆ ಪಿಂಚಣಿ ಯೋಜನೆ ಮರು ಜಾರಿ, ಆರೋಗ್ಯ ಸಂಜೀವಿನಿ ಯೋಜನೆ ಲೋಕಾರ್ಪಣೆಯ ಹಕ್ಕೊತ್ತಾಯವನ್ನು ಮಂಡಿಸಲಾಗುತ್ತದೆ ಎಂದು ಸರ್ಕಾರಿ ನೌಕರರ ಸಂಘ ಹೇಳಿದೆ.
ಈ ಸಮಾವೇಶದಲ್ಲಿ ಎಲ್ಲಾ ಸರ್ಕಾರಿ ನೌಕರರು ಪಾಲ್ಗೊಳ್ಳಲು ಸಹಾಯಕವಾಗುವಂತೆ ವಿವಿಧ ಜಿಲ್ಲೆಗಳಿಂದ ಬಸ್ ವ್ಯವಸ್ಥೆ ಮಾಡಲಾಗಿದೆ. ಓಡಿಡಿ ಸೌಲಭ್ಯವನ್ನು ಸಹ ನೀಡಲಾಗುತ್ತದೆ ಎಂದು ನೌಕರರಿಗೆ ಮಾಹಿತಿ ನೀಡಲಾಗಿದೆ.
ಆರೋಗ್ಯ ಸಂಜೀವಿನಿ ಯೋಜನೆ: ಕರ್ನಾಟಕದ ಸರ್ಕಾರಿ ನೌಕರರಿಗೆ ಅನುಕೂಲವಾಗಲು ಸರ್ಕಾರ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ರೂಪಿಸಿದೆ. ಸರ್ಕಾರಿ ನೌಕರರು ಮತ್ತು ಅವಲಂಬಿತ ಕುಟುಂಬ ಸದಸ್ಯರಿಗೆ ಇದು ಸರ್ಕಾರದ ಆರೋಗ್ಯ ಯೋಜನೆಯಾಗಿದೆ. ಈ ಯೋಜನೆಯು ನಗದುರಹಿತ, ತಡೆರಹಿತ, ಸಮಗ್ರ ಆರೋಗ್ಯ ರಕ್ಷಣಾ ಯೋಜನೆಯಾಗಿದ್ದು, ಇದು ಅಲೋಪತಿ ಮತ್ತು ಆಯುಷ್ ವೈದ್ಯಕೀಯ ವ್ಯವಸ್ಥೆಗಳೆರಡನ್ನೂ ಒಳಗೊಳ್ಳುತ್ತದೆ. ಈ ಯೋಜನೆ ಇನ್ನೂ ಸಹ ಲೋಕಾರ್ಪಣೆಗೊಂಡಿಲ್ಲ.
ಹೊಸ ಪಿಂಚಣಿ ಯೋಜನೆ ರದ್ದು: ಕರ್ನಾಟಕ ಸರ್ಕಾರ ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ (ಒಪಿಎಸ್) ಮರು ಜಾರಿಗೊಳಿಸಬೇಕು ಎಂಬುದು ಸರ್ಕಾರಿ ನೌಕರರ ಪ್ರಮುಖ ಬೇಡಿಕೆಯಾಗಿದೆ. ಈಗಾಗಲೇ ಸರ್ಕಾರ ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿ ಮಾಡುವ ಸಾಧ್ಯತೆಗಳ ಕುರಿತು ಪರಿಶೀಲಿಸಿ ವರದಿ ನೀಡಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚನೆ ಮಾಡಿದೆ. ಆದರೆ ಈ ಸಮಿತಿಗೆ ಕಾಲಮಿತಿ ನಿಗದಿ ಮಾಡಿಲ್ಲ.
ದಿನಾಂಕ 16/8/2024ರಲ್ಲಿ ಈ ಸಮಿತಿಯನ್ನು ಪುನರ್ ರಚಿಸಿ ಆದೇಶಿಸಲಾಗಿದೆ. ಸಮಿತಿ ಇನ್ನೂ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿಲ್ಲ. ವರದಿಯನ್ನು ಪಡೆದು ಒಪಿಎಸ್ ಮರು ಜಾರಿಗೊಳಿಸಬೇಕು ಎಂಬುದು ನೌಕರರ ಬೇಡಿಕೆಯಾಗಿದೆ.












Click it and Unblock the Notifications