ಬಿಜೆಪಿ ಸರ್ಕಾರ ರಚಿಸಿದ್ದ ಗೋ ಸೇವಾ ಆಯೋಗ ವಿಸರ್ಜನೆ
ಬೆಂಗಳೂರು, ಅಕ್ಟೋಬರ್ 08 : 2012ರಲ್ಲಿ ರಚಿಸಲಾಗಿದ್ದ ಗೋ ಸೇವಾ ಆಯೋಗವನ್ನು ವಿಸರ್ಜಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಪಶು ಸಂಗೋಪನಾ ಇಲಾಖೆಯಡಿಯೇ ಬರುವ ಪಶು ಕ್ಷೇಮಾಭಿವೃದ್ಧಿ ಮಂಡಳಿಗೆ ಇದರ ಎಲ್ಲ ಅಧಿಕಾರಗಳನ್ನು ವರ್ಗಾವಣೆ ಮಾಡಲಾಗುತ್ತದೆ.
ಬುಧವಾರ ಸಚಿವ ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕಾನೂನು ಮತ್ತು ಪಶುಸಂಗೋಪನಾ ಸಚಿವ ಟಿ.ಬಿ.ಜಯಚಂದ್ರ ಅವರು, ಗೋಸೇವಾ ಆಯೋಗದಲ್ಲಿನ ಅಧಿಕಾರ, ಕರ್ತವ್ಯ, ಕಾರ್ಯಚಟುವಟಿಕೆ ಹಾಗೂ ಜವಾಬ್ದಾರಿಯನ್ನು ಪಶು ಕ್ಷೇಮಾಭಿವೃದ್ಧಿ ಮಂಡಳಿಗೆ ಹಸ್ತಾಂತರಿಸಲಾಗುತ್ತದೆ ಎಂದರು. [ಗೋ ಹತ್ಯೆ ನಿಷೇಧ ಎಲ್ಲೆಡೆ ಜಾರಿಗೊಳ್ಳಲಿ]

ಗೋಸೇವಾ ಆಯೋಗದ ಸದಸ್ಯರ ವಜಾ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಸರ್ಕಾರಿ ಸ್ವಾಮ್ಯದ ಸಂಸ್ಥೆಗೆ ಸದಸ್ಯರನ್ನು ನೇಮಕ ಮಾಡುವುದು ಹಾಗೂ ವಜಾಗೊಳಿಸುವುದು ಸರ್ಕಾರದ ಇಚ್ಛೆಗೆ ಒಳಪಟ್ಟಿರುತ್ತದೆ ಎಂದು ಹೇಳಿ ಅರ್ಜಿ ವಜಾಗೊಳಿಸಿದೆ. ಈ ಹಿನ್ನೆಲೆಯಲ್ಲಿ ಆಯೋಗ ವಜಾಗೊಳಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
ಆಯೋಗ ಅಗತ್ಯವಿರಲಿಲ್ಲ : 'ಗೋ ಸೇವಾ ಆಯೋಗ ರಚನೆ ಸಂದರ್ಭದಲ್ಲೇ ಇದರ ಅಗತ್ಯವಿಲ್ಲ ಎಂದು ಕಾನೂನು ಇಲಾಖೆ ಹೇಳಿತ್ತು. ಆಗ ಪಶು ಸಂಗೋಪನಾ ಸಚಿವರಾಗಿದ್ದವರು ಕೂಡ ಅಗತ್ಯವಿಲ್ಲ ಎಂದೇ ಹೇಳಿದ್ದರು. ಆದರೂ ಆಯೋಗ ರಚಿಸಿ ಕೆಲವೊಂದು ಅಧಿಕಾರ ನೀಡಲಾಗಿತ್ತು' ಎಂದು ಜಯಚಂದ್ರ ಹೇಳಿದರು. [ಕರ್ನಾಟಕ: ಗೋಹತ್ಯೆ ನಿಷೇಧ ವಿಧೇಯಕದಲ್ಲಿ ಏನಿದೆ]
2012ರಲ್ಲಿ ಅಂದರೆ ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದ್ದಾಗ ಗೋ ಸೇವಾ ಆಯೋಗ ರಚನೆ ಮಾಡಲಾಗಿತ್ತು. ಸದ್ಯ ರಾಜ್ಯ ಸರ್ಕಾರ ಅದನ್ನು ವಿಸರ್ಜನೆ ಮಾಡಲು ತೀರ್ಮಾನ ಕೈಗೊಂಡಿದೆ.












Click it and Unblock the Notifications