ʼಅನ್ನಭಾಗ್ಯʼದಡಿ ನಿಮಗೂ ಪ್ಲಾಸ್ಟಿಕ್ ಅಕ್ಕಿ ಸಿಕ್ಕಿತ್ತಾ? ಈ ಬಗ್ಗೆ ಸರ್ಕಾರ ಹೇಳಿದ್ದಿಷ್ಟು
ಬೆಂಗಳೂರು, ಆಗಸ್ಟ್ 27: ರಾಜ್ಯ ಕಾಂಗ್ರೆಸ್ಸರ್ಕಾರವು ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿತ್ತು. ಈ ಪೈಕಿ ಬಿಪಿಎಲ್ ಕಾರ್ಡ್‌ದಾರರಿಗೆ ಪ್ರತಿ ವ್ಯಕ್ತಿಗೆ ಹತ್ತು ಕೆ.ಜಿ. ಅಕ್ಕಿ ಉಚಿತವಾಗಿ ವಿತರಿಸುವ ಅನ್ನಭಾಗ್ಯ ಯೋಜನೆಯೂ ಒಂದು. ಆದರೆ, ಇತ್ತೀಚೆಗೆ ಅನ್ನಭಾಗ್ಯ ಯೋಜನೆಯಡಿ ವಿತರಿಸಲಾಗುತ್ತಿರುವ ಅಕ್ಕಿ ಬಗ್ಗೆ ಕೆಲವರು ಆತಂಕ ವ್ಯಕ್ತಪಡಿಸಿದ್ದರು. ಅದೇನಂದ್ರೆ, ರೇಷನ್ ಅಂಗಡಿಗಳಲ್ಲಿ ವಿತರಿಸಲಾಗುತ್ತಿರುವ ಅಕ್ಕಿಯು ಸಾಮಾನ್ಯ ಅಕ್ಕಿಯಂತೆ ನೀರಿನಲ್ಲಿ ಮುಳುಗದೆ, ತೇಲುತ್ತಿದೆ. ಇದು ಪ್ಲಾಸ್ಟಿಕ್ ಅಕ್ಕಿ ಇರಬಹುದು ಎಂಬ ಗೊಂದಲ ಉಂಟಾಗಿರುವ ಬಗ್ಗೆ ವರದಿಯಾಗಿತ್ತು.
ಈ ಬಗ್ಗೆ ಸ್ಪಷ್ಟನೆ ನೀಡಿರುವ ರಾಜ್ಯ ಸರ್ಕಾರ, ಅನ್ನಭಾಗ್ಯದ ಪಡಿತರ ಅಕ್ಕಿಯಲ್ಲಿ ಸ್ವಲ್ಪ ಪ್ರಮಾಣದ ಅಕ್ಕಿ ನೀರಿನಲ್ಲಿ ಮುಳುಗದೆ ನೀರಿನಲ್ಲಿ ತೇಲುತ್ತಿರುವುದನ್ನು ಕಂಡು ಅದು ಪ್ಲಾಸ್ಟಿಕ್ ಅಕ್ಕಿ ಎಂದು ಜನ ಗೊಂದಲಕ್ಕೆ ಈಡಾಗಿರುವುದು ವರದಿಯಾಗಿದೆ. ಆದರೆ ಇದು ಆತಂಕ ಪಡುವ ಸಂಗತಿಯಲ್ಲ ಎಂದು ಹೇಳಿದೆ.

ʼನಿಮ್ಮ ಮನೆಗೆ ತಂದ ಅನ್ನಭಾಗ್ಯದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿಯಂತಹ ಕಾಳುಗಳು ಇದ್ದಲ್ಲಿ ಆತಂಕ ಪಡದಿರಿ ಮತ್ತು ಅದನ್ನು ಎಸೆಯದಿರಿ. ಏಕೆಂದರೆ ಅದು ಪ್ಲಾಸ್ಟಿಕ್ ಅಕ್ಕಿಯಲ್ಲ, ನಿಮ್ಮ ಆರೋಗ್ಯವನ್ನು ಉತ್ತಮವಾಗಿಸುವ ಪೌಷ್ಠಿಕಾಂಶವುಳ್ಳ ಸಾರವರ್ಧಿತ ಅಕ್ಕಿʼ ಎಂದು ಗೊಂದಲಗಳಿಗೆ ತೆರೆ ಎಳೆದಿದೆ.
ಅಕ್ಕಿ ನೀರಿನಲ್ಲಿ ತೇಲುತ್ತಿರುವುದು ಯಾಕೆ?: ಸಾಮಾನ್ಯ ಅಕ್ಕಿ ನೀರಿನಲ್ಲಿ ನೆನೆದು ಮುಳಗುತ್ತದೆ. ಆದರೆ, ರೇಷನ್‌ನಲ್ಲಿ ವಿತರಿಸುವ ಅಕ್ಕಿಯು ನೀರಿನಲ್ಲಿ ತೇಲುತ್ತದೆ. ಇದು ಯಾಕಿರಬಹುದು ಎಂದು ಹಲವರು ತಲೆಕೆಡಿಸಿಕೊಂಡಿರಬಹುದು. ಇದಕ್ಕೆ ಕಾರಣ ಬಿಚ್ಚಿಟ್ಟಿರುವ ರಾಜ್ಯ ಸರ್ಕಾರವು, ʼಕೇಂದ್ರ ಸರ್ಕಾರದ ಸಚಿವಾಲಯದ ಮಾರ್ಗಸೂಚಿಯಂತೆ ಪ್ರತಿ 1 ಕೆ.ಜಿ. ಅಕ್ಕಿಗೆ 10 ಗ್ರಾಂ. ನಷ್ಟು ಸಾರವರ್ಧಿತ ಅಕ್ಕಿಯನ್ನು ಬೆರೆಸಲಾಗುತ್ತದೆ. ಇದು ವ್ಯಕ್ತಿಯ ಆರೋಗ್ಯಕ್ಕೆ ಅಗತ್ಯವಾದ ಜೀವಸತ್ವಗಳು, ಸೂಕ್ಷ್ಮ ಪೋಷಕಾಂಶಗಳಾದ ಕಬ್ಬಿಣಾಂಶ, ಫೋಲಿಕ್ ಆಮ್ಲ ಮತ್ತು ವಿಟಮಿನ್ ಬಿ ಯನ್ನು ಒದಗಿಸುತ್ತದೆ ಎಂದು ಹೇಳಿದೆ.

ಈ ಸಾರವರ್ಧಿತ ಅಕ್ಕಿಯು ನಿಮ್ಮ ಆರೋಗ್ಯವನ್ನು ಉತ್ತಮಗೊಳಿಸುತ್ತದೆ ಮತ್ತು ರಕ್ತಹೀನತೆ, ಅಪೌಷ್ಟಿಕತೆಯನ್ನು ಹೋಗಲಾಡಿಸುತ್ತದೆ. ಪ್ರಯೋಗಾಲಯದಿಂದ ಪರೀಕ್ಷೆಗೆ ಒಳಪಟ್ಟ ಸಾರವರ್ಧಿತ ಅಕ್ಕಿಯನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಬಳಕೆಗೆ ಯೋಗ್ಯವಾದ ಪೌಷ್ಠಿಕಾಂಶಭರಿತವಾದ ಅಕ್ಕಿ ಎಂದು ಪರಿಗಣಿಸಲಾಗಿರುತ್ತದೆ. ಹಾಗಾಗಿ ಈ ಸಾರವರ್ಧಿತ ಅಕ್ಕಿಯನ್ನು ಅನ್ನಭಾಗ್ಯ ಯೋಜನೆಯಡಿ ವಿತರಿಸಲಾಗುತ್ತಿದೆ. ಈ ಬಗ್ಗೆ ಗೊಂದಲಗಳು ಬೇಡ ಎಂದು ಹೇಳಿದೆ. ನಿಮಗೂ ಈ ರೀತಿ ಅಕ್ಕಿ ತೇಲುವ ಅನುಭವವಾಗಿದ್ದರೆ, ಗಾಬರಿಯಾಗದಿರಿ..
ಅನ್ನಭಾಗ್ಯ ಯೋಜನೆಯಡಿ ಸದ್ಯ ನೀಡಲಾಗುತ್ತಿರುವ 5 ಕೆ.ಜಿ. ಅಕ್ಕಿಯ ಜೊತೆಗೆ ಬಾಕಿ ಐದು ಕೆಜಿ ಅಕ್ಕಿಗೆ ಬದಲಾಗಿ ಪ್ರತೀ ಕೆ.ಜಿ.ಗೆ 34 ರೂಪಾಯಿಗಳಂತೆ 170 ರೂಪಾಯಿಗಳನ್ನು ಬಿಪಿಎಲ್ ಕುಟುಂಬದ ಪ್ರತೀ ಸದಸ್ಯರಿಗೆ ರಾಜ್ಯ ಸರ್ಕಾರ ನೀಡುತ್ತಿದೆ. ಹಣವನ್ನು ಬಿಪಿಎಲ್ ಕಾರ್ಡಿನಲ್ಲಿ ಮನೆಯ ಮುಖ್ಯಸ್ಥ ಎಂದು ನಮೂದಿಸಿದವರ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತಿದೆ. ಅಲ್ಲದೆ ಈ ಗ್ಯಾರಂಟಿ ಯೋಜನೆಗಳನ್ನು ಯಾವ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ಹೇಳಿದ್ದಾರೆ.












Click it and Unblock the Notifications