Karnataka free shelter scheme: ರಾಜ್ಯ ಸರ್ಕಾರದಿಂದ ಉಚಿತ ಆಶ್ರಯ ಯೋಜನೆ- ಯಾರಿಗೆ ಸಿಗಲಿವೆ ಮನೆ? ವರದಿ, ವಿವರ
ಬೆಂಗಳೂರು, ಆಗಸ್ಟ್ 19: ಐದು ಉಚಿತ ಗ್ಯಾರಂಟಿಗಳ ಹೊರೆಯ ನಡುವೆಯೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹೊಸ ಉಚಿತ ಯೋಜನೆಯೊಂದಕ್ಕೆ ಸಿದ್ದವಾಗಿದೆ. ರಾಜ್ಯದಲ್ಲಿ ಉಚಿತ ಆಶ್ರಯ ಯೋಜನೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಮಾಹಿತಿ ನೀಡಿದ್ದಾರೆ.
ಈ ವಿಚಾರವಾಗಿ ಶುಕ್ರವಾರ ಮಾತನಾಡಿರುವ ಜಮೀರ್ ಅಹ್ಮದ್ ಖಾನ್, 'ಬಡವರಿಗೆ ಉಚಿತ ಆಶ್ರಯ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸುತ್ತಿದೆ' ಎಂದು ಹೇಳಿದ್ದಾರೆ.

ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಆಡಳಿತ ಮಂಡಳಿ ಸಭೆಯಲ್ಲಿ ಜಮೀರ್ ಖಾನ್ ಅವರು ಈ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಫಲಾನುಭವಿಗಳಿಂದ ಹಣವನ್ನು ತೆಗೆದುಕೊಳ್ಳದೆ ಸರಕಾರವೇ ಸಂಪೂರ್ಣ ಹಣ ಪಾವತಿಸಿ ಮನೆಗಳನ್ನು ನೀಡಿದರೆ ಬಡವರಿಗೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ. ಈ ಪ್ರಸ್ತಾವನೆ ಸಿದ್ಧಪಡಿಸಿ ಮುಖ್ಯಮಂತ್ರಿಗಳಿಗೆ ಕಳುಹಿಸುತ್ತೇವೆ ಅವರು ತಿಳಿಸಿದ್ದಾರೆ.
ಫಲಾನುಭವಿಗಳಿಂದ ದುಡ್ಡು ಪಡೆಯದೇ ವಸತಿ ಯೋಜನೆಗಳ ಅನುಷ್ಠಾನ ಕಷ್ಟವಾಗುತ್ತಿದೆ. ಹಾಗಾಗಿ ವರ್ಷಕ್ಕೆ ಮೂರು ಲಕ್ಷ ಮನೆಗಳನ್ನು ನಿರ್ಮಿಸುವ ಬದಲು ಈ ಸಂಖ್ಯೆಯನ್ನು 1.5 ಲಕ್ಷಕ್ಕೆ ಇಳಿಸಿದರೆ ಅನುಕೂಲವಾಗುತ್ತದೆ. ಈ ಬಗ್ಗೆ ಸರಕಾರ ಚಿಂತನೆ ನಡೆಸುವಂತೆ ಒತ್ತಾಯಿಸಲಾಗುವುದು ಎಂದು ಜಮೀರ್ ಹೇಳಿದ್ದಾರೆ.
ಸ್ಲಂಗಳಲ್ಲಿ ವಾಸಿಸುತ್ತಿರುವ ಬಡವರಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು ಸ್ಲಂ ನಿವಾಸಿಗಳ ಸಂಘಟನೆಗಳು ಸಚಿವರನ್ನು ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಮನವಿ ಸಲ್ಲಿಸಿದರು. ಸ್ಲಂ ಅಭಿವೃದ್ಧಿಗೆ ರಾಜ್ಯ ಸರಕಾರ 1000 ಕೋಟಿ ಮೀಸಲಿಡಬೇಕು ಎಂದು ಒತ್ತಾಯಿಸಿದರು. ಕೊಳೆಗೇರಿಗಳ ಕುರಿತು ವರದಿ ಸಲ್ಲಿಸುವಂತೆ ಜಮೀರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರವು ಈಗಾಗಲೇ ಐದು ಯೋಜನೆಗಳು ಘೋಷಿಸಿದೆ. ಐದು ಯೋಜನೆಗಳಲ್ಲಿ ಮೂರು ಯೋಜನೆಗಳು ಜಾರಿಯಾಗಿವೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಒದಗಿಸುವ 'ಶಕ್ತಿ' ಯೋಜನೆ ಈಗಾಗಲೇ ಅಭೂತಪೂರ್ವ ಯಶಸ್ಸು ಕಂಡಿದೆ.
200 ಯೂನಿಟ್‌ವರೆಗೂ ಉಚಿತ ವಿದ್ಯುತ್ ಒದಗಿಸುವ 'ಗೃಹ ಜ್ಯೋತಿ' ಯೋಜನೆಯನ್ನು ಕಳೆದ ತಿಂಗಳು ಜಾರಿ ಮಾಡಲಾಗಿದೆ. ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತ ಅಕ್ಕಿ ಒದಗಿಸುವ ಅನ್ನಭಾಗ್ಯ ಯೋಜನೆಯನ್ನು ಜೂನ್‌ನಲ್ಲಿ ಜಾರಿಗೊಳಿಸಲಾಗಿದೆ.
ಮಹಿಳೆಯರಿಗೆ ಪ್ರತಿ ತಿಂಗಳು 2000 ರೂಪಾಯಿ ನೀಡುವ ಗೃಹಲಕ್ಷ್ಮಿ ಯೋಜನೆಗೆ ಮುಂದಿನ ತಿಂಗಳು ಚಾಲನೆ ನೀಡಲಾಗುವುದು. ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 3000 ರೂಪಾಯಿ ಒದಗಿಸುವ ಯುವನಿಧಿ ಯೋಜನೆಯನ್ನು ಎರಡು ತಿಂಗಳ ನಂತರ ಜಾರಿ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ.












Click it and Unblock the Notifications