ರಾಜ್ಯ ಸರ್ಕಾರದಿಂದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೊಸ ಯೋಜನೆ
Free Bus Pass: ರಾಜ್ಯದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಬಹುದಿನಗಳ ನಿರೀಕ್ಷೆಯಾಗಿದ್ದ ಉಚಿತ ಬಸ್ ಪಾಸ್ ಸೌಲಭ್ಯಕ್ಕೆ ಸಾರಿಗೆ ಇಲಾಖೆಯು ಅಧಿಕೃತವಾಗಿ ಅನುಮೋದನೆ ನೀಡಿ ಆದೇಶ ಹೊರಡಿಸಿದೆ. ಹಾಗಾದ್ರೆ ಈ ಯೋಜನೆಗೆ ವಾರ್ಷಿಕವಾಗಿ ತಗಲುವ ವೆಚ್ಚ ಹಾಗೂ ಪ್ರಯೋಜನಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಸಿಎಂ ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಘೋಷಿಸಿರುವ ಉಚಿತ ಬಸ್ ಪಾಸ್ ಯೋಜನೆಯಿಂದ ವಾರ್ಷಿಕವಾಗಿ ಸುಮಾರು ₹1,700 ಕೋಟಿ ವೆಚ್ಚ ಆಗಲಿದೆ ಎಂದು ಅಂದಾಜಿಸಲಾಗಿದೆ. ಈ ಮಹತ್ವದ ನಿರ್ಧಾರದಿಂದ ರಾಜ್ಯದ 10 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ತಿಳಿದುಬಂದಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ (KSRTC) ಸಂಸ್ಥೆ ವ್ಯಾಪ್ತಿಯಲ್ಲಿ 3 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಈ ಯೋಜನೆಯ ಲಾಭ ಪಡೆಯಲಿದ್ದಾರೆ. ಇದರೊಂದಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC) ವ್ಯಾಪ್ತಿಗಳಿಂದ ತಲಾ 2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಇದರ ಅನುಕೂಲ ಆಗಲಿದೆ.
ಯಾವ ಸಾರಿಗೆ ಸಂಸ್ಥೆಯಿಂದ ಎಷ್ಟು ವಿದ್ಯಾರ್ಥಿಗಳಿಗೆ ಲಾಭ?
* ಕೆಎಸ್ಆರ್ಟಿಸಿ: 3 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು
* ಬಿಎಂಟಿಸಿ: 2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು
* ವಾಯುವ್ಯ ಕರ್ನಾಟಕ ಸಾರಿಗೆ: 2 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು
* ಕಲ್ಯಾಣ ಕರ್ನಾಟಕ ಸಾರಿಗೆ (KKRTC): 2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು.
ವಿದ್ಯಾರ್ಥಿಗಳಿಗೂ ಉಚಿತ ಪ್ರಯಾಣದ ವ್ಯವಸ್ಥೆ
ರಾಜ್ಯದಲ್ಲಿ ಈಗಾಗಲೇ ಶಕ್ತಿ ಯೋಜನೆಯಡಿ ಎಲ್ಲಾ ಮಹಿಳೆಯರಿಗೆ ಸಾರಿಗೆ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ವಿದ್ಯಾರ್ಥಿನಿಯರು ಉಚಿತವಾಗಿ ಪ್ರಯಾಣಿಸುತ್ತಿದ್ದು, ಈಗ ವಿದ್ಯಾರ್ಥಿಗಳಿಗೂ ಈ ಸೌಲಭ್ಯ ವಿಸ್ತರಣೆ ಆಗುತ್ತಿರುವುದರಿಂದ ಒಟ್ಟು ಫಲಾನುಭವಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಲಿದೆ.
ಇಲ್ಲಿಯವರೆಗೆ ವಿದ್ಯಾರ್ಥಿ ಬಸ್ ಪಾಸ್ಗಳಿಗೆ ಸಬ್ಸಿಡಿ ವ್ಯವಸ್ಥೆ ಇತ್ತು. ಪಾಸ್ ದರದ ಒಟ್ಟು ಮೊತ್ತದಲ್ಲಿ ಸರ್ಕಾರ 50% ಭರಿಸುತ್ತಿತ್ತು. ಸಾರಿಗೆ ಸಂಸ್ಥೆಗಳು 25% ರಿಯಾಯಿತಿ ನೀಡುತ್ತಿದ್ದವು. ವಿದ್ಯಾರ್ಥಿಗಳು ಕೇವಲ 25% ಹಣವನ್ನು ಮಾತ್ರ ಪಾವತಿಸುತ್ತಿದ್ದರು. ವಿಶೇಷ ಅಂದ್ರೆ 2012-13ರ ನಂತರ ವಿದ್ಯಾರ್ಥಿ ಬಸ್ ಪಾಸ್ ದರಗಳನ್ನು ಪರಿಷ್ಕರಣೆ ಮಾಡಲಾಗಿರಲಿಲ್ಲ. ಆದರೆ ಇದೇ ಅವಧಿಯಲ್ಲಿ ಸಾಮಾನ್ಯ ಬಸ್ ಪ್ರಯಾಣ ದರಗಳು ಶೇಕಡ 30ರಿಂದ 40ರಷ್ಟು ಹೆಚ್ಚಾಗಿದ್ದವು.
ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್
ಇದರಿಂದಾಗಿ ವಿದ್ಯಾರ್ಥಿಗಳು ವಾಸ್ತವ ವೆಚ್ಚದ ಕೇವಲ ಶೇಕಡ 7ರಷ್ಟು ಮಾತ್ರ ಹಣ ಪಾವತಿಸುತ್ತಿದ್ದರು. ಇದರಿಂದ ವಾರ್ಷಿಕವಾಗಿ ₹70 ಕೋಟಿ ಸಂಗ್ರಹವಾಗುತ್ತಿತ್ತು. ಇನ್ಮುಂದೆ ಎಲ್ಲಾ ವಿದ್ಯಾರ್ಥಿಗಳಿಗೂ ಪಾಸ್ ಉಚಿತವಾಗಿ ನೀಡಲು ನಿರ್ಧರಿಸಿರುವುದರಿಂದ ಈ ಮೊತ್ತವನ್ನೂ ಸರ್ಕಾರವೇ ಸಾರಿಗೆ ಸಂಸ್ಥೆಗಳಿಗೆ ಪಾವತಿ ಮಾಡಬೇಕಾಗುತ್ತದೆ. ವಿದ್ಯಾರ್ಥಿ ಬಸ್ ಪಾಸ್ ದರಗಳು ಪ್ರಸ್ತುತ 300ರಿಂದ 1,200 ರೂಪಾಯಿಗಳವರೆಗೂ ಇವೆ.
ಸಾರಿಗೆ ಸಂಸ್ಥೆಗಳ ಮೇಲೆ ಆರ್ಥಿಕ ಹೊರೆ
ಒಟ್ಟು ಸಬ್ಸಿಡಿ ವೆಚ್ಚ ಮತ್ತು ಸಾರಿಗೆ ಸಂಸ್ಥೆಗಳು ಭರಿಸುತ್ತಿದ್ದ ನಷ್ಟವನ್ನು ಲೆಕ್ಕ ಹಾಕಿದರೆ, ಈ ಯೋಜನೆಗೆ ವಾರ್ಷಿಕ ಒಟ್ಟು ವೆಚ್ಚ ₹1,700 ಕೋಟಿ ರೂಪಾಯಿ ವೆಚ್ಚ ಆಗಲಿದೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಕಾ ಎಂ.ಅವರು ಮಾತನಾಡಿ, 'ಕಳೆದ ವರ್ಷ ನಮ್ಮ ಸಂಸ್ಥೆಯಿಂದ 1.8 ಲಕ್ಷ ವಿದ್ಯಾರ್ಥಿಗಳಿಗೆ ಪಾಸ್ ನೀಡಲಾಗಿತ್ತು. ಹೊಸ ಯೋಜನೆಯಿಂದ ಈ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ. ಸಾರಿಗೆ ಸಂಸ್ಥೆಗಳ ಮೇಲಿನ ಆರ್ಥಿಕ ಹೊರೆಯನ್ನು ತಗ್ಗಿಸಲು ನಮ್ಮ ಪಾಲಿನ ಸಬ್ಸಿಡಿಯನ್ನೂ ಸರ್ಕಾರವೇ ಭರಿಸುವಂತೆ ವಿನಂತಿ ಮಾಡಿಕೊಳ್ಳಲಾಗುವುದು,' ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ ಕಲ್ಪಿಸುವುದರಿಂದ ಗ್ರಾಮೀಣ ಭಾಗಗಳಲ್ಲಿ ಬಸ್ಸುಗಳ ದಟ್ಟಣೆ ಹೆಚ್ಚಿ ಇದರಿಂದ ಸೇವೆಗೆ ತೊಂದರೆಯಾಗಲಿದೆಯೇ ಎಂಬ ಪ್ರಶ್ನೆಗೆ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್ ಪಾಶಾ ಅವರು ಉತ್ತರಿಸಿದ್ದಾರೆ. 'ಶಕ್ತಿ ಯೋಜನೆ ಜಾರಿಯಾದ ನಂತರ ನಾವು ಈಗಾಗಲೇ ಬಸ್ ಸೇವೆಗಳನ್ನು ಹೆಚ್ಚಿಸಿದ್ದೇವೆ. ನಮ್ಮ ಒಟ್ಟು ಸೇವೆಗಳ ಪೈಕಿ ಶೇಕಡ 40ರಷ್ಟು ಗ್ರಾಮೀಣ ಭಾಗ ಮತ್ತು ವಿದ್ಯಾರ್ಥಿಗಳಿಗೆ ಮೀಸಲಾಗಿದೆ. ಸದ್ಯ ರಾಜ್ಯದ ಶೇಕಡ 92ರಷ್ಟು ಹಳ್ಳಿಗಳಿಗೆ ಬಸ್ ಸಂಪರ್ಕ ಕಲ್ಪಿಸಲಾಗಿದೆ. ಸರಿಯಾದ ರಸ್ತೆ ಸಂಪರ್ಕ ಇಲ್ಲದ ಹಳ್ಳಿಗಳಿಗೆ ಮಾತ್ರ ಸದ್ಯಕ್ಕೆ ಬಸ್ ಕಾರ್ಯಾಚರಣೆ ಮಾಡಲು ಸಾಧ್ಯವಾಗುತ್ತಿಲ್ಲ,' ಎಂದು ಸ್ಪಷ್ಟಪಡಿಸಿದ್ದಾರೆ.
ಅರ್ಜಿ ಸಲ್ಲಿಸುವ ವಿಧಾನಗಳು
* ವಿದ್ಯಾರ್ಥಿಗಳು 'ಸೇವಾ ಸಿಂಧು' ಆನ್ಲೈನ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು.
* ಬೆಂಗಳೂರು ಒನ್, ಕರ್ನಾಟಕ ಒನ್ ಅಥವಾ ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡಿ 30 ರೂಪಾಯಿ ಸೇವಾ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬಹುದಾಗಿದೆ.
* ಈಗಾಗಲೇ ಜೂನ್ 1ರಿಂದ ಅರ್ಜಿ ಸಲ್ಲಿಸಿ ಹಣ ಪಾವತಿಸಿರುವ ವಿದ್ಯಾರ್ಥಿಗಳಿಗೆ ಯಾವುದೇ ಹಣ ಮರುಪಾವತಿ ಸಿಗುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.












Click it and Unblock the Notifications