ಕೆ. ಸಿ. ರೆಡ್ಡಿ ಪ್ರತಿಮೆ ಶೀಘ್ರವೇ ಅನಾವರಣ; ಬಸವರಾಜ ಬೊಮ್ಮಾಯಿ
ಬೆಂಗಳೂರು, ಮೇ 05; ಕರ್ನಾಟಕದ ಮೊದಲ ಮುಖ್ಯಮಂತ್ರಿ ಕೆ. ಸಿ. ರೆಡ್ಡಿ (ಕೆ.ಚೆಂಗಲರಾಯ ರೆಡ್ಡಿ) 120ನೇ ಜನ್ಮದಿನಾಚಾರಣೆಯ ಅಂಗವಾಗಿ ಗುರುವಾರ ವಿಧಾನಸೌಧದಲ್ಲಿರುವ ಅವರ ಭಾವಚಿತ್ರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುಷ್ಪಾರ್ಚನೆ ಮಾಡಿ, ಗೌರವ ಸಲ್ಲಿಸಿದರು.
ಬಳಿಕ ಮಾತನಾಡಿ ಮುಖ್ಯಮಂತ್ರಿಗಳು, "ಕೆ. ಸಿ. ರೆಡ್ಡಿಯವರ ಪುತ್ಥಳಿ ನಿರ್ಮಾಣ ಪೂರ್ಣಗೊಂಡಿದೆ, ಪುತ್ಥಳಿಗೆ ಇಂದೇ ಕಾರ್ಯಾದೇಶ ಹೊರಡಿಸಲಾಗುವುದು. ಕೆಲವೇ ದಿನಗಳಲ್ಲಿ ಸ್ಥಳಾಂತರ ಮಾಡಿ ಪುನಃ ವಿಧಾನಸೌಧದಲ್ಲಿ ಪ್ರತಿಮೆ ಅನಾವರಣ ಮಾಡಲಾಗುವುದು" ಎಂದರು.
ಕೆ. ಸಿ. ರೆಡ್ಡಿ ಆಡಳಿತ, ಕೊಡುಗೆ, ಸಾರ್ವಜನಿಕ ಜೀವನದ ಬಗ್ಗೆ ಮುಖ್ಯಮಂತ್ರಿಗಳು ನೆನಪು ಮಾಡಿಕೊಂಡರು. ಕೆ. ಸಿ. ರೆಡ್ಡಿಯವರು ಆಧುನಿಕ ಕರ್ನಾಟಕ ಹಾಗೂ ಬೆಂಗಳೂರಿನ ಬೇರುಗಳಿಗೆ ನೀರು ಹಾಕಿ ಬೆಳೆಸಿದವರು ಎಂದು ಬಣ್ಣಿಸಿದರು.

ಕರ್ನಾಟಕದ ಮೊಟ್ಟ ಮೊದಲ ಮುಖ್ಯಮಂತ್ರಿ ಕೆ. ಸಿ. ರೆಡ್ಡಿಯವರು ಕರ್ನಾಟಕದ ಮೈಸೂರು ಪ್ರಜಾಪ್ರತಿನಿಧಿಯ ಸದಸ್ಯರಿಂದ ಕರ್ನಾಟಕದ ಮುಖ್ಯಮಂತ್ರಿಗಳಾಗುವ ತನಕ ಅಮೋಘವಾದ ಸಾರ್ವಜನಿಕ ಜೀವನ ನಡೆಸಿದವರು ಎಂದರು.
ಭಾರತದ ಸ್ವಾತಂತ್ರ್ಯದ ನಂತರ ಕರ್ನಾಟಕದ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದ್ದಾರೆ. ಇಂದು ದೊಡ್ಡ ಪ್ರಮಾಣದಲ್ಲಿ ಬಿಇಎಲ್, ಹೆಚ್‌ಎಲ್, ಹೆಚ್‌ಎಂಟಿ ಮುಂತಾದ ಸಾರ್ವಜನಿಕ ಉದ್ದಿಮೆಗಳನ್ನು ಸ್ಥಾಪಿಸಲು ಅಂದಿನ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು.
ಉತ್ತಮ ಆಡಳಿತಗಾರ, ಎಲ್ಲರನ್ನೂ ಸಮಾನತೆ, ಪ್ರೀತಿ ವಿಶ್ವಾಸದಿಂದ ಕಂಡವರು. ಮಾದರಿ ಆಡಳಿತ ನೀಡಿದ ಅವರ ಹೆಸರು ಕರ್ನಾಟಕದ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯಲಿದೆ. ನಾವು ಅವರ ಆದರ್ಶಗಳನ್ನು ಪರಿಪಾಲನೆ ಮಾಡಬೇಕು ಎಂದು ಮುಖ್ಯಮಂತ್ರಿಗಳು ಕರೆ ನೀಡಿದರು.

ರಾಜಕೀಯ ಜೀವನದ ಇತಿಹಾಸ; ಕೆ. ಸಿ. ರೆಡ್ಡಿ ಪೂರ್ಣ ಹೆಸರು ಕೆ. ಚೆಂಗಲರಾಯ ರೆಡ್ಡಿ. ಕೋಲಾರ ಜಿಲ್ಲೆ, ಬಂಗಾರಪೇಟೆ ತಾಲೂಕಿನ ಕ್ಯಾಸಂಬಳ್ಳಿ ಎಂಬ ಗ್ರಾಮದಲ್ಲಿ ವೆಂಕಟರೆಡ್ಡಿ ಹಾಗೂ ಗಂಗೋಜಮ್ಮ ದಂಪತಿಗಳ ಪುತ್ರರಾಗಿ 04-051906 ರಂದು ಜನಿಸಿದರು. ಬೆಂಗಳೂರಿನಲ್ಲಿ ಎಸ್‌ಎಸ್‌ಎಲ್‌ಸಿ ತನಕ ವಿದ್ಯಾಭ್ಯಾಸ ಮಾಡಿದರು.
ಬಳಿಕ ಕಾಲೇಜು ವಿದ್ಯಾಭ್ಯಾಸಕ್ಕಾಗಿ ಮದ್ರಾಸಿಗೆ ಹೋದ ಅವರು ಬಿಎ ಮತ್ತು ಬಿಎಲ್ ಪದವಿ ಪಡೆದು ವಾಪಸ್ ಆದರು. ವಿದ್ಯಾಭ್ಯಾಸ ಮಾಡುತ್ತಲೇ ಮಹಾತ್ಮ ಗಾಂಧೀಜಿಯವರ ತತ್ವ ಸಿದ್ಧಾಂತಗಳು, ಹೋರಾಟದ ಬಗ್ಗೆ ಪ್ರಭಾವಿತರಾಗಿ ಮದ್ರಾಸಿನಲ್ಲೇ ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೆ.
ಮೊದಲಿನಿಂದಲೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುತ್ತಿದ್ದ ಅವರು ಅಪಾರ ಜನರ ಪ್ರೀತಿ ಗಳಿಸಿದ್ದರು. ಮೈಸೂರು ಸಂಸ್ಥಾನ ರಾಜರ ಆಳ್ವಿಕೆ ಅಂತ್ಯಗೊಂಡ ಬಳಿಕ ಮೈಸೂರು ರಾಜ್ಯ (ಇಂದಿನ ಕರ್ನಾಟ ರಾಜ್ಯ) 1947 ಅಕ್ಟೋಬರ್ 29 ರಂದು ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಾರೆ.
ದೇಶದಲ್ಲಿ ಸಂವಿಧಾನ ಜಾರಿಗೆ ಬಂದ ಬಳಿಕ ಫೆಬ್ರವರಿ 6, 1950 ರಂದು ತಮ್ಮ ಪೂರ್ಣ ಸಂಪುಟದೊಂದಿಗೆ ಪ್ರಮಾಣ ವಚನ ಸ್ವೀಕರಿಸಿದರು. ಸಚಿವರಾಗಿ, ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ ಅವರು 27 ಫೆಬ್ರವರಿ 1976 ರಂದು ಬೆಂಗಳೂರಿನಲ್ಲಿ ನಿಧನರಾದರು.












Click it and Unblock the Notifications