Karnataka Elections: ಬಸವರಾಜ ಬೊಮ್ಮಾಯಿ ವಿರುದ್ಧ ವಿನಯ್ ಕುಲಕರ್ಣಿ ಸ್ಪರ್ಧೆ ಬಹುತೇಕ ಖಚಿತ- ಇನ್‌ಸೈಡ್ ಸ್ಟೋರಿ
ಬೆಂಗಳೂರು, ಮಾರ್ಚ್ 01: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿನಿಧಿಸುತ್ತಿರುವ ಹಾವೇರಿಯ ಶಿಗ್ಗಾಂವಿಯಿಂದ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಮುಂದಾಗಿದೆ. ತಮ್ಮ ತವರು ಕ್ಷೇತ್ರವಾದ ಧಾರವಾಡ ಗ್ರಾಮಾಂತರದಿಂದ ಸ್ಪರ್ಧಿಸಲು ವಿನಯ್ ಕುಲಕರ್ಣಿ ಮುಂದಾಗಿದ್ದರೂ, ಕಾಂಗ್ರೆಸ್ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ.
ಶಿಗ್ಗಾವಿಯ ಮಾಜಿ ಕಾಂಗ್ರೆಸ್ ಶಾಸಕ ಅಜ್ಜಂಪೀರ್ ಖಾದ್ರಿ ಅವರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ವಿನಯ್ ಕುಲಕರ್ಣಿ ಅವರಿಗೆ ಶಿಗ್ಗಾವಿಯಿಂದ ಟಿಕೆಟ್ ದೊರೆತರೆ, ಅವರನ್ನು ಬೆಂಬಲಿಸುವುದಾಗಿ ಅಜ್ಜಂಪೀರ್ ಖಾದ್ರಿ ಭರವಸೆ ನೀಡಿದ್ದಾರೆ. ಖಾದ್ರಿ ಅವರು 2008 ರಿಂದ ಬೊಮ್ಮಾಯಿ ವಿರುದ್ಧ ಸ್ಪರ್ಧಿಸಿ ಸೋತಿದ್ದರು.

ಎರಡು ಚುನಾವಣಾ ಪೂರ್ವ ಸಮೀಕ್ಷೆಗಳನ್ನು ಕಾಂಗ್ರೆಸ್ ನಡೆಸಿದೆ. ಲಿಂಗಾಯತ ಸಮುದಾಯದ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಬಸವರಾಜ ಬೊಮ್ಮಾಯಿ ಅವರಿಗೆ ಸವಾಲಾಗಬಹುದು ಎಂದು ಪಕ್ಷದ ಪದಾಧಿಕಾರಿಗಳು ಹೇಳಿದ್ದಾರೆ. ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಂಚಮಸಾಲಿ ಲಿಂಗಾಯತರು, ಮುಸ್ಲಿಮರು ಮತ್ತು ಕುರುಬರು ಇರುವುದರಿಂದ ಬಸವರಾಜ ಬೊಮ್ಮಾಯಿ ಅವರಿಗೆ ಸಂಕಷ್ಟ ಎದುರಾಗಬಹುದು ಎಂದು ಹೇಳಲಾಗುತ್ತಿದೆ.
ವಿನಯ್ ಕುಲಕರ್ಣಿ ಅವರು ಪಂಚಮಸಾಲಿ ಸಮುದಾಯಕ್ಕೆ ಸೇರಿದವರು. ಆದರೆ ಬೊಮ್ಮಾಯಿ ವಿರುದ್ಧ ಕುಲಕರ್ಣಿ ಅವರನ್ನು ಕಣಕ್ಕಿಳಿಸಲು ಬೆಂಬಲಿಗರು ಉತ್ಸುಕರಾಗಿಲ್ಲ. ಅವರು ಎರಡು ಬಾರಿ ಪ್ರತಿನಿಧಿಸಿದ್ದ ಧಾರವಾಡ ಗ್ರಾಮಾಂತರದಿಂದ ಸ್ಪರ್ಧಿಸಲು ಬಯಸಿದ್ದಾರೆ ಎಂದು ಹೇಳಿದ್ದಾರೆ. ಇದು ಸ್ಥಳೀಯ ನ್ಯಾಯಾಲಯ ನೀಡುವ ತೀರ್ಪಿನ ಮೇಲೆ ನಿರ್ಧಾರವಾಗಲಿದೆ. ಹೀಗಾಗಿ ವಿನಯ್ ಕುಲಕರ್ಣಿ ಅವರ ಧಾರವಾಡ ಗ್ರಾಮಂತರದ ಕನಸಿನ್ನೂ ಕನಸಾಗಿಯೇ ಉಳಿದಿದೆ.
ಜಿಲ್ಲಾ ಪಂಚಾಯತಿ ಸದಸ್ಯರೊಬ್ಬರ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಕುಲಕರ್ಣಿಗೆ ಧಾರವಾಡ ನಗರ ಪ್ರವೇಶಿಸದಂತೆ ಸುಪ್ರೀಂ ಕೋರ್ಟ್ ನಿರ್ಬಂಧ ವಿಧಿಸಿತ್ತು. ಕಳೆದ ವಾರ, ಚುನಾವಣಾ ಹಿನ್ನೆಲೆಯಲ್ಲಿ ಧಾರವಾಡಕ್ಕೆ ಭೇಟಿ ನೀಡಲು ಅನುಮತಿ ಕೋರಿ ಅವರು ಸಲ್ಲಿಸಿದ ಮನವಿಯನ್ನು ಸುಪ್ರೀಂ ತಿರಸ್ಕರಿಸಿತು. ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ನ್ಯಾಯಾಲಯದ ಮುಂದೆ ಮೇಲ್ಮನವಿ ಸಲ್ಲಿಸಲು ಅವರನ್ನು ಸುಪ್ರೀಂ ಕೋರ್ಟ್ ಸೂಚಿಸಿದೆ.

ಕುಲಕರ್ಣಿ ಅವರ ಕ್ಷೇತ್ರಕ್ಕೆ ಭೇಟಿ ನೀಡದೆ ಗೆಲುವು ಸಾಧಿಸುವುದು ಕಷ್ಟ. ನ್ಯಾಯಾಲಯ ಅನುಮತಿ ನೀಡದಿದ್ದಲ್ಲಿ ಶಿಗ್ಗಾವಿಯಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಹಾವೇರಿ ಜಿಲ್ಲೆಯ ಕಾಂಗ್ರೆಸ್ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಲಘಟಗಿ ( ಧಾರವಾಡ ಜಿಲ್ಲೆ ) ಕ್ಷೇತ್ರದ ಅಭ್ಯರ್ಥಿ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ ಎನ್ನಲಾಗಿದೆ.
ಮಾಜಿ ಶಾಸಕ ಸಂತೋಷ್ ಲಾಡ್ ಅವರನ್ನು ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲಿಸಿದರೆ, ನಾಗರಾಜ್ ಛಬ್ಬಿ ಅವರನ್ನು ಕಣಕ್ಕಿಳಿಸಲು ಡಿಕೆ ಶಿವಕುಮಾರ್ ಬಯಸಿದ್ದಾರೆ. 2018ರಲ್ಲಿ ಸೋಲನುಭವಿಸುವ ಮುನ್ನ ಸಂತೋಷ್ ಲಾಡ್ ಎರಡು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಕಾಂಗ್ರೆಸ್‌ನ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದಿದ್ದು, ಅಭ್ಯರ್ಥಿಯನ್ನು ಆಯ್ಕೆ ಮಾಡಲು ಕೇಂದ್ರ ಚುನಾವಣಾ ಸಮಿತಿಗೆ ಬಿಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ವಿಚಾರವನ್ನು ಬಹಿರಂಗವಾಗಿ ಚರ್ಚಿಸಬೇಡಿ ಎಂಬ ಡಿಕೆ ಶಿವಕುಮಾರ್ ಸೂಚನೆಯನ್ನು ಧಿಕ್ಕರಿಸಿ, ಚುನಾವಣೆಯಲ್ಲಿ ಪಕ್ಷ ಗೆದ್ದರೆ ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ಸಂತೋಷ್ ಲಾಡ್ ಬಹಿರಂಗವಾಗಿ ಹೇಳಿದ್ದರು. ಸಂತೋಷ್ ಲಾಡ್ ಸಿದ್ದರಾಮಯ್ಯನವರ ಶಿಷ್ಯರೆಂದೇ ಬಿಂಬಿತವಾಗಿದೆ.












Click it and Unblock the Notifications