ದಕ್ಷಿಣ ಕರ್ನಾಟಕದ ಮೇಲೆ ಮೂರು ಪಕ್ಷಗಳ ಕಣ್ಣು!
ಬೆಂಗಳೂರು, ಏಪ್ರಿಲ್ 29; ಈ ಬಾರಿಯ ಚುನಾವಣೆಯಲ್ಲಿ ದಕ್ಷಿಣ ಕರ್ನಾಟಕದ ಮೇಲೆ ಮೂರು ಪಕ್ಷಗಳ ಕಣ್ಣಿದೆ. ಹಳೆ ಮೈಸೂರು ಭಾಗದ ಜಿಲ್ಲೆಗಳು ಬರುವ ಪ್ರದೇಶ ಜೆಡಿಎಸ್ ಭದ್ರಕೋಟೆ ಎಂಬ ಮಾತಿತ್ತು. ಆದರೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ತಂತ್ರಗಳು ಪಕ್ಷಕ್ಕೆ ಆತಂಕ ಮೂಡಿಸಿದೆ. ರಾಜ್ಯದಲ್ಲಿ ಸ್ಪಷ್ಟ ಬಹುಮತಗಳಿಸುವ ಗುರಿ ಹೊಂದಿರುವ ಬಿಜೆಪಿಯೂ ಇಲ್ಲಿ ಹೆಚ್ಚು ಕ್ಷೇತ್ರ ಗೆಲ್ಲಬೇಕು ಎಂಬ ಉದ್ದೇಶ ಹೊಂದಿದೆ.
ಚಾಮರಾಜನಗರದಿಂದ ಬೆಂಗಳೂರು ಗ್ರಾಮಾಂತರದ ತನಕ. ಮೈಸೂರು, ಮಂಡ್ಯ, ರಾಮನಗರ, ಹಾಸನ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳ ಮೇಲೆ ಮೂರು ಪಕ್ಷಗಳ ಕಣ್ಣಿದೆ. ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಕರೆತಂದು ಇಲ್ಲಿ ಪ್ರಚಾರ ಮಾಡಿಸುತ್ತಿದೆ. ಜೆಡಿಎಸ್‌ಗೆ ಹಿನ್ನಡೆ ಉಂಟು ಮಾಡಲು ಎರಡೂ ರಾಷ್ಟ್ರಿಯ ಪಕ್ಷಗಳು ತಂತ್ರ ರೂಪಿಸಿವೆ.

ದಕ್ಷಿಣ ಕರ್ನಾಟಕದಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ, ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಕರ್ಮಭೂಮಿ ಇದೆ. ಆದ್ದರಿಂದ ಮೇ 10ರಂದು ನಡೆಯುವ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಸೀಟು ಸಿಗಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಒಕ್ಕಲಿಗರ ಪ್ರಭಾವ; ಹಳೆ ಮೈಸೂರು ಭಾಗದ ಜಿಲ್ಲೆಗಳ ಒಟ್ಟು ಕ್ಷೇತ್ರಗಳು ಬೆಂಗಳೂರು ನಗರ ಸೇರಿ ಸುಮಾರು 89. ಇಲ್ಲಿ ಒಕ್ಕಲಿಗರು ಸಾಕಷ್ಟು ಪ್ರಾಬಲ್ಯ ಹೊಂದಿದ್ದಾರೆ. ಎಚ್. ಡಿ. ಕುಮಾರಸ್ವಾಮಿ ಸಮುದಾಯದ ಪ್ರಭಾವಿ ನಾಯಕರು. ಆದರೆ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷರಾಗಿ ಡಿ. ಕೆ. ಶಿವಕುಮಾರ್ ನೇಮಕ ಮಾಡಿದ್ದು, ಅಲ್ಲದೇ ಈ ಬಾರಿ ಕಾಂಗ್ರೆಸ್‌ಗೆ ಬಹುಮತ ಬಂದರೆ ಅವರು ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ಸುದ್ದಿಗಳು ಲೆಕ್ಕಾಚಾರವನ್ನು ಬದಲಾವಣೆ ಮಾಡಿವೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಮತಗಳ ಹಂಚಿಕೆ ಲೆಕ್ಕಾಚಾರದಲ್ಲಿದ್ದರೆ ಬಿಜೆಪಿ ಈಗ ದಕ್ಷಿಣ ಕರ್ನಾಟಕವನ್ನು ಗೆಲ್ಲಲು ತಂತ್ರ ರೂಪಿಸುತ್ತಿದೆ. 2004, 2008 ಮತ್ತು 2018ರ ಚುನಾವಣೆಯಲ್ಲಿ ಬಿಜೆಪಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸಹ ಸ್ಪಷ್ಟ ಬಹುಮತ ಸಿಕ್ಕಿಲ್ಲ. ಇದಕ್ಕೆ ಹಳೆ ಮೈಸೂರು ಭಾಗದಲ್ಲಿ ಕಡಿಮೆ ಸೀಟು ಗೆದ್ದಿರುವುದು ಸಹ ಕಾರಣವಾಗಿದೆ.

ಚುನಾವಣೆಗೆ ಮೊದಲು ನರೇಂದ್ರ ಮೋದಿ ಮಂಡ್ಯದಲ್ಲಿ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇ ಉದ್ಘಾಟನೆ ಮಾಡಿದರು. ಅಮಿತ್ ಶಾ, ಯೋಗಿ ಆದಿತ್ಯನಾಥ್ ಪ್ರಚಾರ ನಡೆಸಿದರು. ಟಿಪ್ಪು ಸುಲ್ತಾನ್ ವಿರುದ್ಧ ಪ್ರಚಾರ, ಉರಿ ಗೌಡ ಮತ್ತು ನಂಜೇಗೌಡ ವಿಚಾರ ಮುಂದಿಟ್ಟುಕೊಂಡು ಬಿಜೆಪಿ ಚುನಾವಣೆ ಎದುರಿಸುತ್ತಿದೆ. ಈ ಭಾಗದಲ್ಲಿ ಪ್ರಮುಖ ನಾಯಕರ ಕೊರತೆಯನ್ನು ಬಿಜೆಪಿ ಎದುರಿಸುತ್ತಿದೆ.
ಆದ್ದರಿಂದ ಮೈಸೂರಿನ ವರುಣದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಎದುರಾಳಿಯಾಗಿ ಬೆಂಗಳೂರಿನ ಗೋವಿಂದರಾಜ ನಗರ ಕ್ಷೇತ್ರದ ಶಾಸಕ ವಿ. ಸೋಮಣ್ಣ, ರಾಮನಗರದ ಕನಕಪುರದಲ್ಲಿ ಡಿ. ಕೆ. ಶಿವಕುಮಾರ್ ಎದುರಾಳಿಯಾಗಿ ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದ ಶಾಸಕ ಆರ್. ಅಶೋಕರನ್ನು ಪಕ್ಷ ಅಭ್ಯರ್ಥಿಗಳನ್ನಾಗಿ ಮಾಡಿದೆ. ಲಿಂಗಾಯತ ಸಮುದಾಯದ ಮತಗಳನ್ನು ಸೆಳೆಯಲು ಸೋಮಣ್ಣ ಸಹಾಯಕವಾಗಬಹುದು ಎಂಬ ಲೆಕ್ಕಾಚಾರವೂ ಇದೆ.
ಭಾರತ್ ಜೋಡೋ ಯಾತ್ರೆ; ಹಳೆ ಮೈಸೂರು ಭಾಗದಲ್ಲಿ 2022ರ ನವೆಂಬರ್‌ನಲ್ಲಿ ಚುನಾವಣಾ ಪ್ರಚಾರ ಆರಂಭಗೊಂಡಿದೆ. ಸೆಪ್ಟೆಂಬರ್‌ನಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಚಾಮರಾಜನಗರ ಮೂಲಕ ರಾಜ್ಯಕ್ಕೆ ಪ್ರವೇಶ ಪಡೆದಿತ್ತು. ಮಂಡ್ಯ, ರಾಮನಗರ, ತುಮಕೂರು ಮೂಲಕ ಸಾಗಿತು. ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯನ್ನು ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಿಂದ ಆರಂಭಿಸಿ ತಿರುಗೇಟು ನೀಡಿತು. ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆಯ ಸಮಾರೋಪ ಸಮಾರಂಭವನ್ನು ಮೈಸೂರಿನಲ್ಲಿ ನಡೆಸಿತು.
ಕರ್ನಾಟಕ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ, ಭಾರತ್ ಜೋಡೋ ಯತ್ರೆ ಮೂಲಕ ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ನಡೆಸಿತು. ಬಿಜೆಪಿಗೆ ಮಂಡ್ಯದ ಪಕ್ಷೇತರ ಸಂಸದೆ ಸುಮಲತಾ ಬೆಂಬಲ ಘೋಷಣೆ ಮಾಡಿದ್ದಾರೆ. ಜೆಡಿಎಸ್ ರಾಮನಗರ, ಮಂಡ್ಯ ಭಾಗದಲ್ಲಿ ಪ್ರಭಾವ ಹೊಂದಿದೆ. ಆದರೆ ತುಮಕೂರು ಭಾಗದಲ್ಲಿ ಪಕ್ಷದ ಪ್ರಭಾವ ಕುಗ್ಗಿದೆ. ವಿಧಾನ ಪರಿಷತ್ ಚುನಾವಣೆ ಫಲಿತಾಂಶ, ಹಾಲಿ ಶಾಸಕರು ಪಕ್ಷ ಬಿಟ್ಟಿದ್ದು ಪಕ್ಷಕ್ಕೆ ಕೊಂಚ ಹಿನ್ನಡೆ ಆದಂತೆ ಕಾಣುತ್ತಿದೆ.












Click it and Unblock the Notifications