Laxman Savadi : ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ಲಕ್ಷ್ಮಣ ಸವದಿ: ಸ್ಪಷ್ಟವಾಗುತ್ತಿದೆ ಮಾಜಿ ಡಿಸಿಎಂ ಮುಂದಿನ ನಡೆ
ಬೆಳಗಾವಿ, ಏಪ್ರಿಲ್ 14: ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ( Laxman Savadi ) ಅವರು ವಿಧಾನ ಪರಿಷತ್ ಸದಸ್ಯತ್ವ ಹಾಗೂ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಗುರುವಾರ ಹೇಳಿದರು. ಶುಕ್ರವಾರ ಬೆಂಗಳೂರಿಗೆ ( Bengaluru ) ಆಗಮಿಸಿ ರಾಜೀನಾಮೆ ಸಲ್ಲಿಸುವುದಾಗಿ ಘೋಷಿಸಿದರು. ಅಥಣಿಯಲ್ಲಿ ತಮ್ಮ ಬೆಂಬಲಿಗರೊಂದಿಗೆ ನಡೆದ ಸಭೆಯಲ್ಲಿ ಅವರು ಈ ವಿಷಯವನ್ನು ಸ್ಪಷ್ಟಪಡಿಸಿದರು.
ಅಥಣಿಯಲ್ಲಿ ನಡೆದ ಸಭೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಅವರ ಬೆಂಬಲಿಗರು ಕಾಂಗ್ರೆಸ್ ( Congress ) ಸೇರಿ ಮೇ 10ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಸಲಹೆ ನೀಡಿದರು. ಬಿಜೆಪಿ ( BJP ) ಅಥಣಿಯಿಂದ ಮಹೇಶ ಕುಮಠಳ್ಳಿ ಅವರನ್ನು ಕಣಕ್ಕಿಳಿಸಿದ್ದು, ಕಾಂಗ್ರೆಸ್ ಇನ್ನೂ ತನ್ನ ಅಭ್ಯರ್ಥಿಯನ್ನು ಘೋಷಿಸಿಲ್ಲ.

ಶುಕ್ರವಾರ ಬೆಂಗಳೂರಿನಲ್ಲಿ ಬಿಜೆಪಿ ಸದಸ್ಯ ಮತ್ತು ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಲಕ್ಷ್ಮಣ ಸವದಿ ಘೋಷಿಸಿದರು. ಸವದಿ ಅವರು ಕಾಂಗ್ರೆಸ್ ಸೇರುವ ಬಗ್ಗೆ ಇನ್ನೂ ಖಚಿತ ಪಡಿಸಿಲ್ಲ. ಆದರೆ ಬಿಜೆಪಿ ನಾಯಕರ ಷಡ್ಯಂತ್ರಗಳ ನಡುವೆಯೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಎಂಎಲ್‌ಸಿ ಚುನಾವಣೆಯಲ್ಲಿ ಗೆಲ್ಲಲು ಸಹಾಯ ಮಾಡಿದರು ಎಂದು ಹೇಳಿದರು.
ವಿರೋಧ ಪಕ್ಷದ ನಾಯಕನಾಗಿದ್ದರೂ, ನನ್ನನ್ನು ಸೋಲಿಸಲು ಬಿಜೆಪಿ ನಾಯಕರು ನಡೆಸುತ್ತಿದ್ದ ಷಡ್ಯಂತ್ರಗಳ ಬಗ್ಗೆ ಸಿದ್ದರಾಮಯ್ಯ ಎಚ್ಚರಿಸಿದರು. ನನ್ನ ಗೆಲುವಿಗೆ ಯಾವುದೇ ಅಡೆತಡೆ ಉಂಟಾಗದಂತೆ ಸಿದ್ದರಾಮಯ್ಯ ನೋಡಿಕೊಂಡರು ಎಂದು ಸ್ಮರಿಸಿದರು. ತಮ್ಮ ಮುಂದಿನ ನಡೆ ಕುರಿತು ವಿವಿಧ ಪಕ್ಷಗಳ ಮುಖಂಡರನ್ನು ಭೇಟಿ ಮಾಡುವುದಾಗಿ ಸವದಿ ತಿಳಿಸಿದ್ದಾರೆ.
ಪಕ್ಷದಲ್ಲಿದ್ದಾಗ ಬಿಜೆಪಿಯಿಂದ ತನಗೆ ಆದ ಅನ್ಯಾಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಕುಮಠಳ್ಳಿ ಅವರನ್ನು ಗೆಲ್ಲಿಸಲು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮನವಿ ಮಾಡಿದರು. ಆ ಸಮಯದಲ್ಲಿ ಪಕ್ಷದ ಟಿಕೆಟ್ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಅವರು ತಮ್ಮ ಭರವಸೆಯನ್ನು ಉಳಿಸಿಕೊಳ್ಳಲಿಲ್ಲ ಎಂದು ಹರಿಹಾಯ್ದರು. ನಾನು ಪಕ್ಷದಲ್ಲಿದ್ದ ಅವಧಿಯಲ್ಲಿ ಬಿಜೆಪಿ ನಾಯಕತ್ವದಿಂದ ತೀವ್ರ ಚಿತ್ರಹಿಂಸೆ ಅನುಭವಿಸಿದ್ದೇನೆ ಎಂದು ಅವರು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಬಸವಕಲ್ಯಾಣ ಮತ್ತು ದಾವಣಗೆರೆಯಲ್ಲಿ ನಡೆದ ಬೃಹತ್ ಸಮಾವೇಶಗಳಲ್ಲಿ ಬಿಜೆಪಿ ನಾಯಕತ್ವ ಅವಮಾನಿಸಿದೆ ಎಂದರು. ಇದಕ್ಕೂ ಮುನ್ನ ಬಿಜೆಪಿಯ ಹಲವು ಮುಖಂಡರು ಅಥಣಿಯಲ್ಲಿ ಸವದಿ ಅವರನ್ನು ಭೇಟಿ ಮಾಡಿ ಪಕ್ಷ ತೊರೆಯದಂತೆ ತಡೆಯುವ ಪ್ರಯತ್ನ ನಡೆಸಿದರು. ಆದರೆ ಸವದಿ ಬೆಂಬಲಿಗರು ಬಿಜೆಪಿ ನಾಯಕರ ಮನವಿಯನ್ನು ತಳ್ಳಿಹಾಕಿದರು.
ಅಥಣಿಯ ಬಿಜೆಪಿ ಮುಖಂಡ ರಾಜೇಶ್ ನೇರ್ಲಿ ಅವರು ಸವದಿ ಅವರನ್ನು ಸಾಂತ್ವನ ಮಾಡಲು ನಿವಾಸಕ್ಕೆ ಆಗಮಿಸಿದ್ದರು. ಆ ಸಮಯದಲ್ಲಿ ಅವರ ಮೇಲೆ ಸವದಿ ಅವರ ಬೆಂಬಲಿಗರ ಗುಂಪೊಂದು ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ, ಸವದಿ ಅವರು ಬಿಜೆಪಿ ತೊರೆದ ನಂತರ ಶುಕ್ರವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸಿದ್ದರಾಮಯ್ಯ, ಕೆಪಿಸಿಸಿ ಮುಖ್ಯಸ್ಥ ಡಿಕೆ ಶಿವಕುಮಾರ್ ಮತ್ತು ಕಾಂಗ್ರೆಸ್‌ನ ಇತರ ನಾಯಕರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಅವರಿಗೆ ಅಥಣಿಯಿಂದ ಪಕ್ಷದ ಟಿಕೆಟ್ ನೀಡುವುದರ ಜೊತೆಗೆ, ಪಕ್ಷದಲ್ಲಿ ಅವರಿಗೆ ಪ್ರಮುಖ ಸ್ಥಾನ ನೀಡಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications