Karnataka Elections:ಗ್ಯಾಸ್ ಸಿಲಿಂಡರ್‌ಗೆ ಮಾಲೆ ಹಾಕಿ,ವಿಭೂತಿ ಬಳಿದು 'ಪೂಜೆ' ಸಲ್ಲಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
ಬೆಂಗಳೂರು, ಮೇ 10: ಕರ್ನಾಟಕ ವಿಧಾನಸಭೆ ಚುನಾವಣೆಗೆ ಇಂದು ಮತದಾನ ನಡೆಯಲಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಎಎಪಿ ಹಾಗೂ ಎಸ್‌ಡಿಪಿಐ ಪಕ್ಷಗಳು ಈ ಬಾರಿಯ ಚುನಾವಣಾ ಕಣದಲ್ಲಿ ಸೆಣಸಾಡುತ್ತಿವೆ. ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಹಳೇ ಮೈಸೂರು ಭಾಗದಲ್ಲಿ ಮೂರು ಪಕ್ಷಗಳು ಪೈಪೋಟಿ ನಡೆಸುತ್ತಿವೆ.
ಮತದಾನಕ್ಕೂ ಮುನ್ನಾ ದಿನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು 'ಗ್ಯಾಸ್ ಸಿಲಿಂಡರ್'ಗೆ ಪ್ರಾರ್ಥನೆ ಸಲ್ಲಿಸಿದರು. ಈ ಮೂಲಕ ಬೆಲೆ ಏರಿಕೆಯ ಬಗ್ಗೆ ಮತದಾರರಿಗೆ ನೆನಪಿಸಿದರು. ಕೆಪಿಸಿಸಿ ಕಚೇರಿಯಲ್ಲಿ ಇರಿಸಲಾಗಿದ್ದ ಗ್ಯಾಸ್ ಸಿಲಿಂಡರ್‌ಗೆ ಶಿವಕುಮಾರ್ ಅವರು ಮಾಲೆ ಹಾಕಿ, ವಿಭೂತಿ ಬಳಿಯುವ ಮೂಲಕ ಪೂಜೆ ಸಲ್ಲಿಸಿದರು.

ಮೇಜಿನ ಮೇಲೆ ಇಟ್ಟಿದ್ದ ಸಿಲಿಂಡರ್‌ಗೆ ತೆಂಗಿನಕಾಯಿ, ಬಾಳೆಹಣ್ಣು ಸೇರಿದಂತೆ ಹಣ್ಣು ಹಂಪಲುಗಳನ್ನು ಅರ್ಪಿಸಲಾಯಿತು. ಶಿವಕುಮಾರ್ ಸಿಲಿಂಡರ್ ಮುಂದೆ ಕರ್ಪೂರ ಬೆಳಗಿಸಿ ಆರತಿ ಮಾಡಿ ನಮನ ಸಲ್ಲಿಸಿದರು.
'ಮತದಾನ ಮಾಡುವ ಮುನ್ನ ಸಿಲಿಂಡರ್ ನೋಡಿ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು ನೆನಪಿರಲಿ ಎಂದು ಶಿವಕುಮಾರ್ ಜನರಿಗೆ ಮನವಿ ಮಾಡಿದರು. ಅದನ್ನೇ ಅನುಸರಿಸುವಂತೆ ನಾನು ಜನರನ್ನು ಕೇಳುತ್ತಿದ್ದೇನೆ ಎಂದು ಶಿವಕುಮಾರ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಇಂದು ಎಲ್‌ಪಿಜಿ ಸಿಲಿಂಡರ್‌ಗೆ ಪೂಜೆ ನೆರವೇರಿಸಿದೆ. ನಾಳೆ ಕರ್ನಾಟಕದ ಭವಿಷ್ಯವನ್ನು ಆಯ್ಕೆಮಾಡುವ ಮಹತ್ವದ ದಿನ. ಮರೆಯದೇ ಪ್ರತೀ ಮತದಾರರು ನಿಮ್ಮ ಮನೆಯ ಸಿಲಿಂಡರ್‌ಗೆ ನಮಸ್ಕಾರ ಮಾಡಿ ರಾಜ್ಯದ ಆಡಳಿತವನ್ನು ಯಾರಿಗೆ ನೀಡಬೇಕೆಂದು ನಿರ್ಧರಿಸಿ.#KarnatakaAssemblyElection2023 pic.twitter.com/ChRLStEHIV
— DK Shivakumar (@DKShivakumar) May 9, 2023
ಜಾಗೃತಿ ಮೂಡಿಸಲು ಮತಗಟ್ಟೆಗಳಿಂದ 100 ಮೀಟರ್ ದೂರದಲ್ಲಿ ಒಂದು ಸಿಲಿಂಡರ್ ಅನ್ನು ಇಟ್ಟುಕೊಳ್ಳುವಂತೆ ಅವರು ಕಾರ್ಯಕರ್ತರನ್ನು ಒತ್ತಾಯಿಸಿದರು.
ಪೂಜೆ ಸಲ್ಲಿಸಿರುವ ವಿಡಿಯೊ ತುಣುಕನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಅವರು , 'ಕೆಪಿಸಿಸಿ ಕಚೇರಿಯಲ್ಲಿ ಇಂದು ಎಲ್‌ಪಿಜಿ ಸಿಲಿಂಡರ್‌ಗೆ ಪೂಜೆ ನೆರವೇರಿಸಿದೆ. ನಾಳೆ ಕರ್ನಾಟಕದ ಭವಿಷ್ಯವನ್ನು ಆಯ್ಕೆ ಮಾಡುವ ಮಹತ್ವದ ದಿನ. ಮರೆಯದೇ ಪ್ರತೀ ಮತದಾರರು ನಿಮ್ಮ ಮನೆಯ ಸಿಲಿಂಡರ್‌ಗೆ ನಮಸ್ಕಾರ ಮಾಡಿ ರಾಜ್ಯದ ಆಡಳಿತವನ್ನು ಯಾರಿಗೆ ನೀಡಬೇಕೆಂದು ನಿರ್ಧರಿಸಿ' ಎಂದು ತಿಳಿಸಿದರು.
ಕರ್ನಾಟಕ ವಿಧಾನಸಭೆಗೆ 224 ಶಾಸಕರನ್ನು ಆಯ್ಕೆ ಮಾಡಲು ಮೇ 10 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 13 ರಂದು ಮತ ಎಣಿಕೆ ನಡೆಯಲಿದೆ.












Click it and Unblock the Notifications