ಜೆಡಿಎಸ್, ಕಾಂಗ್ರೆಸ್ ಚುನಾವಣಾ ಪ್ರಚಾರಕ್ಕೆ ಕೆಸಿಆರ್ ಫಂಡಿಂಗ್: ತೆಲಂಗಾಣ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ಸ್ಫೋಟಕ ಹೇಳಿಕೆ
ಬೆಂಗಳೂರು, ಏಪ್ರಿಲ್ 29: ಮುಂಬರುವ ವಿಧಾನಸಭೆ ಚುನಾವಣೆ ಅಂಗವಾಗಿ ಕರ್ನಾಟಕದಲ್ಲಿ ಪ್ರಚಾರ ನಡೆಸುತ್ತಿರುವ ತೆಲಂಗಾಣ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ಸ್ಪೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ (ಕೆಸಿಆರ್) ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳಕ್ಕೆ ( ಜೆಡಿಎಸ್ ) ಹಣ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಸಂಜಯ್ ಅವರು ಕರ್ನಾಟಕದ ತೆಲುಗು ಮಾತನಾಡುವ ಜನಸಂಖ್ಯೆಯಿರುವ ಪ್ರದೇಶಗಳಲ್ಲಿ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಮೊನ್ನೆ ಶುಕ್ರವಾರ ಬೆಂಗಳೂರಿನ ಯಲಹಂಕದಲ್ಲಿ ಸಂಜಯ್ ಮನೆ-ಮನೆ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.

ಮುಳಬಾಗಲು ಪಟ್ಟಣದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಬಂಡಿ ಸಂಜಯ್, 'ಕರ್ನಾಟಕವನ್ನು ಎಟಿಎಂ ಆಗಿ ಬಳಸಿಕೊಳ್ಳಲು ಕಾಂಗ್ರೆಸ್ ಬಯಸಿದೆ. ಅವರು ಇಲ್ಲಿಂದ ಹಣವನ್ನು ತೆಗೆದುಕೊಂಡು ರಾಷ್ಟ್ರೀಯ ಚುನಾವಣೆಗಳಿಗೆ ಖರ್ಚು ಮಾಡಲು ಬಯಸುತ್ತಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಒಪ್ಪಂದ ನಡೆದಿದೆ. ಜೆಡಿಎಸ್ ಪ್ರಬಲವಾಗಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ದುರ್ಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕೆಸಿಆರ್ ರಾಜ್ಯದಲ್ಲಿ ಎರಡೂ ಪಕ್ಷಗಳಿಗೆ ಹಣ ನೀಡುತ್ತಿದ್ದಾರೆ' ಎಂದರು.
ತಪ್ಪಾಗಿ ಕಾಂಗ್ರೆಸ್ ಗೆದ್ದರೆ ಭಯೋತ್ಪಾದನೆ ಹರಡುವ ಅಪಾಯವಿದೆ ಎಂದು ಹೇಳಿದರು. ಟಿಪ್ಪು ಸುಲ್ತಾನ್ ಜಯಂತಿ ಮಾಡುವ ಪಕ್ಷಗಳಿಗೆ ಏಕೆ ಮತ ಹಾಕಬೇಕು ಎಂದು ಬಂಡಿ ಸಂಜಯ್ ಕೇಳಿದ್ದಾರೆ.
ತೆಲಂಗಾಣ ಸಿಎಂ ಕೆಸಿಆರ್ ಅವರನ್ನು ಉಲ್ಲೇಖಿಸಿ, ಬಿಆರ್‌ಎಸ್ ನಾಯಕ ಮಹಾರಾಷ್ಟ್ರದಲ್ಲಿ ಏಕೆ ಹೆಚ್ಚು ಕಾಲ ಕಳೆಯುತ್ತಿದ್ದಾರೆ ಎಂದು ಕೇಳಿದರು. 'ಮುಂದಿನ ವರ್ಷ ಲೋಕಸಭಾ ಚುನಾವಣೆಗೆ ಹೋದಾಗ ಕೆಸಿಆರ್ ಪಾಕಿಸ್ತಾನದಲ್ಲಿ ಪ್ರಚಾರ ನಡೆಸಬಹುದು' ಎಂದು ಆರೋಪಿಸಿದರು.
ಕರ್ನಾಟಕದಲ್ಲಿ ಅಭಿವೃದ್ಧಿ ಬೇಕಾದರೆ ಬಿಜೆಪಿಗೆ ಮತ ನೀಡಿ. ತೆಲಂಗಾಣದಲ್ಲೂ ರಾಮರಾಜ್ಯ ಸ್ಥಾಪನೆಗಾಗಿ ಹೋರಾಟ ನಡೆಸುತ್ತಿದ್ದೇವೆ ಎಂದರು.
ಎಸ್‌ಎಸ್‌ಸಿ ಪೇಪರ್ ಸೋರಿಕೆ ಪ್ರಕರಣದಲ್ಲಿ ತೆಲಂಗಾಣ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ಅವರನ್ನು ಹನ್ಮಕೊಂಡದ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತ್ತು. ಅವರನ್ನು ಏಪ್ರಿಲ್ 18 ರವರೆಗೆ ರಿಮಾಂಡ್‌ನಲ್ಲಿ ಇರಿಸಲಾಗಿತ್ತು.
ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ಪೇಪರ್ ಸೋರಿಕೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಬಂಡಿ ಸಂಜಯ್ ಅವರನ್ನು ಬಂಧಿಸಲಾಗಿತ್ತು.
224 ಸ್ಥಾನಗಳ ಕರ್ನಾಟಕ ವಿಧಾನಸಭೆಗೆ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಕರ್ನಾಟಕದಲ್ಲಿ ಬಿಜೆಪಿ ಪರ ಪ್ರಚಾರ ನಡೆಸುತ್ತಿದ್ದಾರೆ.












Click it and Unblock the Notifications