ರಾಹುಲ್ ಆರೋಪಕ್ಕೆ ಟ್ವೀಟ್ ಬಾಣ ಬಿಟ್ಟ ಯಡಿಯೂರಪ್ಪ
ಬೆಂಗಳೂರು, ಏಪ್ರಿಲ್ 27: "ಕರ್ನಾಟಕ ರಾಜ್ಯವೂ ಕಾಂಗ್ರೆಸ್ ಮುಕ್ತವಾದೀತು ಎಂಬ ಭಯದಲ್ಲಿ ರಾಹುಲ್ ಗಾಂಧಿ ಬಾಲಿಶ ಹೇಳಿಕೆ ನೀಡುತ್ತಿದ್ದಾರೆ" ಎಂದು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
ಮೇ.12 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಯ ಸಲುವಾಗಿ ಕರ್ನಾಟಕ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಇಂದು ಕರಾವಳಿ ಪ್ರವಾಸ ನಡೆಸುತ್ತಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆಯನ್ನೂ ಬಿಡುಗಡೆ ಮಾಡಿದ್ದಾರೆ. ಆದರೆ ಮಾತಿಗೆ ಮುನ್ನ ಪ್ರಧಾನಿ ನರೇಂದ್ರ ಮೋದಿಯವರನ್ನೂ, ಬಿಎಸ್ ವೈ ಅವರನ್ನೂ ಹಳಿಯುತ್ತಿರುವ ರಾಹುಲ್ ಅವರಿಗೆ ಬಿಎಸ್ ವೈ ಟ್ವಿಟ್ಟರ್ ನಲ್ಲೇ ತಪರಾಕಿ ಭಾರಿಸಿದ್ದಾರೆ.
ತಮ್ಮನ್ನು ಭ್ರಷ್ಟ ಮುಖ್ಯಮಂತ್ರಿ ಎಂದು ಹೋದಲ್ಲೆಲ್ಲ ದೂರುವ ರಾಹುಲ್ ಗಾಂಧಿ ತಮ್ಮ ಅಪ್ರಬುದ್ಧ ವರ್ತನೆಯನ್ನು ಸಾಬೀತುಪಡಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಕುರಿತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾಡಿರುವ ಸರಣಿ ಟ್ವೀಟ್ ಗಳು ಇಲ್ಲಿವೆ.

ಅಪ್ರಬುದ್ಧತೆ ಸಾಬೀತುಪಡಿಸುತ್ತಿರುವ ರಾಹುಲ್
"ರಾಹುಲ್ ಗಾಂಧಿಯವರು ತಮ್ಮ ಅಪ್ರಬುದ್ಧತೆಯನ್ನು ಪದೇಪದೆ ಸಾಬೀತು ಪಡಿಸುತ್ತಲೇ ಇದ್ದಾರೆ. ಬೇರೆ ರಾಜ್ಯಗಳಂತೆ ಕರ್ನಾಟಕವೂ ಕಾಂಗ್ರೆಸ್ ಮುಕ್ತವಾಗುವ ಭಯದಲ್ಲಿರುವ ಅವರು ಪೂರ್ವಾಪರ ತಿಳಿಯದೇ ಬಾಲಿಶವಾಗಿ ಹೇಳಿಕೆ ನೀಡಿದ್ದಾರೆ. ಜಾಮೀನಿನ ಮೇಲೆ ಹೊರಗಿರುವ ಅವರು ನನ್ನ ವಿರುದ್ಧ ಮನಬಂದಂತೆ ಮಾತನಾಡುತ್ತಿರುವುದು ವಿಪರ್ಯಾಸವೇ ಸರಿ."
-ಬಿ.ಎಸ್.ಯಡಿಯೂರಪ್ಪ

ಯಾರೋ ಬರೆದುಕೊಟ್ಟಿದ್ದನ್ನು ಓದುವ ರಾಹುಲ್
"ರಾಜಕೀಯದ ಬಗ್ಗೆ ಏನೂ ತಿಳಿಯದೇ, ಯಾರೋ ಬರೆದುಕೊಟ್ಟಿದ್ದನ್ನು ಓದುವ ರಾಹುಲ್ ಮಾತುಗಳನ್ನು ಜನರು ಗಂಭೀರವಾಗಿ ಸ್ವೀಕರಿಸುವುದಿಲ್ಲ. ತಾವು ಮಾಡುವ ಸುಳ್ಳು ಆರೋಪಗಳನ್ನು ಕರ್ನಾಟಕದ ಜನ ನಂಬುತ್ತಾರೆಂಬ ಭ್ರಮೆಯಿಂದ ಅವರು ಹೊರಬರಲಿ. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರುವ ಪ್ರಜ್ಞಾವಂತರು ಕಾಂಗ್ರೆಸ್‌ಗೆ ಈ ಸಲ ತಕ್ಕ ಪಾಠ ಕಲಿಸುವುದು ನಿಶ್ಚಿತ."
-ಬಿ.ಎಸ್.ಯಡಿಯೂರಪ್ಪ

ಕಾಂಗ್ರೆಸ್ ದುರಾಡಳಿತವನ್ನು ಜನ ಮರೆಯೋಲ್ಲ
"ತಮ್ಮ ಹುಳುಕನ್ನು ಮುಚ್ಚಿಡಲು ಇನ್ನೊಬ್ಬರತ್ತ ಬೆಟ್ಟು ತೋರಿಸುವ ಕಾಂಗ್ರೆಸ್ ನಾಯಕರ ಚಾಳಿಯನ್ನೇ ರಾಹುಲ್ ಗಾಂಧಿಯವರೂ ಅನುಸರಿಸುತ್ತಿದ್ದಾರೆ. ರಾಜ್ಯ ಸರಕಾರದ ವೈಫಲ್ಯಗಳನ್ನು ಮುಚ್ಚಿಡಲು ನ್ಯಾಯಾಲಯ ಇತ್ಯರ್ಥಗೊಳಿಸಿದ ವಿಚಾರವನ್ನು ಕೆದಕುತ್ತಿದ್ದಾರೆ. ರಾಹುಲ್ ಗಾಂಧಿಯವರು ಏನೇ ಮಾಡಿದರೂ ಕಾಂಗ್ರೆಸ್‌ನ ದುರಾಡಳಿತವನ್ನು ನಮ್ಮ ಜನ ಮರೆಯುವುದಿಲ್ಲ".
-ಬಿ.ಎಸ್.ಯಡಿಯೂರಪ್ಪ

ನ್ಯಾಯಾಲಯಕ್ಕೆ ಅಗೌರವ
"ನ್ಯಾಯಾಲಯವೇ ನನ್ನನ್ನು ದೋಷಮುಕ್ತಗೊಳಿಸಿದ್ದರೂ, ಸುಳ್ಳು ಮಾಹಿತಿಯೊಂದಿಗೆ ಹಗುರವಾಗಿ ಮಾತನಾಡುವುದು ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರಿಗೆ ಗೌರವ ತರುವಂಥದ್ದಲ್ಲ. ಅದು ನ್ಯಾಯಾಲಯಕ್ಕೆ ಅಗೌರವ ತೋರಿದಂತಾಗುತ್ತದೆ ಎಂದು ರಾಹುಲ್ ಅರ್ಥ ಮಾಡಿಕೊಳ್ಳಲಿ. ಕಾಂಗ್ರೆಸ್‌ನ ಹಿರಿಯ ಮುಖಂಡರು ತಮ್ಮ ಅಪ್ರಬುದ್ಧ ಅಧ್ಯಕ್ಷರಿಗೆ ಈ ಕುರಿತು ಪಾಠ ಮಾಡಬೇಕಿದೆ."
-ಬಿ.ಎಸ್.ಯಡಿಯೂರಪ್ಪ












Click it and Unblock the Notifications