ರೆಡ್ಡಿ ಸಹೋದರರಿಂದ ದೂರವಿರಲು ಬಳ್ಳಾರಿ ಪ್ರವಾಸ ರದ್ದುಗೊಳಿಸಿದರೆ ಶಾ?
ಬೆಂಗಳೂರು, ಏಪ್ರಿಲ್ 28: ಗಣಿ ಹಗರಣದ ಆರೋಪಿಯಾಗಿರುವ ಜನಾರ್ದನ ರೆಡ್ಡಿಯೊಂದಿಗೆ ವೇದಿಕೆ ಹಂಚಿಕೊಳ್ಳುವುದನ್ನು ತಪ್ಪಿಸಿಕೊಳ್ಳುವುದಕ್ಕಾಗಿಯೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬಳ್ಳಾರಿ ಪ್ರವಾಸವನ್ನು ರದ್ದುಗೊಳಿಸಿದರಾ? ಪ್ರಧಾನಿ ನರೇಂದ್ರ ಮೋದಿಯವರೂ ಕರ್ನಾಟಕದಲ್ಲಿ ನಡೆಸಲಿರುವ ಪ್ರಚಾರ ಕಾರ್ಯಕ್ರಮದಲ್ಲಿ ಬಳ್ಳಾರಿ ಪ್ರವಾಸವನ್ನು ರದ್ದುಗೊಳಿಸಲಿದ್ದಾರಾ?
ರೆಡ್ಡಿ ಸಹೋದರರಿಗೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಲು ಇಷ್ಟವಿಲ್ಲದಿದ್ದರೂ, ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಹಠಕ್ಕೆ ಕಟ್ಟುಬಿದ್ದು ಹೈಕಮಾಂಡ್ ಟಿಕೆಟ್ ನೀಡಿದೆ ಎಂಬ ಕುರಿತು ಈಗಾಗಲೇ ಚರ್ಚೆಯಾಗಿದೆ.
ಬಳ್ಳಾರಿ ಭಾಗದಲ್ಲಿ ರೆಡ್ಡಿ ಸಹೋದದರದೇ ಸಾಮ್ರಾಜ್ಯವಾಗಿರುವುದರಿಂದ ಅವರಿಗೆ ಟಿಕೆಟ್ ನೀಡದೆ ಇದ್ದಲ್ಲಿ ನಷ್ಟವಾಗುವುದು ಬಿಜೆಪಿಗೇ ಎಂಬುದು ಯಡಿಯೂರಪ್ಪ ಆತಂಕ. ಈ ಎಲ್ಲಾ ಕಾರಣದಿಂದ ಮತ್ತೊಮ್ಮೆ ಬಳ್ಳಾರಿಯಲ್ಲಿ ರೆಡ್ಡಿ ಹವಾ ಎದ್ದಿದೆ. ಆದರೆ ಬಿಜೆಪಿ ರಾಷ್ಟ್ರೀಯ ನಾಯಕರಿಗೆ ಇದು ಇರಿಸುಮುರಿಸುಂಟು ಮಾಡಿದೆಯಾ? ನಿನ್ನೆ ಅಮಿತ್ ಶಾ ಬಳ್ಳಾರಿ ಪ್ರವಾಸ ರದ್ದು ಮಾಡಿದ್ದು ಈ ಎಲ್ಲಾ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.

ಬಳ್ಳಾರಿ ಪ್ರವಾಸ ದಿಢೀರ್ ರದ್ದು
ಎಲ್ಲವೂ ಸರಿ ಇದ್ದಿದ್ದರೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನನ್ನೆ(ಏ.27) ಬಳ್ಳಾರಿ ಜಿಲ್ಲೆಯಲ್ಲಿ ಪ್ರಚಾರ ಸಭೆ ನಡೆಸಬೇಕಿತ್ತು. ಆದರೆ ಅವರು ತಮ್ಮ ಈ ಕಾರ್ಯಕ್ರಮವನ್ನು ಏಕಾಏಕಿ ರದ್ದುಮಾಡಿದ್ದಾರೆ. ರೆಡ್ಡಿ ಸಹೋದರರನ್ನು ದೂರವಿಡಿ ಎಂದು ಮೊದಲಿನಿಂದಲೂ ರಾಜ್ಯ ಬಿಜೆಪಿ ನಾಯಕರಿಗೆ ಹೇಳುತ್ತಲೇ ಇರುವ ಅಮಿತ್ ಶಾ, ಅವರೊಂದಿಗೆ ವೇದಿಕೆ ಹಂಚಿಕೊಳ್ಳಲು ಇಷ್ಟವಿಲ್ಲದ ಕಾರಣ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರಾ ಎಂಬುದು ಈಗಿರುವ ಅನುಮಾನ.

ಮೋದಿ ಕಾರ್ಯಕ್ರಮವೂ ರದ್ದು?
ಮೇ 12 ರಂದು ಕರ್ನಾಟಕದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಮೇ 1 ರಿಂದ ಪ್ರಚಾರ ನಡೆಸಲಿರುವ ಪ್ರಧಾನಿ ನರೇಂದ್ರ ಮೋದಿ ಸುಮಾರು 15-20 ಸಾರ್ವಜನಿಕ ಸಭೆಗಳಲ್ಲಿ ಭಾಗಿಯಾಗಲಿದ್ದಾರೆ. ಆದರೆ ಅವರು ಬಳ್ಳಾರಿಗೆ ಭೇಟಿ ನೀಡುವುದು ಅನುಮಾನ ಎಂಬುದು ಕೆಲವು ಮೂಲಗಳ ಮಾಹಿತಿ. ರೆಡ್ಡಿ ಸಹೋದರರೊಡನೆ ವೇದಿಕೆ ಹಂಚಿಕೊಳ್ಳಲು ಇಷ್ಟವಿಲ್ಲದ ಅವರು ತಮ್ಮ ಬಳ್ಳಾರಿ ಭೇಟಿಯನ್ನು ರದ್ದುಗೊಳಿಸಬಹುದು ಎನ್ನಲಾಗುತ್ತಿದೆ.

ಹೈಕಮಾಂಡಿಗೆ ಗೊತ್ತಿಲ್ಲದೆ ಟಿಕೆಟ್ ಸಿಕ್ಕಿತೇ?
ಇಷ್ಟೇಲ್ಲ ಇರಿಸುಮುರಿಸು ಅನುಭವಿಸುವುದಾದರೆ ರೆಡ್ಡಿ ಸಹೋದರರಿಗೆ ಟಿಕೆಟ್ ನೀಡುವ ಅಗತ್ಯ ಏನಿತ್ತು? ಎಂಬುದು ಈಗಿರುವ ಪ್ರಶ್ನೆ. ಬಿಜೆಪಿಯಲ್ಲಿ ರಾಜ್ಯದ ನಾಯಕರು ಎಷ್ಟೇ ಹಠ ಮಾಡಿದರೂ ಕೊನೆಗೆ ನಡೆಯುವುದು ಅಮಿತ್ ಶಾ ಮಾತೇ ಎಂಬುದು ಯಾರಿಗೂ ಗೊತ್ತಿಲ್ಲದ ವಿಷಯವೇನಲ್ಲ. ಹೀಗಿರುವಾಗ ಗೆಲ್ಲುವ ಅಭ್ಯರ್ಥಿಗಳು ಎಂಬ ಕಾರಣಕ್ಕೆ ಅವರಿಗೆ ಟಿಕೆಟ್ ನೀಡಿ, ಈಗ ಟೀಕೆಗಳಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಮೋದಿ, ಶಾ ಈ ತಂತ್ರ ಉಪಯೋಗಿಸುತ್ತಿದ್ದಾರಾ ಎಂಬುದೂ ಜನರ ಅನುಮಾನ!

ಬಿಜೆಪಿಗರಲ್ಲೇ ಅಸಮಾಧಾನ
ಜನಾರ್ದನ ರೆಡ್ಡಿ ಸಹೋದರರಾದ ಕರುಣಾಕರ ರೆಡ್ಡಿ ಮತ್ತು ಸೋಮಶೇಖರ ರೆಡ್ಡಿ ಅವರಿಗೆ ಕ್ರಮವಾಗಿ ಚಿತ್ರದುರ್ಗ ಜಿಲ್ಲೆಯ ಹರಪನಹಳ್ಳಿಯಿಂದ ಮತ್ತು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಿದೆ. ಅಷ್ಟೇ ಅಲ್ಲ, ರೆಡ್ಡಿ ಆಪ್ತ ಶ್ರೀರಾಮುಲು ಅವರಿಗೆ ಚಿತ್ರದುರ್ಗದ ಮೊಣಕಾಲ್ಮೂರು ಮತ್ತು ಬಾಗಲಕೋಟೆಯ ಬಾದಾಮಿಯಿಂದ ಟಿಕೆಟ್ ನೀಡಲಾಗಿದೆ. ಬಹುಕೋಟಿ ಭ್ರಷ್ಟಾಚಾರದ ಆರೋಪ ಹೊತ್ತಿರುವವರಿಗೆ ಬಿಜೆಪಿ ಟಿಕೆಟ್ ನೀಡಿದ್ದು, ಸ್ವತಃ ಬಿಜೆಪಿ ಅಭಿಮಾನಿಗಳಲ್ಲೇ ಅಸಮಾದಧಾನವನ್ನುಂಟುಮಾಡಿದೆ. ಅದೂ ಅಲ್ಲದೆ, ಕಾಂಗ್ರೆಸ್ಸಿಗರೂ ಇದನ್ನೇ ಇಟ್ಟುಕೊಂಡು ಬಿಜೆಪಿಯನ್ನ ನಿರಂತರವಾಗಿ ಹಳಿಯುತ್ತಿರುವುದು ಸಹ ಬಿಜೆಪಿಗೆ ತಲೆನೋವಾಗಿದೆ.

ನಿಷ್ಠುರ ಕಟ್ಟಿಕೊಳ್ಳಲು ಸಿದ್ಧವಿಲ್ಲದ ಯಡಿಯೂರಪ್ಪ
'ಟಿಕೆಟ್ ನೀಡಿದ್ದಾಯ್ತು. ಆದರೆ ಜನಾರ್ದನ ರೆಡ್ಡಿ ಪ್ರಚಾರಕ್ಕಂತೂ ಬರುವುದು ಬೇಡ' ಎಂದರೆ, ಅದಕ್ಕೂ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಒಪ್ಪುತ್ತಿಲ್ಲ. ಬಳ್ಳಾರಿ ಭಾಗದಲ್ಲಿ ಜನಾರ್ದನ ರೆಡ್ಡಿಗೆ ಸಾಕಷ್ಟು ಅಭಿಮಾನಿಗಳು ಇರುವುದನ್ನು ಬಲ್ಲ ಯಡಿಯೂರಪ್ಪ ಕಡ್ಡಿ ಮುರಿದಂತೆ ಜನಾರ್ದನ ರೆಡ್ಡಿಯವರಿಗೆ 'ಪ್ರಚಾರಕ್ಕೆ ಬರುವುದು ಬೇಡ' ಎಂದು ಹೇಳಿ ನಿಷ್ಠುರ ಕಟ್ಟಿಕೊಳ್ಳುವುದಕ್ಕೂ ಸಿದ್ಧವಿಲ್ಲ. ಈ ಕುರಿತು ಹೈಕಮಾಂಡ್ ಹಲವು ಬಾರಿ ಎಚ್ಚರಿಕೆ ನೀಡಿರುವ ಕಾರಣಕ್ಕೆ ಸದ್ಯಕ್ಕೆ ಯಡಿಯೂರಪ್ಪ ಸುಮ್ಮನಿದ್ದಾರೆ. ಶ್ರೀರಾಮುಲು ಪರ ರೆಡ್ಡಿ ಪ್ರಚಾರ ಮಾಡುತ್ತಿರುವುದು ಅವರ ವೈಯಕ್ತಿಕ ಅಷ್ಟೆ. ಪಕ್ಷ ಅವರಿಂದ ಪ್ರಚಾರ ಅಪೇಕ್ಷಿಸಿಲ್ಲ ಎಂದು ಈಗಾಗಲೇ ಕರ್ನಾಟಕ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ. ಒಟ್ಟಿನಲ್ಲಿ ಬಿಟ್ಟು ಕಳಿಸಲೂ ಆಗದೆ, ಇಟ್ಟುಕೊಳ್ಳುವುದಕ್ಕೂ ರೆಡ್ಡಿ ಸಹೋದರರು ಬಿಜೆಪಿಗೆ ಬಹುದೊಡ್ಡ ತಲೆನೋವಾಗಿದ್ದಾರೆ!












Click it and Unblock the Notifications