R Ashok On Ramya: ಶೆಟ್ಟರ್, ಸವದಿಗೇ ಕೊಟ್ಟಿಲ್ಲ, ಈ ನಟಿಗೆ ಕೊಡ್ತೀವಾ?; ಆರ್. ಅಶೋಕ್ ತಿರುಗೇಟು
2023ರ ಕರ್ನಾಟಕ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಮತದಾರರ ಮನವೊಲಿಕೆಗೆ ಅಭ್ಯರ್ಥಿಗಳು ಕಸರತ್ತು ನಡೆಸುತ್ತಿರುವುದು ಒಂದು ಕಡೆಯಾದರೆ, ಮತ್ತೊಂದೆಡೆ ರಾಜಕೀಯ ಪಕ್ಷಗಳ ನಾಯಕರ ಆರೋಪ ಮತ್ತು ಪ್ರತ್ಯಾರೋಪವೂ ಜೋರಾಗಿದೆ.
ಭಾನುವಾರ ಬೆಂಗಳೂರಿಲ್ಲಿ ಮಾತನಾಡಿದ ಪದ್ಮನಾಭನಗರ ಬಿಜೆಪಿ ಅಭ್ಯರ್ಥಿ ಆರ್. ಅಶೋಕ್, "ನಟಿ ರಮ್ಯಾರನ್ನು ಕರೆಯುವಷ್ಟು ಬಿಜೆಪಿ ಬರಗೆಟ್ಟಿಲ್ಲ. ನಮ್ಮ ಪಕ್ಷದಿಂದ ರಮ್ಯಾ ಅವರಿಗೆ ಯಾವುದೇ ಆಹ್ವಾನ ನೀಡಿಲ್ಲ, ಕೇವಲ ಪ್ರಚಾರಕ್ಕಾಗಿ ಹೇಳಿಕೆ ನೀಡಿದ್ದಾರೆ," ಎಂದು ತಿರುಗೇಟು ನೀಡಿದರು.

"ಮಾಜಿ ಸಿಎಂ ಆಗಿದ್ದ ಜಗದೀಶ್ ಶೆಟ್ಟರ್ ಮತ್ತು ಮಾಜಿ ಡಿಸಿಎಂ ಆಗಿದ್ದ ಲಕ್ಷ್ಮಣ ಸವದಿ ಅವರಿಗೇ ನಾವು ಟಿಕೆಟ್ ನಿರಾಕರಿಸಿದ್ದೇವೆ. ಇನ್ನು ಈ ರಮ್ಯಾಗೆ ನೀಡುತ್ತೇವಾ?," ಎಂದು ಆರ್.ಅಶೋಕ್ ಪ್ರಶ್ನಿಸಿದರು.
ಶನಿವಾರ ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ನಟಿ ರಮ್ಯಾ, "ನನಗೆ ಬಿಜೆಪಿ ಪಕ್ಷದಿಂದಲೂ ಆಫರ್ ಬಂದಿತ್ತು. ಬಿಜೆಪಿಯ ಟಾಪ್ ಹಂತದ ನಾಯಕರೇ ನೇರವಾಗಿ ನನ್ನ ಬಳಿ ಮಾತನಾಡಿ ಪಕ್ಷಕ್ಕೆ ಆಹ್ವಾನಿಸಿದ್ದರು. ಸಚಿವೆ ಮಾಡುವ ಆಫರ್ ಅನ್ನು ಸಹ ನೀಡಿದ್ದರು,'' ಎಂದು ರಮ್ಯಾ ಹೇಳಿಕೆ ನೀಡಿದ್ದು, ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.
ಬಿಜೆಪಿಯಿಂದ ನನಗೆ ಆಫರ್ ಬಂದಿತ್ತು ಎಂಬ ರಮ್ಯಾ ಹೇಳಿಕೆಗೆ ಪ್ರತಿಕ್ರಿಯಿಸಿದ ಆರ್. ಅಶೋಕ್, "ಚುನಾವಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ರಮ್ಯಾ ರಾಜಕೀಯ ಹೇಳಿಕೆ ಕೊಟ್ಟಿದ್ದಾರೆ. ಚುನಾವಣೆ ವೇಳೆ ಎಲ್ಲರೂ ಹೀರೋ ಆಗಲು ಪ್ರಯತ್ನಿಸುತ್ತಾರೆ. ಕಾಂಗ್ರೆಸ್‌ಗೆ ಸಹಾಯವಾಗಲಿ ಅಂತಾ ರಮ್ಯಾ ಈ ರೀತಿ ಮಾತನಾಡಿದ್ದಾರೆ," ಎಂದು ಟಾಂಗ್ ನೀಡಿದರು.

"ರಮ್ಯಾ ಯಾವತ್ತಿದ್ದರೂ ಕಾಂಗ್ರೆಸ್ ಪಕ್ಷದವರು. ಅವರಿಗೆ ಬಿಜೆಪಿಯಿಂದ ಯಾವುದೇ ಆಹ್ವಾನ ಕೊಟ್ಟಿಲ್ಲ ಮತ್ತು ಯಾವ ಸಚಿವೆ ಸ್ಥಾನದ ಆಫರ್ ಸಹ ನೀಡಿಲ್ಲ. ಅವರು ಸಿನಿಮಾ ಕ್ಷೇತ್ರದಲ್ಲಿದ್ದಾರೆ, ಅಲ್ಲೇ ಸಿನಿಮಾ ಮಾಡಿಕೊಂಡು ಇರಲಿ," ಎಂದು ಆರ್. ಅಶೋಕ್ ತಿರುಗೇಟು ನೀಡಿದರು.
ಸಿದ್ದರಾಮಯ್ಯ ವಿರುದ್ಧ ಆರ್. ಅಶೋಕ್ ವಾಗ್ದಾಳಿ
ಲಿಂಗಾಯತ ಸಿಎಂ ಭ್ರಷ್ಟರು ಎಂಬ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಿದ ಆರ್. ಅಶೋಕ್, ಸಿದ್ದರಾಮಯ್ಯನವರ ಹೇಳಿಕೆಯನ್ನು ನಾನು ವಿರೋಧಿಸುತ್ತೇನೆ. ಹಲವು ಸ್ವಾಮೀಜಿಗಳು ಸಹ ಸಿದ್ದರಾಮಯ್ಯ ಹೇಳಿಕೆಯನ್ನು ಖಂಡಿಸಿದ್ದಾರೆ. ಇದು ಲಿಂಗಾಯತ ಸಮುದಾಯ ವಿರೋಧಿ ಹೇಳಿಕೆಯಾಗಿದೆ. ಚುನಾವಣೆಯಲ್ಲಿ ಲಿಂಗಾಯತರ ಶಾಪ ಕಾಂಗ್ರೆಸ್‌ಗೆ ತಟ್ಟಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ವನಾಶವಾಗಲಿದೆ," ಎಂದು ನಡೆಸಿದರು.
ಈ ಹಿಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮೋದಿ ಹೆಸರಿನವರೆಲ್ಲರೂ ಕಳ್ಳರು ಎಂದಿದ್ದಕ್ಕೆ, ಸಂಸದ ಸ್ಥಾನದಿಂದ ಅನರ್ಹರಾಗಿ, ಸರ್ಕಾರಿ ಮನೆಯನ್ನೂ ಖಾಲಿ ಮಾಡಿ ಬೀದಿಪಾಲಾಗಿದ್ದಾರೆ. ಅದೇ ರೀತಿ ಲಿಂಗಾಯತ ಸಮುದಾಯಕ್ಕೆ ಸಿದ್ದರಾಮಯ್ಯ ಅವಮಾನ ಮಾಡಿದ್ದಾರೆ.
"ಈ ಹಿಂದೆ ವೀರೇಂದ್ರ ಪಾಟೀಲರಿಗೆ ಅವಮಾನ ಮಾಡಿದಾಗ, ಲಿಂಗಾಯತ ಸಮುದಾಯ ಕಾಂಗ್ರೆಸ್ ಪಕ್ಷವನ್ನೇ ದೂರವಿಟ್ಟಿದ್ದಾರೆ. ಆದರೂ ಕಾಂಗ್ರೆಸ್‌ನವರಿಗೆ ಬುದ್ದಿ ಬಂದಿಲ್ಲ. ಲಿಂಗಾಯತ ಸಮುದಾಯದ ಶಾಪ ಸಿದ್ದರಾಮಯ್ಯಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ತಟ್ಟಲಿದೆ," ಎಂದು ಕಿಡಿಕಾರಿದರು.
ಸಿನಿಮಾ ತಾರೆಯರು ಹೇಳಿದ ಪಕ್ಷಕ್ಕೆ ಜನರು ಮತ ಹಾಕಲ್ಲ ಎಂದ ರಮ್ಯಾ
ಇನ್ನು ರಮ್ಯಾ ಅವರು "ಸಿನಿಮಾ ನಟರನ್ನು ಚುನಾವಣಾ ಪ್ರಚಾರಕ್ಕೆ ಕರೆ ತಂದರೆ ಜನ ಸೇರುತ್ತಾರೆ. ಜನರನ್ನು ಸೇರಿಸಲು ಹಣ ನೀಡಬೇಕಾಗುತ್ತದೆ, ಅದರ ಬದಲು ಸ್ಟಾರ್ ನಟ-ನಟಿಯರನ್ನು ಕರೆತಂದರೆ ಜನರು ತಾವಾಗಿಯೇ ಬರುತ್ತಾರೆ. ನಟ ಅಥವಾ ನಟಿಯರು ಹೇಳಿದ ಮಾತ್ರಕ್ಕೆ ಜನರು ಮತ ಹಾಕುವುದಿಲ್ಲ. ಜನ ಸೇರಿಸಲು ಮಾತ್ರ ಸಿನಿಮಾ ತಾರೆಯರು ನೆರವಾಗುತ್ತಾರೆ," ಎಂದು ಹೇಳಿದ್ದರು.
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದರೆ, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಮಧ್ಯೆ ನಾಮಪತ್ರ ವಾಪಸ್ ಪಡೆಯಲು ಏಪ್ರಿಲ್ 24 ಕೊನೆಯ ದಿನಾವಾಗಿದೆ.












Click it and Unblock the Notifications