Bajrang Dal: ನಾವು ಕೂಡ ಹನುಮಂತನ ಭಕ್ತರು; ಇದರಿಂದ ಯಾವುದೇ ಡ್ಯಾಮೇಜ್ ಆಗಲ್ಲ: ಡಿ ಕೆ ಶಿವಕುಮಾರ್
ಬೆಂಗಳೂರು,ಮೇ4: ನಾವು ಕೂಡ ಹನುಮಂತನ ಭಕ್ತರು. ನಾವು ದಿನನಿತ್ಯ ಹನುಮ ಚಾಲೀಸ ಪಠಣೆ ಮಾಡುತ್ತೇವೆ. ಮೋದಿ ಅವರು ನಮ್ಮ ವಿರುದ್ಧ ಅನಗತ್ಯ ಟೀಕೆ ಮಾಡುವುದನ್ನು ಬಿಟ್ಟು, ರಾಜ್ಯಕ್ಕೆ ಡಬಲ್ ಇಂಜಿನ ಸರ್ಕಾರದ ಕೊಡುಗೆಗಳೇನು ಎಂಬುದನ್ನು ಹೇಳಲಿ ಎಂದು ಡಿ.ಕೆ. ಶಿವಕುಮಾರ್ ಕಿಡಿಕಾರಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಮ್ಮ ವಿರುದ್ಧ ಟೀಕೆ ಮಾಡುವುದನ್ನು ನಿಲ್ಲಿಸಿ ರಾಜ್ಯಕ್ಕೆ ಅವರು ನೀಡಿರುವ ಕೊಡುಗೆಗಳನ್ನು ಹೇಳಲಿ. ಮೇಕೆದಾಟು, ಮಹದಾಯಿ ಯೋಜನೆ ಆರಂಭಿಸಲು ಏನಾದರೂ ಕ್ರಮ ಕೈಗೊಂಡಿದ್ದಾರಾ? ಬಿಜೆಪಿಯ ತಾಣ ಎಂದು ಹೇಳಿಕೊಳ್ಳುವ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿಗೆ ಏನಾದರೂ ಕ್ರಮ ಕೈಗೊಂಡಿದ್ದಾರಾ? ಜಾಗತಿಕ ಬಂಡವಾಳ ಹೂಡಿಕೆಯಲ್ಲಿ ಯಾರಾದರೂ ಈ ಭಾಗದಲ್ಲಿ ಬಂಡವಾಳ ಹೂಡಿಕೆ ಮಾಡಿದರಾ? ಎಂದು ಪ್ರಶ್ನಿಸಿದರು.

ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡಿದ್ದಾರಾ? ಅವರು ಕೊಟ್ಟ ಭರವಸೆಗಳೆಲ್ಲವೂ ಹುಸಿಯಾಗಿವೆ. ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದರು. ಈಗ ಅವರದೇ ಸರ್ಕಾರ ಭ್ರಷ್ಟಾಚಾರ ಮಾಡಿದ್ದು, ಈಗ ಅದರ ಬಗ್ಗೆ ಮಾತನಾಡುತ್ತಿದ್ದಾರಾ? ಭ್ರಷ್ಟಾಚಾರ ನಿಯಂತ್ರಿಸಲು ಕ್ರಮ ಕೈಗೊಂಡಿದ್ದಾರಾ? ಅವರದೇ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ ಶಾಸಕರ ವಿರುದ್ಧವೂ ಕ್ರಮ ಕೈಗೊಳ್ಳಲಿಲ್ಲ.
ಬಿಜೆಪಿ ಅವರಿಗೆ ನಮ್ಮ ಗ್ಯಾರಂಟಿ ಯೋಜನೆಗಳಿಂದ ಆತಂಕ ಎದುರಾಗಿದೆ. ರಾಜ್ಯದ ಜನರಿಗೆ 200 ಯುನಿಟ್ ಉಚಿತ, ಮನೆಯೊಡತಿಗೆ 2 ಸಾವಿರ ಖಚಿತ, ಅನ್ನಭಾಗ್ಯದಲ್ಲಿ 10 ಕೆ.ಜಿ ಅಕ್ಕಿ ನಿಶ್ಚಿತ. ಯುವಕರಿಗೆ ನಿರುದ್ಯೋಗ ಭತ್ಯೆ ಹಾಗೂ ಮಹಿಳೆಯರಿಗೆ ಸಾರ್ವಜನಿಕ ಬಸ್ ಗಳಲ್ಲಿ ಉಚಿತ ಪ್ರಯಾಣ ಜಾರಿ ಮಾಡುತ್ತೇವೆ. ಇವುಗಳನ್ನು ಅರಗಿಸಿಕೊಳ್ಳಲಾಗದೆ ಒಂದಲ್ಲಾ ಒಂದು ವಿಚಾರವಾಗಿ ಗೊಂದಲ ಮೂಡಿಸುತ್ತಿದ್ದಾರೆ. ಅವರು ಏನೇ ಮಾಡಿದರೂ ಕಾಂಗ್ರೆಸ್ ಪಕ್ಷ 141 ಸ್ಥಾನಗಳಲ್ಲಿ ಗೆಲವು ಸಾಧಿಸಿ ಅಧಿಕಾರಕ್ಕೆ ಬಂದೇ ಬರಲಿದೆ' ಎಂದು ತಿರುಗೇಟು ನೀಡಿದರು.
ಗುರುವಾರ ಸಂಜೆ ಹನುಮಾನ್ ಚಾಲೀಸ ಪಠಣೆಗೆ ಕೆಲವು ಸಂಘಟನೆಗಳ ಕರೆ ನೀಡಿರುವ ವಿಚಾರವಾಗಿ ಮಾತನಾಡಿ, ನಾವು ದಿನನಿತ್ಯ ಹನುಮ ಚಾಲೀಸ ಪಠಣೆ ಮಾಡುತ್ತೇವೆ. ಅವರು ಮಾತ್ರ ಹನುಮನ ಭಕ್ತರೇ? ನಾವು ಹನುಮನ ಭಕ್ತರಲ್ಲವೇ? ಹಿಂದೆ ಇದ್ದ ಆರ್ ಎಸ್ಎಸ್ ಬೇರೆ ಈಗಿರುವ ಆರ್ ಎಸ್ಎಸ್ ಬೇರೆ. ನಾವು ಸಮಾಜದಲ್ಲಿ ಶಾಂತಿ ಭಂಗ ಮಾಡುವ ಸಂಘಟನೆಗಳ ಬಗ್ಗೆ ಮಾತನಾಡಿದ್ದು, ಯಾವ ಸಂಘಟನೆಗಳು ಸಮಾಜದ ಶಾಂತಿಗೆ ಭಂಗ ಮಾಡುತ್ತವೆಯೋ ಅಂತಹ ಸಂಘಟನೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದೇವೆ ಎಂದರು.

ಬಜರಂಗದಳ ಬ್ಯಾನ್ ಪ್ರಣಾಳಿಕೆ ಹಿಂಪಡೆಯುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ,ಪ್ರಧಾನಮಂತ್ರಿಗಳು ಹೊಸ ಕಥೆ ಎಣೆಯಲು ಪ್ರಯತ್ನಿಸುತ್ತಿದ್ದಾರೆ. ಈ ಅಂಶದ ಬಗ್ಗೆ ನೀವು ಯಾಕೆ ಹೆದರುತ್ತೀರಿ? ಜನ ತೀರ್ಮಾನ ಮಾಡುತ್ತೀರಿ. ಕುಂಬಳಕಾಯಿ ಕಳ್ಳ ಎಂದರೆ ನೀವು ಯಾಕೆ ಹೆಗಲು ಮುಟ್ಟಿಕೊಳ್ಳುತ್ತೀರಿ? ಶಿವಮೊಗ್ಗದಲ್ಲಿ ಬಿಜೆಪಿಯಲ್ಲಿದ್ದ ಮಾಜಿ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಏನು ಹೇಳಿದರು? ಶಿವಮೊಗ್ಗದಲ್ಲಿ ಕೋಮು ಸಂಘರ್ಷವನ್ನು ತಡೆಯುತ್ತೇನೆ ಎಂದು ಬೋರ್ಡ್ ಹಾಕಿಕೊಂಡರು. ಶಿವಮೊಗ್ಗದಲ್ಲಿ ಈಶ್ವರಪ್ಪ ಅವರಿಗೆ ಯಾಕೆ ಟಿಕೆಟ್ ನೀಡಲಿಲ್ಲ?ಎಂದು ತಿಳಿಸಿದರು.
ಇದರಿಂದ ಯಾವುದೇ ಡ್ಯಾಮೇಜ್ ಆಗುವುದಿಲ್ಲ. ನಾನು ಹಿಂದು. ನಾನು ರಾಮ ಹಾಗೂ ಹನುಮಂತನ ಭಕ್ತ. ಇಂದು ನಮ್ಮ ಪಕ್ಷದ ಪರವಾಗಿ ಪ್ರಚಾರ ಮಾಡಲು ಅಂಬೇಡ್ಕರ್ ಅವರ ಮೊಮ್ಮಗ ಆನಂದ್ ರಾಜ್ ಅಂಬೇಡ್ಕರ್ ಅವರು ಆಗಮಿಸಿದ್ದಾರೆ. ಅವರನ್ನು ನಾವು ಸ್ವಾಗತಿಸುತ್ತೇವೆ. ಅವರು ನಮಗೆ ಶಕ್ತಿ ತುಂಬಲು ಬಂದಿದ್ದಾರೆ ಎಂದು ತಿಳಿಸಿದರು.












Click it and Unblock the Notifications