Karnataka Elections 2023: ಕುಮಾರಸ್ವಾಮಿಯನ್ನು ಎದುರಿಸಲು ಯೋಗೇಶ್ವರ್‌ಗೆ ಕಾಂಗ್ರೆಸ್ ಗಾಳ: ಜೆಡಿಎಸ್ ಸ್ಪೋಟಕ ಹೇಳಿಕೆ
ಬೆಂಗಳೂರು, ಮಾರ್ಚ್ 29: ಕರ್ನಾಟಕ ವಿಧಾನಸಭೆ ಚುನಾವಣೆಗೆ ( Karnataka Assembly Elections 2023 ) ದಿನಾಂಕಗಳು ಪ್ರಕಟಗೊಂಡಿವೆ. ಮೇ 10ರಂದು ಮತದಾನ ನಡೆಯಲಿದೆ. ಫಲಿತಾಂಶಗಳು ಮೇ 13ರಂದು ಹೊರಬೀಳಲಿವೆ ಎಂದು ಕೇಂದ್ರ ಚುನಾವಣಾ ಆಯೋಗ ( Election Commission of India ) ತಿಳಿಸಿದೆ. ಕಳೆದ ಚುನಾವಣೆಯಂತೆ ಈ ಚುನಾವಣೆಯಲ್ಲಿಯೂ ಬಿಜೆಪಿ, ( BJP ) ಕಾಂಗ್ರೆಸ್ ( Congress ) ಹಾಗೂ ಜೆಡಿಎಸ್ ( JDS ) ಪಕ್ಷಗಳು ತೀವ್ರ ಹಣಾಹಣಿಯಲ್ಲಿ ತೊಡಗಿವೆ.
ಬಿಜೆಪಿ ಎಂಎಲ್‌ಸಿ ಸಿಪಿ ಯೋಗೇಶ್ವರ್ ಅವರು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಹೇಳಿಕೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಬಿಜೆಪಿ ನಾಯಕರ ವಿರುದ್ದ ಕಿಡಿಕಾರಿದೆ.

ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಜೆಡಿಎಸ್, 'ಬಿಜೆಪಿ ಪಕ್ಷದ ನಾಲಾಯಕರು ಹೇಳುವ ಮಾತುಗಳನ್ನೆಲ್ಲಾ ಕಾಂಗ್ರೆಸ್ ಪಕ್ಷದ ನಾಯಕರು ಸತ್ಯ ಎಂದು ಒಪ್ಪುವುದಾದರೆ, ಕರ್ನಾಟಕ ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷದ ವಿರುದ್ಧ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ವಿರುದ್ಧ ಏನೆಲ್ಲಾ ಹೇಳಿದ್ದಾರೆ ಅನ್ನೋದನ್ನು ಕಾಂಗ್ರೆಸ್ ಪಕ್ಷ ಒಮ್ಮೆ ನೆನಪು ಮಾಡಿಕೊಳ್ಳಲಿ' ಎಂದು ಹೇಳಿದೆ.
'ಜಾತ್ಯತೀತ ಅನ್ನೋದನ್ನ ಸರಿಯಾಗಿ ಬರೆಯೋಕೂ ಬಾರದ ಈ ಅಧಮರಿಗೆ ಜಾತ್ಯತೀತೆಯ ಬಗ್ಗೆ ಮಾತನಾಡೋ ನೈತಿಕತೆ ಎಲ್ಲಿದೆ.? ಮುಸ್ಲಿಂಮರ ಮೀಸಲಾತಿಯನ್ನು ಬಿಜೆಪಿ ಪಕ್ಷ ಕಿತ್ತುಕೊಂಡರೂ ಸೊಲ್ಲೆತ್ತದ ನಿಮಗೆ ಈ ಬಾರಿ ಮುಸ್ಲಿಂಮರು ಸರಿಯಾಗಿ ಬುದ್ದಿ ಕಲಿಸುತ್ತಾರೆ' ಎಂದು ಜೆಡಿಎಸ್ ಟ್ವೀಟ್ ಮಾಡಿದೆ.
'ಇನ್ನೂ ಚುನಾವಣೆ ಘೋಷಣೆಯೇ ಆಗಿಲ್ಲ ಆದರೂ ನಿಮ್ಮ ಪಕ್ಷದ ನಾಯಕರು ಹೆಚ್ ಡಿ ಕುಮಾರಸ್ವಾಮಿ ಅವರ ಮನೆ ಬಾಗಿಲು ತಟ್ಟುತ್ತಿದ್ದಾರೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ, ಹೀಗಿರೋವಾಗ ನೀವು ಟ್ವಿಟರ್ ನಲ್ಲಿ ತೌಡು ಕುಟ್ಟಿದರೆ ಪುಡಿ ಸಹಾ ಉದುರುವುದಿಲ್ಲ' ಎಂದು ಟೀಕಿಸಿದೆ.

'ಕಾಂಗ್ರೆಸ್ ಶಾಸಕರನ್ನು ಬಿಜೆಪಿಗೆ ಗುಪ್ತವಾಗಿ ಕಳುಹಿಸಿ ಈಗ ಪುನಃ ವಾಪಸ್ ಕರೆಸಿಕೊಳ್ಳುತ್ತಿರುವ ನವರಂಗಿ ಸಿದ್ದಹಸ್ತರ ಆಟ ಇನ್ನು ಮುಂದೆ ರಾಜ್ಯದಲ್ಲಿ ನಡೆಯುವುದಿಲ್ಲ, ಕೋಲಾರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆ ಸಹಕಾರಿಯಾಗಿದ್ದು ಯಾವ ಬೀ ಟೀಂ ಎನ್ನುವುದನ್ನು ಹೇಳುವಿರಾ ಕಾಂಗಿಗಳೇ ? ' ಎಂದು ಜೆಡಿಎಸ್ ಪ್ರಶ್ನಿಸಿದೆ.
'ಎಚ್ ಡಿ ಕುಮಾರಸ್ವಾಮಿ ಅವರನ್ನು ಎದುರಿಸಲು ಮೆಗಾಸಿಟಿ ಯೋಗೀಶ್ವರನಿಗೆ ಗಾಳ ಹಾಕುತ್ತಿರುವ ನೀವು, ನಿಮ್ಮ ನಾಯಕರೇ ಕುತಂತ್ರದಿಂದ ಈ ಹೇಳಿಕೆಯನ್ನು ಯೋಗೀಶ್ವರ್ ಬಾಯಲ್ಲಿ ಹೇಳಿಸಿರೋದ್ರಲ್ಲಿ ಯಾವುದೇ ಅಚ್ಚರಿಯಿಲ್ಲ, ಇಂದೇ ಬರೆದಿಟ್ಟುಕೊಳ್ಳಿ ಈ ಬಾರಿ ಕನ್ನಡಿಗರ ಪರವಾದ ಜಾತ್ಯತೀತ ಸರ್ಕಾರ ರಚಿಸುವುದು ಜಾತ್ಯತೀತ ಜನತಾದಳವೇ ಹೊರತು ದೆಹಲಿ ಗುಲಾಮರಲ್ಲ' ಎಂದೂ ಜೆಡಿಎಸ್ ಕಿಡಿ ಕಾರಿದೆ.
ಜೆಡಿಎಸ್- ಬಿಜೆಪಿ ಮೈತ್ರಿ ಕುರಿತು ಕಾಂಗ್ರೆಸ್ ಟ್ವೀಟ್
'ಜೆಡಿಎಸ್, ಬಿಜೆಪಿಯ ಕಳ್ಳಾಟದ ಅಸಲಿ ಕತೆಯನ್ನು ಸಿಪಿ ಯೋಗೀಶ್ವರ್ ಬಿಚ್ಚಿಟ್ಟಿದ್ದಾರೆ. ಡಿಯರ್ ಬಿಜೆಪಿ, ಕದ್ದುಮುಚ್ಚಿ ಸಂಸಾರ ಮಾಡುವ ಬದಲು ನೇರವಾಗಿ ಸಂಸಾರ ಮಾಡುವ ಅಭ್ಯಾಸ ನಿಮಗೆ ಇಲ್ಲವೇಕೆ? ಬಿಜೆಪಿಯೊಂದಿಗೆ ಅನೈತಿಕ ಸಖ್ಯ ಹೊಂದಿರುವ ಎಚ್ ಡಿ ಕುಮಾರಸ್ವಾಮಿ ಅವರ 'ಜಾತ್ಯಾತೀತ'ವೇ ಜಾತಿಗೆಟ್ಟಿದೆ' ಎಂದು ಕರ್ನಾಟಕ ಕಾಂಗ್ರೆಸ್ ಘಟಕ ಟ್ವೀಟ್ ಮಾಡಿದೆ.

ಜೆಡಿಎಸ್- ಬಿಜೆಪಿ ಮೈತ್ರಿ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಅಚ್ಚರಿ ಪಡೆಬೇಕಿಲ್ಲ. ಜೆಡಿಎಸ್- ಬಿಜೆಪಿ ಮೈತ್ರಿ ಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ.












Click it and Unblock the Notifications