Karnataka Congress: ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೂ ಮುನ್ನ ತೀವ್ರಗೊಂಡ ಲಾಬಿ- ದೆಹಲಿಯಲ್ಲಿ ಬೀಡುಬಿಟ್ಟ ಆಕಾಂಕ್ಷಿಗಳು
ದೆಹಲಿಯಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಇದಕ್ಕೂ ಮುನ್ನ ರಾಜ್ಯ ಕಾಂಗ್ರೆಸ್ ಮುಖಂಡರು ಟಿಕೆಟ್‌ಗಾಗಿ ತೀವ್ರ ಲಾಬಿ ನಡೆಸುತ್ತಿದ್ದಾರೆ.
ಬೆಂಗಳೂರು, ಮಾರ್ಚ್ 17: ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕಾಂಗ್ರೆಸ್ಸಿನ ಕೇಂದ್ರ ಚುನಾವಣಾ ಸಮಿತಿಯು ಮಾರ್ಚ್ 17ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಭೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ. ಈ ಸಭೆಯಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಅಂತಿಮಗೊಳಿಸಲಾಗುತ್ತದೆ ಎಂದು ವರದಿಗಳಾಗಿವೆ. ಮೇ ತಿಂಗಳಲ್ಲಿ ನಡೆಯುವ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಇಂದೇ ಪ್ರಕಟಗೊಳ್ಳುವ ನಿರೀಕ್ಷೆಯೂ ಇದೆ.

ದೆಹಲಿಯಲ್ಲಿ ಕಾಂಗ್ರೆಸ್ ಮುಖಂಡರ ಲಾಬಿ
ದೆಹಲಿಯಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಇದಕ್ಕೂ ಮುನ್ನ ರಾಜ್ಯ ಕಾಂಗ್ರೆಸ್ ಮುಖಂಡರು ಟಿಕೆಟ್‌ಗಾಗಿ ತೀವ್ರ ಲಾಬಿ ನಡೆಸುತ್ತಿದ್ದಾರೆ. ಕಾಂಗ್ರೆಸ್ ಸುಮಾರು 50 ಕ್ಕೂ ಹೆಚ್ಚು ಮುಖಂಡರು ರಾಷ್ಟ್ರ ರಾಜಧಾನಿಯಲ್ಲಿಯೇ ಬೀಡು ಬಿಟ್ಟಿರುವ ಮಾಹಿತಿ ಲಭ್ಯವಾಗಿದೆ. ಕಾಂಗ್ರೆಸ್ಸಿನ ಕೇಂದ್ರ ಚುನಾವಣಾ ಸಮಿತಿಯ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ.

ಮಾರ್ಚ್ 20 ರಂದು ಬೆಳಗಾವಿಗೆ ರಾಹುಲ್
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾರ್ಚ್ 20 ರಂದು ಬೆಳಗಾವಿಗೆ ಭೇಟಿ ನೀಡಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಮಾರ್ಚ್ 9 ರಂದು ಮುಂಬರುವ ಚುನಾವಣೆಗೆ ತಯಾರಿಯ ಭಾಗವಾಗಿ ವಿಜಯಪುರ ಜಿಲ್ಲೆಯ ಕ್ಷೇತ್ರಗಳಿಗೆ ಟಿಕೆಟ್ ಹಂಚಿಕೆ ಕುರಿತು ಕಾಂಗ್ರೆಸ್ ಉನ್ನತ ನಾಯಕರು ಸಮಾಲೋಚನೆ ನಡೆಸಿದ್ದಾರೆ.

ವಿಜಯಪುರದಲ್ಲಿ ನಡೆದ ಸಭೆ
ವಿಜಯಪುರದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಪಕ್ಷದ ಚುನಾವಣಾ ಟಿಕೆಟ್ ಪರಿಶೀಲನಾ ಸಮಿತಿ ಅಧ್ಯಕ್ಷ ಮೋಹನ್ ಪ್ರಕಾಶ್, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಡಿಕೆ ಶಿವಕುಮಾರ್ ಭವಿಷ್ಯ
ಇದಕ್ಕೂ ಮುನ್ನ, ಮಾರ್ಚ್ 6 ರಂದು, ಕರ್ನಾಟಕ ಕಾಂಗ್ರೆಸ್ ಘಟಕದ ಅಧ್ಯಕ್ಷ ಡಿಕೆ ಶಿವಕುಮಾರ್ ಮುಂಬರುವ ಚುನಾವಣೆಯಲ್ಲಿ ತಮ್ಮ ಪಕ್ಷವು ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದಾರೆ. ಆಡಳಿತಾರೂಢ ಬಿಜೆಪಿ 65 ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎಂದೂ ಅವರು ಭವಿಷ್ಯ ನುಡಿದಿದ್ದಾರೆ.

ಬಿಜೆಪಿ 65 ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯುವುದಿಲ್ಲ
'ಚುನಾವಣೆಯಲ್ಲಿ ನಾವು ಉತ್ತಮ ಸಂಖ್ಯೆಯನ್ನು ಗಳಿಸುವ ವಿಶ್ವಾಸ ಹೊಂದಿದ್ದೇವೆ. ಬಿಜೆಪಿ 65 ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯುವುದಿಲ್ಲ ಎಂದು ನಮಗೆ ತಿಳಿದಿದೆ. ನನ್ನ ಮೂಲಗಳಿಂದ ನಾನು ಸಂಗ್ರಹಿಸಿದ ಮಾಹಿತಿಗಳ ಪ್ರಕಾರ, ಬಿಜೆಪಿಯ ಸಂಖ್ಯೆಯು 40 ಸ್ಥಾನಗಳಿಗೆ ಇಳಿಯಬಹುದು' ಎಂದೂ ಶಿವಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

75 ರಷ್ಟು ಸೀಟು ಹಂಚಿಕೆ ಅಂತಿಮ
ಈ ಬಾರಿ ಬಿಜೆಪಿ 65ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯುವುದಿಲ್ಲ ಎಂದು ರೈತರು ಸೇರಿದಂತೆ ತಮ್ಮ ರಾಜ್ಯದ ಎಲ್ಲಾ ಜನರು ಹೇಳುತ್ತಿದ್ದಾರೆ ಎಂದು ಶಿವಕುಮಾರ್ ಹೇಳಿದ್ದಾರೆ. 75 ರಷ್ಟು ಸೀಟು ಹಂಚಿಕೆಯನ್ನು ನಾವು ಬಹುತೇಕ ಅಂತಿಮಗೊಳಿಸಿದ್ದೇವೆ. ಅಭ್ಯರ್ಥಿಗಳ ಹೆಸರನ್ನು ಹೈಕಮಾಂಡ್‌ಗೆ ಕಳುಹಿಸಿದ ನಂತರ ಎಲ್ಲಾ ಸ್ಥಾನಗಳ ಬಗ್ಗೆ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದೇನು?
ಮಾರ್ಚ್ 2 ರಂದು ಎಎನ್‌ಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಅಧಿಕಾರವನ್ನು ಕಸಿದುಕೊಳ್ಳುವ ಕಾಂಗ್ರೆಸ್‌ನ ಪ್ರಯತ್ನ ಯಶಸ್ವಿಯಾಗುವುದಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಸರಿಯಾಗಿ ಆಡಳಿತ ನಡೆಸಿಲ್ಲ
ಚುನಾವಣೆಯಲ್ಲಿ ಕಾಂಗ್ರೆಸ್‌ನ ನಿರೀಕ್ಷೆಗಳ ಕುರಿತು ಮಾತನಾಡಿರುವ ಬೊಮ್ಮಾಯಿ, 'ಹಳೆಯ ಪಕ್ಷವು ಚುನಾವಣೆಯಲ್ಲಿ ಗೆಲ್ಲಲು ಹತಾಶ ಪ್ರಯತ್ನವನ್ನು ಮಾಡುತ್ತಿದೆ. ಆದರೆ ಅಧಿಕಾರದಲ್ಲಿದ್ದಾಗ ಅವರು ಸರಿಯಾಗಿ ಆಡಳಿತ ನಡೆಸಿಲ್ಲ. ಅವರ ಕಳಪೆ ಗುಣಮಟ್ಟದ ಆಡಳಿತವನ್ನು ರಾಜ್ಯಕ್ಕೆ ನೀಡಿದ್ದಾರೆ. ಅವರೆಂದೂ ಯಶಸ್ವಿಯಾಗುವುದಿಲ್ಲ' ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ತನ್ನ ಅಧಿಕಾರಾವಧಿಯಲ್ಲಿ ಜನರಿಗೆ ಏನನ್ನೂ ಮಾಡಲಿಲ್ಲ ಮತ್ತು ಸಮಾಜದಲ್ಲಿ ಒಡಕು ಮೂಡಿಸುವ ಕೆಲಸ ಮಾಡಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಎಸ್‌ಸಿ, ಎಸ್‌ಟಿಗಳಿಗೆ ಏನನ್ನೂ ಮಾಡಿಲ್ಲ
‘ಎಸ್‌ಸಿ, ಎಸ್‌ಟಿಗಳಿಗೆ ಏನನ್ನೂ ಮಾಡಿಲ್ಲ. ಅದಕ್ಕಾಗಿಯೇ ಅವರು ಆಡಳಿತದಿಲ್ಲಿ ಇಲ್ಲ. ಇದೀಗ ಈಡೇರಿಸಲು ಅಸಾಧ್ಯವಾದ ಭರವಸೆಗಳನ್ನು ನೀಡಿ ಅಧಿಕಾರ ಕಸಿದುಕೊಳ್ಳಲು ಯತ್ನಿಸುತ್ತಿದ್ದಾರೆ. ಪ್ರತಿ ಮನೆಗೆ ₹2 ಸಾವಿರ ನೀಡುವುದಾಗಿ ಹೇಳುತ್ತಿದ್ದಾರೆ. ಅದಕ್ಕಾಗಿ ಅವರಿಗೆ ₹ 24,000 ಸಾವಿರ ಕೋಟಿ ಬೇಕು. ಅವರು ಈ ದೊಡ್ಡ ಮೊತ್ತವನ್ನು ಹೇಗೆ ಸಂಗ್ರಹಿಸುತ್ತಾರೆ? ಕಾಂಗ್ರೆಸ್ ಚುನಾವಣೆಯಲ್ಲಿ ಗೆಲ್ಲಲು ಹತಾಶ ಯತ್ನಗಳನ್ನು ನಡೆಸುತ್ತಿದೆ. ಅದಕ್ಕಾಗಿಯೇ ಅವರು ಇಂತಹ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ' ಎಂದು ಬೊಮ್ಮಾಯಿ ಹೇಳಿದ್ದಾರೆ.












Click it and Unblock the Notifications