Karnataka Elections 2023: ಮೇಲುಕೋಟೆಯಲ್ಲಿ ಮತ್ತೆ ದರ್ಶನ್ ಪುಟ್ಟಣ್ಣಯ್ಯರನ್ನು ಬೆಂಬಲಿಸಲು ಕಾಂಗ್ರೆಸ್ ನಿರ್ಧಾರ
ಬೆಂಗಳೂರು, ಮಾರ್ಚ್ 28: ಕರ್ನಾಟಕ ವಿಧಾನಸಭೆ ಚುನಾವಣೆಗೆ ( Karnataka Assembly Elections 2023 ) ಕೆಲ ದಿನಗಳು ಬಾಕಿ ಉಳಿದಿವೆ. ಇದೇ ವಾರ ಚುನಾವಣಾ ದಿನಾಂಕಗಳನ್ನು ಪ್ರಕಟಿಸಲು ಕೇಂದ್ರ ಚುನಾವಣೆ ಆಯೋಗ ( Election Commission of India ) ಸಿದ್ದತೆ ನಡೆಸಿದೆ. ಜೆಡಿಎಸ್ ( JDS ) ಹಾಗೂ ಕಾಂಗ್ರೆಸ್ ( Congress ) ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಆಡಳಿತಾರೂಢ ಬಿಜೆಪಿ ( BJP ) ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಬೇಕಿದೆ.
ಇಂತಹ ಸಂದರ್ಭದಲ್ಲಿ ರಾಜ್ಯ ರಾಜಕಾರಣದಲ್ಲಿ ಹಲವು ಪ್ರಮುಖ ಬೆಳವಣಿಗೆಗಳು ನಡೆಯುತ್ತಿವೆ. ಪಕ್ಷಾಂತರ ಪರ್ವವೂ ಜೋರಾಗಿ ಸಾಗಿದೆ. ಬಿಜೆಪಿ ಹಾಗೂ ಜೆಡಿಎಸ್‌ನಿಂದ ಪ್ರಮುಖ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಕೈ ಪಾಳಯಕ್ಕೆ ಸೇರ್ಪಡೆಗೊಂಡಿರುವ ಬೇರೆ ಪಕ್ಷಗಳ ಬಹುತೇಕ ಶಾಸಕರಿಗೆ ಟಿಕೆಟ್ ಸಿಗುವುದು ನಿಚ್ಚಳವಾಗಿದೆ.

ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಪೈಪೋಟಿ ಇದೆ. ಮುಂಬೈ ಕರ್ನಾಟಕದಲ್ಲೂ ಎರಡೂ ರಾಷ್ಟ್ರೀಯ ಪಕ್ಷಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಕರಾವಳಿಯಲ್ಲಿಯೂ ಬಿಜೆಪಿ ಹಾಗೂ ಕಾಂಗ್ರೆಸ್ ಎದುರಾಳಿಗಳಾಗಿವೆ. ಮಧ್ಯ ಕರ್ನಾಟಕದಲ್ಲಿ ಬಹುತೇಕ ಇದೇ ಪರಿಸ್ಥಿತಿ ಇದೆ. ಆದರೆ, ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಸ್ಪರ್ಧೆ ಏರ್ಪಡಲಿದೆ.
ಇನ್ನು ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ದಿವಂಗತ ರೈತ ಮುಖಂಡರಾದ ಕೆಎಸ್ ಪುಟ್ಟಣ್ಣಯ್ಯ ಅವರ ಪುತ್ರ ದರ್ಶನ್ ಅವರನ್ನು ಕಾಂಗ್ರೆಸ್ ಮತ್ತೆ ಬೆಂಬಲಿಸುವುದು ಖಚಿತವಾಗಿದೆ. ಈ ಕುರಿತು ಬೆಂಗಳೂರಿನಲ್ಲಿ ಕಾಂಗ್ರೆಸ್ ಮುಖಂಡರು ಚರ್ಚೆ ನಡೆಸಿದ್ದಾರೆ. ದರ್ಶನ್ ಪುಟ್ಟಣ್ಣಯ್ಯ ಅವರ ಜೊತೆಯೂ ಮಾತುಕತೆ ನಡೆಸಿದ್ದಾರೆ. ಮೇಲುಕೋಟೆಗೆ ಪಕ್ಷದ ಅಭ್ಯರ್ಥಿಯನ್ನು ನಿಲ್ಲಿಸದೇ ಇರಲು ಕಾಂಗ್ರೆಸ್ ತೀರ್ಮಾನಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಂಡ್ಯ ಜಿಲ್ಲೆಯ ಕಾಂಗ್ರೆಸ್ಸಿನ ಪ್ರಮುಖ ನಾಯಕರಾದ ಪಿಎಂ ನರೇಂದ್ರಸ್ವಾಮಿ ಹಾಗೂ ಚೆಲುವರಾಯಸ್ವಾಮಿ ಅವರು ದರ್ಶನ್ ಪುಟ್ಟಣ್ಣಯ್ಯ ಜೊತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ, ದರ್ಶನ್ ಪುಟ್ಟಣ್ಣಯ್ಯ ಅವರನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ರೈತ ನಾಯಕ ಪುಟ್ಟಣ್ಣಯ್ಯ ಅವರ ಪುತ್ರರಾಗಿರುವ ದರ್ಶನ್ ಅವರು ತಂದೆಯ ಮರಣಾ ನಂತರ ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಂಡರು. 2018 ರ ಚುನಾವಣೆಯಲ್ಲಿ ರೈತ ಸಂಘದ ಕರ್ನಾಟಕ ಸರ್ವೋದಯ ಪಕ್ಷದಿಂದ ಕಣಕ್ಕಿಳಿದಿದ್ದರು. ಆದರೆ, ಅವರು ಜೆಡಿಎಸ್ ಅಭ್ಯರ್ಥಿ ವಿರುದ್ಧ ಸೋಲು ಕಂಡರು. ಕಳೆದ ಬಾರಿಯ ಚುನಾವಣೆಯಲ್ಲಿಯೂ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ದರ್ಶನ್‌ರಿಗೆ ಬೆಂಬಲ ನೀಡಿತ್ತು.
ತಂದೆಯ ನಿಧನಕ್ಕೂ ಮೊದಲು ದರ್ಶನ್ ಪುಟ್ಟಣ್ಣಯ್ಯ ಅವರು ಯುಎಸ್‌ನಲ್ಲಿ ಸಂಸ್ಥೆಯೊಂದನ್ನು ಯಶಸ್ವಿಯಾಗಿ ನಡೆಸುತ್ತಿದ್ದರು. ಅವರ ತಂದೆ ಮರಣದಿಂದಾಗ ಬೆಳವಣಿಗೆಗಳು ದರ್ಶನ್ ಅವರನ್ನು ಮೇಲುಕೋಟೆಗೆ ಕರೆ ತಂದವು. ಪುಟ್ಟಣ್ಣಯ್ಯ ಅವರು ಕರ್ನಾಟಕ ರಾಜ್ಯ ರೈತ ಸಂಘದ ಏಕೈಕ ಶಾಸಕರಾಗಿದ್ದರು. ಈ ಪಕ್ಷವನ್ನು ಯೋಗೇಂದ್ರ ಯಾದವ್ ಅವರ ಸ್ವರಾಜ್ ಅಭಿಯಾನದೊಂದಿಗೆ ವಿಲೀನಗೊಳಿಸಲಾಯಿತು.
ಪುಟ್ಟಣ್ಣಯ್ಯ ನಿಧನದ ನಂತರ ದರ್ಶನ್ ಅವರನ್ನು ಮೇಲುಕೋಟೆ ಕ್ಷೇತ್ರದಿಂದ ಚುನಾವಣೆಗೆ ( 2018 ರಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುಣಾವಣೆ ) ಸ್ಪರ್ಧಿಸುವಂತೆ ಒತ್ತಾಯಿಸಿದರು. ಅದಕ್ಕೆ ದರ್ಶನ್ ಒಪ್ಪಿಕೊಂಡರು. ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ದರ್ಶನ್ 15 ವರ್ಷಕ್ಕೂ ಹೆಚ್ಚು ಕಾಲ ಅಮೆರಿಕದಲ್ಲಿ ನೆಲೆಸಿದ್ದರು. ಡೆನ್ವರ್ ಮೂಲದ ಅಪ್ಲಿಕೇಶನ್ ಅಭಿವೃದ್ಧಿ, ದುಬೈ ಮತ್ತು ಭಾರತದಲ್ಲಿನ IT ಸೇವೆಗಳ ಪೂರೈಕೆದಾರರಾದ Qwinix ಟೆಕ್ನಾಲಜೀಸ್‌ನ ಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಸೇವೆ ಸಲ್ಲಿಸಿದ್ದಾರೆ.












Click it and Unblock the Notifications