Karnataka Elections: ರಾಜ್ಯದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿ, ಸರ್ಕಾರಿ ಹುದ್ದೆಗಳ ಭರ್ತಿ: ಬೆಳಗಾವಿಯಲ್ಲಿ ರಾಹುಲ್ ಭರವಸೆ
ಬೆಳಗಾವಿಯಲ್ಲಿ ನಡೆದ ಯುವ ಕ್ರಾಂತಿ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಗವಹಿಸಿ ಮಾತನಾಡಿದರು.
ಬೆಳಗಾವಿ, ಮಾರ್ಚ್ 20: ಬೆಳಗಾವಿಯಲ್ಲಿ ನಡೆದ ಯುವ ಕ್ರಾಂತಿ ಸಮಾವೇಶದಲ್ಲಿ ಕಾಂಗ್ರೆಸ್ ( Congress ) ನಾಯಕ ರಾಹುಲ್ ಗಾಂಧಿ ( Rahul Gandhi ) ಭಾಗವಹಿಸಿ ಮಾತನಾಡಿದರು. ಈ ವೇಳೆ ಆಡಳಿತಾರೂಢ ಬಿಜೆಪಿ ( BJP ) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 40 ಪರ್ಸೆಂಟ್ ಸರ್ಕಾರ ಕರ್ನಾಟಕದ ( Karnataka ) ಯುವಜನರ ವೃತ್ತಿ ಜೀವನವನ್ನು ಹಾಳುಮಾಡಿದೆ ಎಂದು ಕಿಡಿಕಾರಿದರು.
ಬೆಳಗಾವಿಯಲ್ಲಿ ನೆರೆದಿದ್ದ ಲಕ್ಷಾಂತರ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, 'ನಾನು ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಾಗ ಒಂದು ವಿಚಾರವನ್ನು ಅರಿತುಕೊಂಡೆ. ಇಲ್ಲಿ ನಿರುದ್ಯೋಗ ಸಮಸ್ಯೆಯು ಯುವಕರನ್ನು ಕಾಡುತ್ತಿದೆ. ಭ್ರಷ್ಟ ಬಿಜೆಪಿ ಸರ್ಕಾರ ನಿರುದ್ಯೋಗ ಸಮಸ್ಯೆಯನ್ನು ಸೃಷ್ಟಿಸಿದೆ. ಇದನ್ನು ಅರ್ಥಮಾಡಿಕೊಳ್ಳಲು ನಾನು ಸಾವಿರಾರು ಯುವಕರೊಂದಿಗೆ ಮಾತನಾಡಿದ್ದೆ' ಎಂದು ಅವರು ಆರೋಪಿಸಿದರು.

'ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಮುಂದಿನ ಐದು ವರ್ಷಗಳ ಅವಧಿಯಲ್ಲಿ 10 ಲಕ್ಷ ಉದ್ಯೋಗಗಳನ್ನು ನೀಡುತ್ತೇವೆ. ನಾವು ಅಧಿಕಾರಕ್ಕೆ ಬಂದರೆ ಸರ್ಕಾರಿ ವಲಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ' ಎಂದು ಯುವಕರಿಗೆ ರಾಹುಲ್ ಭರವಸೆ ನೀಡಿದರು.
ರಾಜ್ಯದ ನಿರುದ್ಯೋಗಿ ಯುವಕರಿಗಾಗಿ 'ಯುವ ನಿಧಿ' ಯೋಜನೆಯನ್ನು ನಮ್ಮ ಸರ್ಕಾರ ಹಮ್ಮಿಕೊಳ್ಳಲಿದೆ ಎಂದು ರಾಹುಲ್ ಹೇಳಿದರು.
'ಚುನಾವಣೆಯಲ್ಲಿ ಗೆದ್ದ ನಂತರ ಯುವ ನಿಧಿ ಯೋಜನೆಯನ್ನು ತಕ್ಷಣವೇ ರಾಜ್ಯದಲ್ಲಿ ಜಾರಿಗೆ ತರಲಾಗುವುದು. ಪದವಿ ಪಡೆದಿರುವ ನಿರುದ್ಯೋಗಿಗಳಿಗೆ 3000 ರೂ. ನೀಡಲಾಗುತ್ತದೆ. ಡಿಪ್ಲೋಮಾ ಹೊಂದಿರುವ ನಿರುದ್ಯೋಗಿಗಳಿಗೆ 1500 ರೂ. ಗಳನ್ನು ನೀಡಲಾಗುತ್ತದೆ. ಇದು ಎರಡು ವರ್ಷಗಳ ವರೆಗೆ ಮುಂದುವರಿಯುತ್ತದೆ' ಎಂದೂ ಅವರು ಘೋಷಿಸಿದರು.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನ ಕರ್ನಾಟಕದ ಯಾವುದೇ ಜಿಲ್ಲೆಯಲ್ಲಿ ಪ್ರವಾಸ ಮಾಡಲು ಸಿದ್ಧ ಎಂದು ರಾಹುಲ್ ಗಾಂಧಿ ತಿಳಿಸಿದರು.
'ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇರುವುದನ್ನು ನಾನು ಈಗಾಗಲೇ ಗಮನಿಸಿದ್ದೇನೆ. ರಾಜ್ಯ ಘಟಕ ಬಯಸಿದರೆ ಕರ್ನಾಟಕದ ಯಾವುದೇ ಜಿಲ್ಲೆಯಲ್ಲಿ ಪ್ರವಾಸ ಮಾಡಲು ಸಿದ್ಧನಿದ್ದೇನೆ. ಭ್ರಷ್ಟ ಬಿಜೆಪಿ ಸರಕಾರವನ್ನು ಕಿತ್ತೊಗೆಯಲಿದ್ದೇವೆ' ಎಂದು ಅವರು ಹೇಳಿದರು.
'ಕರ್ನಾಟಕದಲ್ಲಿನ ಬಿಜೆಪಿ ಸರ್ಕಾರ ದೇಶದ ಅತ್ಯಂತ ಭ್ರಷ್ಟ ಸರ್ಕಾರ ಎಂದು ಎಲ್ಲ ವರ್ಗದ ಜನ ಹೇಳುತ್ತಿದ್ದಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಪ್ರಧಾನಿಗಳಿಗೆ ಪತ್ರ ಬರೆದು ರಾಜ್ಯದಲ್ಲಿ 40 ಪರ್ಸೆಂಟ್ ಕಮಿಷನ್ ಪಡೆಯಲಾಗುತ್ತಿದೆ ಎಂದು ದೂರಿದ್ದಾರೆ. ಆದರೂ ಪ್ರಧಾನಿಗಳು ಈ 40 ಪರ್ಸೆಂಟ್ ಕಮಿಷನ್ ಸರ್ಕಾರದ ಬಗ್ಗೆ ಮಾತನಾಡುತ್ತಿಲ್ಲ' ಎಂದೂ ರಾಹುಲ್ ತಿಳಿಸಿದರು.

'ಭಾರತ ಜೋಡೋ ಯಾತ್ರೆ ಕರ್ನಾಟಕದ ಮೂಲಕ ಸಾಗಿದ ಸಂದರ್ಭದಲ್ಲಿ ಅಭೂತಪೂರ್ವ ಬೆಂಬಲ ನೀಡಿ ಯಾತ್ರೆ ಯಶಸ್ಸುಗೊಳಿಸಿದ್ದಿರ. ಅದಕ್ಕಾಗಿ ಕರ್ನಾಟಕದ ಜನತೆಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ದೇಶ ಯಾರೋ ಒಬ್ಬರ ಸ್ವತ್ತಲ್ಲ, ಅಧಾನಿ ಅವರ ಸ್ವತ್ತೂ ಅಲ್ಲ. ಈ ದೇಶ ರೈತರು, ಯುವಕರು, ಬಡವರು ಸೇರಿದಂತೆ ಎಲ್ಲರಿಗೂ ಸೇರಿದ್ದು ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, 'ನಾನು ಎಐಸಿಸಿ ಅಧ್ಯಕ್ಷನಾದ ನಂತರ ಮೊದಲ ಬಾರಿಗೆ ಬೆಳಗಾವಿಯ ಪವಿತ್ರ ಭೂಮಿಯ ಮೇಲೆ ಕಾಲಿಟ್ಟಿದ್ದೇನೆ. ಮಹಾತ್ಮಾ ಗಾಂಧೀಜಿ ಅವರು ಇದೇ ನೆಲದಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಚುನಾಯಿತರಾಗಿದ್ದರು. ತಾವೆಲ್ಲರೂ ಸೇರಿ ಈಗ ನನ್ನನ್ನು ಅದೇ ಸ್ಥಾನದಲ್ಲಿ ಕೂರಿಸಿದ್ದೀರಿ, ಅದಕ್ಕಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ' ಎಂದು ತಿಳಿಸಿದರು.
'ಒಂದು ಕಾಲದಲ್ಲಿ ಬೆಳಗಾವಿ ಕಾಂಗ್ರೆಸ್‌ಗೆ ಶಕ್ತಿ ತುಂಬಿದ್ದ ಜಿಲ್ಲೆ. ಇಲ್ಲಿ ನಾವು 15 - 16 ಕ್ಷೇತ್ರಗಳಲ್ಲಿ ಗೆಲ್ಲುತ್ತಿದ್ದೇವು. ಇಂದು ಇಲ್ಲಿ ಸೇರಿರುವ ಜನರು, ಮುಖಂಡರ ಒಗ್ಗಟ್ಟು ನೋಡಿದರೆ ಮುಂಬರುವ ಚುನಾವಣೆಯಲ್ಲಿ 18ಕ್ಕೆ 18 ಸ್ಥಾನಗಳಲ್ಲೂ ಗೆಲ್ಲಿಸುತ್ತೀರಿ ಎಂದು ನಂಬುತ್ತೇನೆ. ಈ ಬಾರಿ ವಾತಾವರಣವೂ ಅದಕ್ಕೆ ಪೂರಕವಾಗಿದೆ' ಎಂದು ಹೇಳಿದರು.
'ಕರ್ನಾಟಕದಲ್ಲಿ ಯಾವ ಕಾಲದಲ್ಲೂ ಇಷ್ಟೊಂದು ಭ್ರಷ್ಟಾಚಾರ, ದುರಾಡಳಿತ ಇರಲಿಲ್ಲ. ಆದರೆ ಈಗ ಬಿಜೆಪಿ ಸರ್ಕಾರದಲ್ಲಿ 40 ಪರ್ಸೆಂಟ್ ಕಮಿಷನ್ ನಡೆಯುತ್ತಿದೆ, ಹೀಗೆಂದು ಹೇಳಿದ್ದು ಸ್ವತಃ ಈ ಸಮಸ್ಯೆ ಎದುರಿಸುತ್ತಿರುವ ಗುತ್ತಿಗೆದಾರರು. ಅವರು ನೇರವಾಗಿ ಪ್ರಧಾನಮಂತ್ರಿಗಳಿಗೆ, ಅಮಿತ್ ಶಾ ಅವರಿಗೇ ಪತ್ರ ಬರೆದು 40 ಪರ್ಸೆಂಟ್ ಕಮಿಷನ್ ಬಗ್ಗೆ ದೂರಿದ್ದಾರೆ' ಎಂದು ತಿಳಿಸಿದರು.












Click it and Unblock the Notifications