Karnataka Elections 2023: ಈ ಪಕ್ಷದೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡ ಕಾಂಗ್ರೆಸ್
ಕರ್ನಾಟಕದಲ್ಲಿ 2023ರ ವಿಧಾನಸಭೆ ಚುನಾವಣೆಯ ರಣಕಹಳೆ ಮೊಳಗಿದ್ದು, ರಾಜ್ಯದ 224 ಕ್ಷೇತ್ರಗಳಿಗೆ ಮೇ 10ರಂದು ನಡೆಯುವ ಚುನಾವಣೆಯಲ್ಲಿ ಗೆಲುವು ಸಾಧಿಸಲು ಅಭ್ಯರ್ಥಿಗಳು ಸೇರಿದಂತೆ, ಎಲ್ಲ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಮತದಾರರ ಓಲೈಕೆಗೆ ಮುಂದಾಗಿದ್ದಾರೆ.
ಇದೇ ವೇಳೆ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಸಿಪಿಐ ಪಕ್ಷಗಳು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿವೆ. ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಮತ್ತು ಸಿಪಿಐ ಪಕ್ಷಗಳು ಮೈತ್ರಿಯನ್ನು ಅಧಿಕೃತವಾಗಿ ಘೋಷಿಸಿದವು.

ಈ ವೇಳೆ ಮಾತನಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ, "ಸಿಪಿಐ ಪಕ್ಷಕ್ಕೆ ತುಂಬಾ ಇತಿಹಾಸ ಇದೆ. ಸಾಮಾಜಿಕ ನ್ಯಾಯ, ಕಾರ್ಮಿಕ, ಬಡವರ ಶೋಷಿತರ ಪರ ಹೋರಾಟ ಮಾಡುತ್ತಾ ಬಂದಿದೆ," ಎಂದು ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರದ ದುರಾಡಳಿತ, 40 ಪರ್ಸೆಂಟ್ ಕಮಿಷನ್ ಮತ್ತು ಬಿಜೆಪಿಯ ಕೋಮುವಾದಿತನದ ವಿರುದ್ಧ ಕಾಂಗ್ರೆಸ್ ಹೋರಾಟಕ್ಕೆ ಸಿಪಿಐ ಬೆಂಬಲ ನೀಡಲಿದೆ. 215 ಕ್ಷೇತ್ರಗಳಲ್ಲಿ ಯಾವುದೇ ಷರತ್ತು ಇಲ್ಲದೆ ಬೆಂಬಲ ನೀಡುತ್ತಿದೆ ಎಂದು ರಣದೀಪ್ ಸುರ್ಜೇವಾಲ ಮಾಹಿತಿ ನೀಡಿದರು.
ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲಿ ಸಿಪಿಐ ಸ್ಪರ್ಧೆ ಮಾಡುತ್ತಿದೆ. ಉಳಿದ 215 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಿಪಿಐ ಬೆಂಬಲಿಸಲಿದೆ ಎಂದು ರಣದೀಪ್ ಸುರ್ಜೇವಾಲ ಹೇಳಿದ್ದಾರೆ.

ಎರಡೂ ಪಕ್ಷಗಳ ಉದ್ದೇಶ ಒಂದೇ
"ಕಾಂಗ್ರೆಸ್ ಮತ್ತು ಸಿಪಿಐ ನಡುವಿನ ಚುನಾವಣಾ ಪೂರ್ವ ಮೈತ್ರಿಯಾದ ಈ ದಿನ ಐತಿಹಾಸಿಕ ದಿನವಾಗಿದೆ. ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಕೂಡ ಹಲವು ಹೋರಾಟಗಳನ್ನು ಮಾಡಿದೆ. ಕಾರ್ಮಿಕರ ಸಮಸ್ಯೆಗಳ ಬಗ್ಗೆ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಬೆಲೆ ಏರಿಕೆ, ಭ್ರಷ್ಟಾಚಾರ ಸೇರಿದಂತೆ ಅನೇಕ ವಿಚಾರಗಳಿಗೆ ಸಿಪಿಐ ಹೋರಾಟ ಮಾಡುತ್ತಲೇ ಬಂದಿದೆ," ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ತಿಳಿಸಿದರು.
ಕಾಂಗ್ರೆಸ್ ಮತ್ತು ಸಿಪಿಐ ಪಕ್ಷಗಳ ಉದ್ದೇಶ ಒಂದೇ ಆಗಿದೆ. ಹೀಗಾಗಿ ಸಿಪಿಐ ಪಕ್ಷದ ಮುಖಂಡರ ಜೊತೆ ಮಾತುಕತೆ ನಡೆಸಿದ್ದು, ಇಬ್ಬರೂ ಸೇರಿ ಒಂದು ತೀರ್ಮಾನಕ್ಕೆ ಬಂದು ಈ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದು ರಣದೀಪ್ ಸುರ್ಜೇವಾಲಾ ಹೇಳಿದರು.
ಬಿಜೆಪಿ ವಿರುದ್ಧ ಕಮಿಷನ್ ಆರೋಪ ಮಾಡಿದ ಸಿಪಿಐ
ಇನ್ನು ಕರ್ನಾಟಕದಲ್ಲಿ ಚುನಾವಣಾ ಪೂರ್ವ ಮೈತ್ರಿ ಬಗ್ಗೆ ಮಾತನಾಡಿದ ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್, "ದೇಶದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದಾರೆ. ಅಭಿವೃದ್ಧಿ ಮತ್ತು ಕಾಮಗಾರಿ ಹೆಸರಿನಲ್ಲಿ 40 ಪರ್ಸೆಂಟ್ ಕಮಿಷನ್ ಆರೋಪವನ್ನು ಗುತ್ತಿಗೆದಾರರೇ ಮಾಡಿದ್ದಾರೆ. ಕೋಮು ಗಲಭೆಯಲ್ಲಿ ಸಾವು ಸಂಭವಿಸಿದರೆ, ಪರಿಹಾರ ನೀಡುವುದರಲ್ಲಿಯೂ ಬಿಜೆಪಿ ಸರ್ಕಾರ ತಾರತಮ್ಯ ಮಾಡಿದೆ," ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
"ಧರ್ಮದ ಹೆಸರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ತಾರತಮ್ಯ ಮಾಡಿದೆ. ಗೋ ಹತ್ಯೆ ಮತ್ತು ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡುವ ಮೂಲಕ ಮತೀಯವಾದ ಹೆಚ್ಚಿಸಿದ್ದಾರೆ. ಜನ ವಿರೋಧಿ ಬಿಜೆಪಿಯನ್ನು ಸೋಲಿಸುವುದು ನಮ್ಮ ಉದ್ದೇಶವಾಗಿದೆ. ಮುಂದಿನ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆ ತಡೆಯಲು ಸಿಪಿಐ ಪಕ್ಷ ಕಾಂಗ್ರೆಸ್‌ಗೆ ಬೆಂಬಲ ನೀಡಲಿದೆ," ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ತಿಳಿಸಿದರು.
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ನಾಮಪತ್ರ ಸಲ್ಲಿಕೆ ಮತ್ತು ಪರಿಶೀಲನೆ ಪ್ರಕ್ರಿಯೆ ಮುಕ್ತಾಯವಾಗಿದೆ. ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದರೆ, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಮಧ್ಯೆ ನಾಮಪತ್ರ ವಾಪಸ್ ಪಡೆಯಲು ನಾಳೆ (ಏಪ್ರಿಲ್ 24) ಕೊನೆಯ ದಿನಾವಾಗಿದೆ.












Click it and Unblock the Notifications